ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕೆಜೆಪಿ ವಿಲೀನಕ್ಕೂ ಹಾವೇರಿ ಸಾಕ್ಷಿ?

Lingaraj Badiger
Updated On : 31 Dec 2013, 1:35 am

ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 30
ಬಿಜೆಪಿಯೊಂದಿಗೆ ಮುನಿಸಿಕೊಂಡ ಮಾಜಿ ಸಿಎಂ ಯಡಿಯೂರಪ್ಪನವರು ಅಂದು ಹಾವೇರಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡು ಕೆಜೆಪಿಯನ್ನು ಸ್ಥಾಪಿಸಿದ್ದರು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಈಗ ಕೆಜೆಪಿಯು ಬಿಜೆಪಿಯಲ್ಲಿ ವಿಲೀನವಾಗುವ ಮಾತು ಕೇಳಿಬರುತ್ತಿದೆ. ಒಡೆದ ಮನಸ್ಸು ಒಂದಾಗಲು ಮತ್ತೆ ಹಾವೇರಿ ವೇದಿಕೆಯಾಗಲಿದೆ ಎನ್ನಲಾಗುತ್ತಿದೆ.
ಒಂದು ವೇಳೆ ಹೀಗೆ ನಡೆದರೆ ಒಂದು ಪಕ್ಷದ ಹುಟ್ಟು ಹಾಗೂ ಸಾವಿಗೆ ಹಾವೇರಿ ಸಾಕ್ಷಿಯಾಗಲಿದೆ. 2012, ಡಿ. 9ರಂದು ಹಾವೇರಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡು ಕೆಜೆಪಿಗೆ ಅಧಿಕೃತ ಚಾಲನೆ ನೀಡಲಾಗಿತ್ತು. ರಾಜ್ಯ ರಾಜಕಾರಣದಲ್ಲಿ ಈ ಸಮಾವೇಶ ಹೊಸ ಬಿರುಗಾಳಿಯನ್ನೇ ಎಬ್ಬಿಸಿತ್ತು. ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ನಿರೀಕ್ಷಿತ ಯಶಸ್ಸು ಗಳಿಸದಿದ್ದರೂ ಬಿಜೆಪಿಯ ಶಕ್ತಿಗುಂದಲು ಕಾರಣವಾಗಿದ್ದಂತೂ ಸ್ಪಷ್ಟ. ಇದರಿಂದ ಈಗ ಎಚ್ಚೆತ್ತುಕೊಂಡಿರುವ ಬಿಜೆಪಿ, ಕೆಜೆಪಿ ಉಭಯ ಪಕ್ಷಗಳ ನಾಯಕರು ಲೋಕಸಭೆ ಚುನಾವಣೆ ದೃಷ್ಟಿಯಿಂದ ಒಂದುಗೂಡಲು ವೇದಿಕೆ ಸಜ್ಜಾಗಿದೆ. ಮಾತೃ ಪಕ್ಷದೊಂದಿಗೆ ಕೆಜೆಪಿ ವಿಲೀನ ಸನ್ನಿಹಿತವಾಗಿದ್ದು, ಆ ಪ್ರಕ್ರಿಯೆ ಹಾವೇರಿಯಲ್ಲೇ ನಡೆಸಬೇಕು ಎಂಬುದು ಬಿಜೆಪಿಗೆ ತೆರಳಲು ಸಿದ್ಧವಾಗಿರುವ ಮುಖಂಡರ ಒತ್ತಾಯವಾಗಿದೆ.
ಮಾತೃ ಪಕ್ಷಕ್ಕೆ ತೆರಳುವ ಇಂಗಿತ
ಕೆಜೆಪಿ ಹಾವೇರಿ ಸಮಾವೇಶದ ಯಶಸ್ಸಿಗೆ ಜಿಲ್ಲೆಯ ಮುಖಂಡರ ಕೊಡುಗೆ ಅಪಾರವಾಗಿದೆ. ಸಿ.ಎಂ. ಉದಾಸಿ, ನೆಹರೂ ಓಲೇಕಾರ, ಶಿವರಾಜ ಸಜ್ಜನರ, ಜಿ.ಶಿವಣ್ಣ ಸೇರಿದಂತೆ ಜಿಲ್ಲೆಯ ನಾಯಕರು ಅನೇಕರು ಯಡಿಯೂರಪ್ಪನವರ ಬೆನ್ನಿಗೆ ನಿಂತು ಪಕ್ಷಕ್ಕೆ ಬಲ ತಂದುಕೊಟ್ಟಿದ್ದರು. ಇವರ ಹಿಂದೆ ಸ್ಥಳೀಯ ಮುಖಂಡರೂ ಕೆಜೆಪಿ ಸೇರಿದ್ದರು. ಇದರಿಂದ ಇಡೀ ಜಿಲ್ಲೆ ಕೆಜೆಪಿಮಯವಾಗಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು, ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಹವಾ ಕೆಲಸ ಮಾಡುತ್ತಿದೆ. ಆದ್ದರಿಂದ ಮತ್ತೆ ಮರಳಿ ಮಾತೃ ಪಕ್ಷಕ್ಕೆ ಸೇರುವ ಇಂಗಿತ ವ್ಯಕ್ತಪಡಿಸುತ್ತಿದ್ದು, ಮುಹೂರ್ತಕ್ಕಾಗಿ ಎದುರು ನೋಡುತ್ತಿದ್ದಾರೆ. ಅದೇ ರೀತಿ ಬಿಜೆಪಿಯವರೂ ಇವರ ಬರುವಿಕೆಗೆ ಕಾದು ಕುಳಿತಿದ್ದಾರೆ.
ಮತ್ತೆ ಹಾವೇರಿಯಲ್ಲಿ ಸಮಾವೇಶ
ಕೆಜೆಪಿ ಹುಟ್ಟಿಗೆ ಸಾಕ್ಷಿಯಾಗಿದ್ದ ಹಾವೇರಿ ಸಮಾವೇಶ ಈಗ ಇತಿಹಾಸ. ಕೆಜೆಪಿ ರಾಜ್ಯಾಧ್ಯಕ್ಷರಾಗಿರುವ ಮಾಜಿ ಸಿಎಂ ಯಡಿಯೂರಪ್ಪನವರೇ ಈಗ ಬಿಜೆಪಿಗೆ ಮರಳುವ ಸೂಚನೆ ನೀಡಿದ್ದಾರೆ.  ಅದಕ್ಕಾಗಿ ಜನವರಿ ತಿಂಗಳಲ್ಲಿ ಮುಹೂರ್ತ ಇಡಲು ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ. ಆದ್ದರಿಂದ ಈ ಹಿಂದೆ ಹಾವೇರಿಯಲ್ಲಿ ಯಶಸ್ವಿ ಸಮಾವೇಶಕ್ಕೆ ಕಾರಣರಾದವರು ಮತ್ತೆ ಇದೇ ನೆಲದಲ್ಲಿ ಸಮಾವೇಶ ಹಮ್ಮಿಕೊಂಡು ಬಿಜೆಪಿ ಜತೆ ವಿಲೀನವಾಗೋಣ ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಕುರಿತು ಮಾತುಕತೆಯನ್ನೂ ಆಡಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಸೂಕ್ತ ಪ್ರತಿಕ್ರಿಯೆ ದೊರೆತಿದೆ.
ಇಲ್ಲೇ ವಿಲೀನವಾಗಲಿ
ಕೆಜೆಪಿ ಹಾವೇರಿ ಸಮಾವೇಶದ ಯಶಸ್ಸಿಗೆ ಶ್ರಮಿಸಿದವರಲ್ಲಿ ಪ್ರಮುಖರಾದ ಮಾಜಿ ಶಾಸಕ ನೆಹರೂ ಓಲೇಕಾರ ಅವರನ್ನು ಕೇಳಿದಾಗ, ನಮ್ಮ ನಾಯಕ ಯಡಿಯೂರಪ್ಪನವರು ಬಿಜೆಪಿ ಸೇರುವ ಕುರಿತು ಈಗಾಗಲೇ ಅಭಿಪ್ರಾಯ ತಿಳಿಸಿದ್ದಾರೆ. ನಾವೂ ಅವರೊಂದಿಗೆ ಇದ್ದೇವೆ. ಶೀಘ್ರವೇ ಬಿಜೆಪಿ ಸೇರುವುದಂತೂ ನಿಜ. ಬಿಜೆಪಿಯಿಂದ ಹೊರಬಂದು ಕೆಜೆಪಿ ಹುಟ್ಟಿಗೆ ವೇದಿಕೆಯಾಗಿದ್ದ ಹಾವೇರಿಯಲ್ಲೇ ವಿಲೀನವೂ ಆಗಲಿ ಎಂಬುದು ನಮ್ಮ ಆಶಯವಾಗಿದೆ. ಆದ್ದರಿಂದ ಹಾವೇರಿಯಲ್ಲಿ ಸಮಾವೇಶ ಹಮ್ಮಿಕೊಳ್ಳಬೇಕು ಎಂಬ ಬೇಡಿಕೆ ಇಡಲಾಗಿದೆ. ದಾವಣಗೆರೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬ ಚಿಂತನೆಯೂ ನಡೆದಿದೆ. ಹಾವೇರಿಯಲ್ಲೇ ಕಾರ್ಯಕ್ರಮ ನಡೆಸಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಬಿಜೆಪಿಯೊಂದಿಗೆ ಕೆಜೆಪಿ ವಿಲೀನ ಪ್ರಕ್ರಿಯೆ ಸನ್ನಿಹಿತವಾಗಿದ್ದು, ಎರಡೂ ಪಕ್ಷಗಳ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಲು ಅಣಿಯಾಗುತ್ತಿದ್ದಾರೆ. ಒಂದೇ ವರ್ಷದಲ್ಲಿ ಈ ಎರಡೂ ಪಕ್ಷಗಳ ಏಳುಬೀಳನ್ನು ನೋಡಿದ ಜನತೆ ಈಗ ಮತ್ತೊಂದು ರಾಜಕೀಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕಾತರರಾಗಿದ್ದಾರೆ.
- ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement