ಪೈಪ್ ಒಡೆದು ನೀರು ಪೋಲು
ಹಾವೇರಿ: ನಗರದ ಲಕಮಾಪುರ ಬಡಾವಣೆಯಲ್ಲಿ ಕುಡಿವ ನೀರು ಪೂರೈಕೆ ಮಾಡುವ ಪೈಪ್ ಚರಂಡಿ ಮಧ್ಯದಲ್ಲಿ ಒಡೆದು ಪೋಲಾಗುತ್ತಿದ್ದು, ಇದರಿಂದ ನೀರು ಕಲುಷಿತಗೊಳ್ಳುತ್ತಿದೆ. ಚರಂಡಿ ಮಧ್ಯದಲ್ಲಿ ಪೈಪ್ ಒಡೆದಿದ್ದು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಪೂರೈಕೆಯಾಗುವ ನೀರು ಕಲುಷಿತಗೊಳ್ಳುತ್ತಿದೆ. ಈ ಬಗ್ಗೆ ಆ ವ್ಯಾಪ್ತಿಯ ನಗರಸಭೆ ಸದಸ್ಯ ಗುಡ್ಡನಗೌಡ್ರ ಅಂದಾನಿಗೌಡ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪದೇಪದೆ ಪೈಪ್ ಒಡೆಯುತ್ತಿದ್ದು, ನೀರು ಪೋಲಾಗುತ್ತಿದೆ. ಅಲ್ಲದೇ ಚರಂಡಿ ಮಧ್ಯದಲ್ಲಿ ಪೈಪ್ ಒಡೆದಿರುವುದರಿಂದ ಕಾಲೇಜಿಗೆ ಪೂರೈಕೆಯಾಗುವ ನೀರು ಸ್ಥಗಿತಗೊಂಡಿದೆ. ಪೈಪಿನಲ್ಲಿ ಚರಂಡಿ ನೀರು ಸೇರಿ ಕಲುಷಿತಗೊಳ್ಳುತ್ತಿದೆ. ಅನೇಕ ಬಾರಿ ಪೈಪ್ ದುರಸ್ತಿ ಮಾಡಿದರೂ ಯಾರೋ ಪೈಪ್ ಒಡೆಯುತ್ತಿದ್ದಾರೆ. ಆದ್ದರಿಂದ ಕಾಲೇಜಿಗೆ ಸಮೀಪದ ಮತ್ತೊಂದು ಕಡೆಯಿಂದ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಕಾಲೇಜಿನಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಪೈಪ್ ಒಡೆದದ್ದರಿಂದ ನೀರು ಬರುತ್ತಿಲ್ಲ. ಕಳಪೆ ಗುಣಮಟ್ಟದ ಪೈಪ್ ಹಾಕಿದ್ದರಿಂದ ಅದು ಒಡೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಕಾಲೇಜಿನವರು ಆರೋಪಿಸುತ್ತಿದ್ದಾರೆ. ನಗರಸಭೆ ಈ ಬಗ್ಗೆ ಗಮನ ನೀಡಿ ಒಡೆದಿರುವ ಪೈಪ್ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ತಾಪಂ ಅಧ್ಯಕ್ಷ ಸ್ಥಾನಕ್ಕೆ 3ರಂದು ಚುನಾವಣೆ
ಹಾವೇರಿ: ಹಾವೇರಿ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಜ. 3ರಂದು ಬೆಳಗ್ಗೆ 10 ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಚುನಾವಣೆ ಜರುಗಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಯಕುಮಾರ್ ತಿಳಿಸಿದ್ದಾರೆ. ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೈಕ್ ಸವಾರಗೆ ಗಾಯ
ಶಿಗ್ಗಾಂವಿ: ಖಾಸಗಿ ಬಸ್ಸೊಂದು ರಸ್ತೆಯನ್ನು ದಾಟುತ್ತಿರುವ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ತೀವ್ರ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಪಟ್ಟಣದ ಗಂಗೆಬಾವಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಹಾನಗಲ್ಲ ತಾಲೂಕಿನ ಯಳವಟ್ಟಿ ಗ್ರಾಮದ ಬೈಕ್ ಸವಾರ ಶಿವಲಿಂಗಪ್ಪ ಗದಿಗೇಪ್ಪ ಮನ್ನಂಗಿ ತೀವ್ರ ಗಾಯಗೊಂಡ ವ್ಯಕ್ತಿ. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.