ಅವಕಾಶ ಸದ್ವಿನಿಯೋಗ ಅಗತ್ಯ: ಉದಾಸಿ
ಹಾನಗಲ್ಲ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ, ಗ್ರಾಮೀಣ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸಿದ ಮಾಜಿ ಸಚಿವ ಸಿ.ಎಂ. ಉದಾಸಿ ಅವರನ್ನು ಅವರ 77ನೇ ಹುಟ್ಟುಹಬ್ಬದ ನಿಮಿತ್ತ ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ ಮತ್ತು ಸದಸ್ಯರು ಸನ್ಮಾನಿಸಿದರು.
ಶನಿವಾರ ತಾಪಂ ಸಭಾಭವನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಉದಾಸಿ, ಬೇರೆಯವರಿಗೆ ಮಾಡಿದ ಉಪಕಾರ, ಮತ್ತೊಬ್ಬರಿಂದ ಅನುಭವಿಸಿದ ತೊಂದರೆಗಳನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬಾರದು. ಒದಗಿ ಬಂದ ಅವಕಾಶಗಳು ಸದ್ವಿನಿಯೋಗವಾಗಬೇಕು. ಆದರೆ, ನಮ್ಮ ಯೋಗ್ಯತೆಗೆ ಮೀರಿದ ಅವಕಾಶಕ್ಕೆ ಯತ್ನಿಸಬಾರದು ಎಂದರು.
ಏಳು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಐದು ಬಾರಿ ಆಯ್ಕೆಗೊಳಿಸಿದ ಮತದಾರರೇ ನನಗೆ ಶಕ್ತಿ. ಎದುರಾಗುವ ಕಷ್ಟಗಳಿಗೆ ಎದೆಗುಂದಿದರೆ ರಾಜಕಾರಣದಲ್ಲಿ ಸಾಧನೆ ಸಾಧ್ಯವಾಗಲಾರದು. ಸುಳ್ಳು ಭರವಸೆ ನೀಡದೆ ಬದ್ಧತೆ, ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದರೆ ಜನರ ಮನಗೆಲ್ಲಲು ಸಾಧ್ಯವಿದೆ ಎಂದು ಉದಾಸಿ ಅಭಿಪ್ರಾಯಪಟ್ಟರು.
ತಾಪಂ ಉಪಾಧ್ಯಕ್ಷೆ ಅನಿತಾ ಶಿವೂರು, ಜಿಪಂ ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಸದಸ್ಯರಾದ ನಿಂಗಪ್ಪ ಗೊಬ್ಬೇರ, ಹನುಮಂತಪ್ಪ ಗೊಂದಿ, ಜಕಿಯಾಬಾನು ಮುಂಡರಗಿ, ಸುಭಾಸ ಓಲೇಕಾರ, ಕೆಸಿಸಿಬ್ಯಾಂಕ್ ನಿರ್ದೇಶಕ ಬಸಣ್ಣ ಸಂಶಿ, ಮುಖಂಡರಾದ ಎಂ.ಆರ್. ಪಾಟೀಲ, ರಾಜಣ್ಣ ಗೌಳಿ, ರಾಜಣ್ಣ ಪಟ್ಟಣದ್ ಮುಂತಾದವರು ಉಪಸ್ಥಿತರಿದ್ದರು.