ಆಸ್ಪತ್ರೆಯಲ್ಲಿ ಹೆರಿಗೆ ಸುರಕ್ಷಿತ: ಡಾ. ಕೇರೂರ
ಶಿಗ್ಗಾಂವಿ: ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸುವುದು ತಾಯಿ ಹಾಗೂ ಮಗು ಇಬ್ಬರ ಜೀವಕ್ಕೂ ಕ್ಷೇಮ ಎಂದು ಡಾ ಎಂ.ಎನ್. ಕೇರೂರ ಹೇಳಿದರು.
ತಾಲೂಕಿನ ಹಿರೆಬೆಂಡಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ತಾಯಿ ಮತ್ತು ಶಿಶು ಮರಣ, ಆರೋಗ್ಯ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು, ಗರ್ಭಿಣಿಯರಿಗೆ ಸರ್ಕಾರದಿಂದ ಆಸ್ಪತ್ರೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷ ಫಕ್ಕೀರಪ್ಪ ಸಂಗಣ್ಣವರ ಕಾರ್ಯಕ್ರಮ ಉದ್ಘಾಟಿಸಿ, ಮನೆಗಳಲ್ಲಿ ಹೆರಿಗೆಗೆ ಕಾಯದೆ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಸುರಕ್ಷಿತ ಹೆರಿಗೆ ಸಾಧ್ಯ ಎಂದರು.
ಆರೋಗ್ಯ ಸಹಾಯಕ ಕೆ.ಎಸ್. ಕುಂದಗೋಳ ಮಾತನಾಡಿ, ಪ್ರತಿ ತಿಂಗಳು ಗರ್ಭಿಣಿಯರ ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ ಸೇವನೆ, ತಾಯಿ ಎದೆ ಹಾಲಿನಿಂದ ಮಕ್ಕಳಿಗಾಗುವ ಲಾಭ, ಲಸಿಕೆ ಕಾರ್ಯಕ್ರಮಗಳು ಹಾಗೂ ತಾಯಿ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು.
ಶಾರದಾ ಕಣವಿ ನಿರೂಪಿಸಿದರು. ಸಿ.ಬಿ. ಅಳಗವಾಡಿ ಸ್ವಾಗತಿಸಿದರು. ಸಾವಕ್ಕ ಭಂಗಿ, ಸಂಗಡಿಗರು ಪ್ರಾರ್ಥಿಸಿದರು. ಚಂಪಾ ಸಾತಣ್ಣವರ ವಂದಿಸಿದರು. ಗ್ರಾಮಸ್ಥರು ಕಾರ್ಯಕ್ರಮದ ಪ್ರಯೋಜನ ಪಡೆದರು.