ಇಂದು ವಲಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 2
ದಕ್ಷಿಣ ಭಾರತದ 5 ರಾಜ್ಯಗಳ ವಲಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ನಗರದ ಶಿವಬಸವೇಶ್ವರ ಪ್ರೌಢಶಾಲೆಯಲ್ಲಿ ಫೆ. 3ರಿಂದ 7ರ ವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ತಿಳಿಸಿದರು.
ಇಲ್ಲಿನ ವಾರ್ತಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆ, ವಿಶ್ವೇಶ್ವರಯ್ಯ ಔದ್ಯೋಗಿಕ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಹಾಗೂ ಡಿಎಸ್ಇಆರ್ಟಿಗಳ ಆಶ್ರಯದಲ್ಲಿ ಈ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಡಿಡಿಪಿಐ ಶಿವಾನಂದ ಕೊಡ್ಲಿ ಮಾತನಾಡಿ, ಪ್ರೌಢಶಾಲಾ ಮಕ್ಕಳ ಸೃಜನಶೀಲತೆ ಹಾಗೂ ಪ್ರತಿಭೆಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಹಂತಗಳಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಇದು ದಕ್ಷಿಣ ಭಾರತದ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳನಾಡು ಹಾಗೂ ಪಾಂಡಿಚೇರಿ ರಾಜ್ಯಗಳ ವಲಯಮಟ್ಟದ ವಿಜ್ಞಾನ ಪ್ರದರ್ಶನವಾಗಿದೆ ಎಂದು ಹೇಳಿದರು.
ಇದರಲ್ಲಿ ಒಟ್ಟು 250 ಮಕ್ಕಳು ಹಾಗೂ 250 ಶಿಕ್ಷಕರು ಸೇರಿ ಒಟ್ಟು 500 ಜನರು ಪಾಲ್ಗೊಳ್ಳಲಿದ್ದಾರೆ. ಪ್ರತಿ ರಾಜ್ಯದಿಂದ 100 ಜನರು ಆಗಮಿಸಿದ್ದಾರೆ. ಇದಕ್ಕಾಗಿ ಆಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬಾಲಕರ ವಾಸ್ತವ್ಯಕ್ಕಾಗಿ ಕರ್ಜಗಿ ರಸ್ತೆಯ ಡಯಟ್ ಹಾಗೂ ಬಾಲಕಿಯರ ವಾಸ್ತವ್ಯಕ್ಕಾಗಿ ನಗರದ ಸೇಂಟ್ ಯಾನ್ಸ್ ಶಾಲೆ ನಿಗದಿಪಡಿಸಲಾಗಿದೆ. ಸಾರಿಗೆಗಾಗಿ 6 ಶಾಲಾ ಬಸ್ ಹಾಗೂ 5 ಇಲಾಖಾ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೊಡ್ಲಿ ಹೇಳಿದರು.
ಇದರಲ್ಲಿ ಒಟ್ಟು 250 ಮಾದರಿಗಳ ಪ್ರದರ್ಶನ ಜರುಗಲಿದೆ. ರಾಜ್ಯದ 50 ಮಾದರಿಗಳು ಪ್ರದರ್ಶಿತವಾಗಲಿವೆ. ಅದರಲ್ಲಿ 15 ಶಿಕ್ಷಕರ ವಿಭಾಗದಲ್ಲಿ 15 ಗುಂಪು ವಿಭಾಗದಲ್ಲಿ ಹಾಗೂ 20 ವೈಯಕ್ತಿಕ ವಿಭಾಗದಲ್ಲಿ ಪ್ರದರ್ಶಿತಗೊಳ್ಳಲಿವೆ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ 2 ಹಾಗೂ ಹಾನಗಲ್ಲ ತಾಲೂಕಿನ 1 ಮಾದರಿ ಸೇರಿದಂತೆ ಒಟ್ಟು ಮೂರು ಮಾದರಿಗಳು ವೈಯಕ್ತಿಕ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿವೆ. ಪ್ರತಿ ರಾಜ್ಯದ ಓರ್ವ ಸಂಪನ್ಮೂಲ ವ್ಯಕ್ತಿಯನ್ನು ತೀರ್ಪುಗಾರರಾಗಿ ಆಯ್ಕೆ ಮಾಡಲಾಗಿದೆ. ಇದರಲ್ಲಿ ಒಟ್ಟು 125ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.
25-30 ಕೊಠಡಿಗಳಲ್ಲಿ ಮಾದರಿಗಳ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲವು ದೊಡ್ಡ ದೊಡ್ಡ ಮಾದರಿಗಳಿಗೆ ಮೈದಾನದಲ್ಲೇ ವ್ಯವಸ್ಥೆ ಮಾಡಲಾಗುವುದು. ಇದರಲ್ಲಿ ಆಯ್ಕೆಯಾದವರು ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಕ್ಕೆ ಅರ್ಹರಾಗಲಿದ್ದಾರೆ. ಇದರಲ್ಲಿ ಭಾಗವಹಿಸುವ ಪ್ರದರ್ಶಕರಿಗೆ ಸಾರಿಗೆ ವೆಚ್ಚವನ್ನು ಮಾತ್ರ ಭರಿಸಲಾಗುತ್ತದೆ ಎಂದರು.
ಈ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ವೀಕ್ಷಿಸಲು 5 ದಿನಗಳಲ್ಲಿ ಸುಮಾರು 50 ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಎಂದು ಅಂದಾಜಿಸಲಾಗಿದೆ. ಇದಕ್ಕೆ ಜಿಲ್ಲೆಯ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಸಹಕಾರ ನೀಡಬೇಕು ಹಾಗೂ ಇದರ ಸದುಪಯೋಗ ಪಡೆಯಬೇಕು ಎಂದು ಕೊಡ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನ ಮುತ್ತುಕುಮಾರ, ಡಿಎಸ್ಇಆರ್ಟಿಯ ಸಹಾಯಕ ನಿರ್ದೇಶಕಿ ಶಾಂತಲಾ, ಜಿಪಂ ಸಿಇಓ ಉಮೇಶ ಕುಸುಗಲ್ಲ, ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಉಪಸ್ಥಿತರಿದ್ದರು.