ಶಿವಯೋಗೀಶ್ವರ ಶ್ರೀ ಪಟ್ಟಾಧಿಕಾರಕ್ಕೆ 15
ಹಾನಗಲ್ಲ: ಬಮ್ಮನಹಳ್ಳಿ ವಿರಕ್ತಮಠದ ಪೀಠಾಧಿಪತಿ ಶಿವಯೋಗೀಶ್ವರ ಸ್ವಾಮೀಜಿಗಳ ಪಟ್ಟಾಧಿಕಾರದ 15ನೇ ವರ್ಷಾಚರಣೆ ಪ್ರಯುಕ್ತ 20 ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಜನಜಾಗೃತಿ ಕಾರ್ಯಕ್ರಮಗಳ ಜೊತೆಗೆ, ವೃಕ್ಷ ದಾನವೂ ಸೇರಿ ಅರ್ಥಪೂರ್ಣವಾಗಿ ಆಚರಿಸಲು ಸನ್ನದ್ಧಗೊಂಡಿದ್ದು, ನಾಡಿನ ಧರ್ಮಗುರುಗಳು, ಗಣ್ಯರು, ಸಾಹಿತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ, ಜಿಪಂ ಸದಸ್ಯ ಪದ್ಮನಾಭ ಕುಂದಾಪುರ ತಿಳಿಸಿದರು.
ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿಯ ವಿರಕ್ತಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಯೋಗೀಶ್ವರ ಮಹಾಸ್ವಾಮಿಗಳವರ ಪಟ್ಟಾಧಿಕಾರದ 15ನೇ ವರ್ಷಾಚರಣೆ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಭಕ್ತರು ಆಶಿಸಿದ್ದಾರೆ. ಉತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಹುಬ್ಬಳ್ಳಿ ಮುರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮಾರ್ಗದರ್ಶನ ಮಾಡುವರು. ಹಾನಗಲ್ಲ ಶಾಸಕ ಮನೋಹರ ತಹಶೀಲ್ದಾರ ಸಮಿತಿಯ ಅಧ್ಯಕ್ಷರಾಗಿದ್ದು, ಅವರ ಆಧ್ಯಕ್ಷತೆಯಲ್ಲಿ ಹಲವು ಉಪಸಮಿತಿಗಳನ್ನು ರಚಿಸಲಾಗಿದೆ. ಈ ಭಾಗದ ಹಿರಿಯರು, ಯುವಕರು ಉತ್ಸಾಹ ಹಾಗೂ ಭಕ್ತಿಯಿಂದ ಈ ಕಾರ್ಯಕ್ರಮ ನಡೆಸಲು ಅಣಿಯಾಗಿದ್ದಾರೆ ಎಂದು ತಿಳಿಸಿದರು.
ಸಮಾರಂಭದ ಅಂಗವಾಗಿ ಜ. 16ರಿಂದ ಫೆ. 4ರ ವರೆಗೆ ಪ್ರವಚನ ಪರಿಣತ ಎಂದೇ ಖ್ಯಾತರಾದ ಲಿಂಗಸಗೂರು ಮಹಾಂತಸ್ವಾಮೀಜಿ ಮುದಗಲ್ ಅವರಿಂದ ಚಾಮರಸ ಕವಿ ವಿರಚಿತ 'ಪ್ರಭುಲಿಂಗಲೀಲೆ' ಪ್ರವಚನ ನಡೆಯಲಿದೆ. ಶ್ರೀಶೈಲ ಜಗದ್ಗುರು ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಪ್ರವಚನ ಉದ್ಘಾಟಿಸುವರು. ಗದಗ ಜಿಲ್ಲೆ ಬಾಲೇಹೊಸೂರಿನ ದಿಂಗಾಲೇಶ್ವರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ.
ಫೆ. 4ರಂದು ಬೆಳಗಿನಿಂದಲೇ ನಡೆಯುವ ಕಾರ್ಯಕ್ರಮಗಳಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಹಾರನಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ನಿಡಸೋಸಿ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಹಾವೇರಿ ಜಿಲ್ಲೆಯ ವಿವಿಧ ಮಠಗಳ ಶ್ರೀಗಳು ಪಾಲ್ಗೊಳ್ಳುವರು. ಈ ದಿನ ಶ್ರೀಮಠದ ಆವರಣದಲ್ಲಿ ಚೌಡೇಶ್ವರಿ ದೇವಿಯ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕರ್ತೃ ಗುರುಪಾದೇಶ್ವರರ ಪಂಚಲೋಹದ ಮೂರ್ತಿ ಸ್ಥಾಪನೆ, ವೈರಾಗ್ಯದ ಮಲ್ಲಣಾರ್ಯರ ಅತಿಥಿ ಗೃಹ ಉದ್ಘಾಟನೆ, ಶ್ರೀಗುರು ಕುಮಾರೇಶ್ವರರ ಪ್ರಸಾದ ನಿಲಯ ಉದ್ಘಾಟನೆ, ಲಿಂ. ಪ್ರಭುಸ್ವಾಮಿ ಗದ್ದುಗೆಯ ಕಟ್ಟಡ ಉದ್ಘಾಟನೆ ನಡೆಯುವವು. ಸಂಜೆ ಪುರಾಣ ಮಂಗಲ ಕಾರ್ಯಕ್ರಮ ನಡೆಯಲಿದೆ.
ಫೆ. 5ರಂದು 101 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಆಸಕ್ತರು ಕಾರ್ಯಕ್ರಮ ಸಮಿತಿಯನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಒದಗಿಸಿ ಹೆಸರು ನೋಂದಾಯಿಸಬಹುದು. ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳವರು ಹಾಗೂ ಮೈಸೂರಿನ ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಉಚಿತ ಸಾಮೂಹಿಕ ವಿವಾಹಗಳು ನಡೆಯಲಿವೆ. ಈ ಉಚಿತ ಸಾಮೂಹಿಕ ವಿವಾಹದಲ್ಲಿ ವಧು-ವರರಿಗೆ ಉಚಿತ ಬಟ್ಟೆ ಹಾಗೂ ಮಂಗಲ ಸಾಮಗ್ರಿಗಳನ್ನು ಹಾನಗಲ್ಲ ಶಾಸಕ ಮನೋಹರ ತಹಶೀಲ್ದಾರ ಅವರು ಕೊಡುಗೆಯಾಗಿ ನೀಡುವರು ಎಂದು ಅವರು ತಿಳಿಸಿದರು.
ವೃದ್ಧರಿಗೆ ಗೌರವಾರ್ಪಣೆ, ವೃಕ್ಷದಾನ: ಪಟ್ಟಾಧಿಕಾರ ಸಮಾರಂಭದ ಅಂಗವಾಗಿ ಜ. 16ರಿಂದ ಪ್ರತಿದಿನ 80 ವರ್ಷದ ವೃದ್ಧ ದಂಪತಿಗೆ ಗುರುರಕ್ಷೆ ನೀಡಿ ಗೌರವಿಸುವ ಕಾರ್ಯ ನಡೆಯಲಿದೆ. ಅಲ್ಲದೆ ಪ್ರವಚನ ಆರಂಭದ ದಿನದಿಂದಲೇ ಗ್ರಾಮ ಗ್ರಾಮಗಳಿಂದ ಭಕ್ತರು ಶ್ರೀಮಠಕ್ಕೆ ಚಕ್ಕಡಿಯಲ್ಲಿ ಬಂದು ಊಟದ ರೊಟ್ಟಿ ಹಾಗೂ ದವಸ ಧಾನ್ಯಗಳನ್ನು ಶ್ರೀಮಠಕ್ಕೆ ಸಲ್ಲಿಸುವರು. ಇದೇ ಸಂದರ್ಭದಲ್ಲಿ ವೃಕ್ಷದಾನ ಕಾರ್ಯವನ್ನೂ ಕೈಗೊಳ್ಳಾಗಿದ್ದು, ಫೆ. 4ರಂದು ಫಲ ನೀಡುವ ಒಂದು ಸಾವಿರ ವೃಕ್ಷಗಳ ಸಸಿ ವಿತರಣೆ ನಡೆಯುವುದು.
ಜನಜಾಗೃತಿ: ಕಾರ್ಯಕ್ರಮದ ಅಂಗವಾಗಿ ಬಮ್ಮನಹಳ್ಳಿ ಗುರುಪಾದೇಶ್ವರ ವಿರಕ್ತಮಠದ ಶಿವಯೋಗೀಶ್ವರ ಮಹಾಸ್ವಾಮಿಗಳು ತಾಲೂಕಿನಾದ್ಯಂತ ಸಂಚರಿಸಿ ಜನಜಾಗೃತಿ ಕಾರ್ಯಕ್ರಮ ಕೈಕೊಂಡಿದ್ದಾರೆ. ಧರ್ಮ ಪ್ರಚಾರ, ದುಶ್ಚಟಗಳ ವ್ಯಸನಕ್ಕೆ ಘಾಸಿಯಾದವರನ್ನು ಪರಿವರ್ತಿಸಿ ದುಶ್ಚಟಗಳಿಂದ ದೂರ ಮಾಡುವ ಯತ್ನವನ್ನೂ ನಡೆಸಿದ್ದಾರೆ. ಅಲ್ಲಲ್ಲಿ ಧರ್ಮಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಬಮ್ಮನಹಳ್ಳಿ ಗುರುಪಾದೇಶ್ವರ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ, ಮುಂಡಗೋಡ ತಾಲೂಕು ಇಂದೂರಿನ ಉದ್ಯಮಿ ಗಜಾನನ ಪಾಲೇಕರ, ಗಣ್ಯರಾದ ನಿಂಗಪ್ಪ ಮುದಕಣ್ಣನವರ, ಸಿ.ಬಿ.ಪಾಟೀಲ, ಎಸ್.ಎಂ.ಪಾಟೀಲ, ನ್ಯಾಯವಾದಿ ಜಿ.ವಿ. ಕಂಬಾಳಿಮಠ, ಎಂ.ಆರ್. ಗುತ್ತಲ ಮುಂತಾದವರಿದ್ದರು.