ರೈತ ಸಮಾವೇಶಕ್ಕೆ 20 ಸಾವಿರ ಜನ: ಮಾಳಗಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಫೆ. 2
ಇದೇ ತಿಂಗಳ ಕೊನೆಯ ವಾರದಲ್ಲಿ ತಾಲೂಕು ಮಟ್ಟದ ಜೆಡಿಎಸ್ ರೈತ ಸಮಾವೇಶ ಹಾನಗಲ್ಲ ಪಟ್ಟಣದಲ್ಲಿ ಜರುಗುವ ಹಿನ್ನೆಲೆಯಲ್ಲಿ ಶನಿವಾರ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಮಾಳಗಿ ನೇತೃತ್ವದಲ್ಲಿ ತಾಲೂಕು ಘಟಕದ ಪದಾಧಿಕಾರಿಗಳ ಸಭೆ ಜರುಗಿತು.
ಸಮಾವೇಶದ ಕುರಿತು ವಿವರಣೆ ನೀಡಿದ ಡಿ.ಎಸ್. ಮಾಳಗಿ, ಹಾನಗಲ್ಲ ತಾಲೂಕು ಸೇರಿದಂತೆ ಸುತ್ತಲಿನ ತಾಲೂಕುಗಳ ಸುಮಾರು 20 ಸಾವಿರ ರೈತರು ಸಮಾವೇಶದಲ್ಲಿ ಪಾಲ್ಗೊಳ್ಳುವರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಸವನಗೌಡ ಪಾಟೀಲ ಯತ್ನಾಳ, ಬಸವರಾಜ ಹೊರಟ್ಟಿ, ಅಲ್ಕೋಡ ಹನುಮಂತಪ್ಪ, ಬಂಡೆಪ್ಪ ಕಾಶಂಪುರ, ಪಿ.ಜಿ.ಆರ್ ಸಿಂಧ್ಯಾ ಮುಂತಾದ ಮುಖಂಡರು ಸಮಾವೇಶದಲ್ಲಿ ಭಾಗವಹಿಸುವರು ಎಂದು ವಿವರಿಸಿದರು.
ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಚಾಲನೆ ನೀಡಲಾಗುವುದು. 'ಜೆಡಿಎಸ್ ನಡಿಗೆ ಮತದಾರರ ಪಾದದೆಡೆ' ಎಂಬ ಕಾರ್ಯಕ್ರಮ ಮುಂದಿನ ವಾರದಿಂದ ಆರಂಭಗೊಳ್ಳಲಿದೆ. ಬಿಜೆಪಿ ಈಗ ಕೆಜೆಪಿ, ಬಿಜೆಪಿ ಮತ್ತು ಬಿಎಸ್‌ಆರ್ ಎಂದು ಒಡೆದು ಮೂರು ಮನೆಗಳಾಗಿವೆ. ಇವೆಲ್ಲವೂ ಲೂಟಿಕೋರರನ್ನು ಒಳಗೊಂಡ ಪಕ್ಷಗಳೆಂಬುದು ಮತದಾರರಿಗೆ ಈಗ ಮನವರಿಕೆಯಾಗಿದೆ. ಜೆಡಿಎಸ್ ಮಾತ್ರ ರಾಜ್ಯದ ಏಕೈಕ ಆಶಾಕಿರಣ ಎಂದರು.
ಜೆಡಿಎಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶಾಂತಕ್ಕ ತುಕ್ಕೋಜಿ, ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಖ್ವಾಜಾ ಮೊಹಿದ್ದೀನ ಅಣ್ಣಿಗೇರಿ, ಮುಖಂಡರಾದ ರಾಮಣ್ಣ ಬೊಮ್ಮೋಜಿ, ಮಾರ್ಥಾಂಡ ಪಾರಗಾಂವಕರ, ಭೀಮಣ್ಣ ಅಗಸಿಬಾಗಿಲ, ಬಸವರಾಜ ಭಿಡೇದ, ಮಲ್ಲೇಶಪ್ಪ ದೊಡ್ಡಮನಿ, ದುದ್ದು ಬಾಳೂರು, ಮಲ್ಲೇಶಪ್ಪ ಕೊಣನಕೇರಿ ಮತ್ತಿತರರು ಇದ್ದರು.