ಸರ್ಕಾರಿ ಜಾಗ ಕಬಳಿಕೆ
ಬ್ಯಾಡಗಿ: ಸರ್ಕಾರಿ ಜಾಗ ಕಬಳಿಸಿಕೊಂಡು ವಾಸವಾಗಿರುವ ಜನರನ್ನು ತೆರವುಗೊಳಿಸುವಂತೆ ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ಜರುಗಿದ ಜನಸ್ಪಂದನದಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.
ಕೃಷಿ ಇಲಾಖೆಯ ಗ್ರಾಮಸೇವಕರಿಗೆ ನೀಡಿದ್ದ ಕಟ್ಟಡದಲ್ಲಿ ಬೇರೊಬ್ಬರು ಅತಿಕ್ರಮಿಸಿ ವಾಸವಾಗಿದ್ದಾರೆ. ಈ ಕುರಿತು ಸಹಾಯಕ ಕೃಷಿ ನಿರ್ದೇಶಕರಾಗಲಿ ಅಥವಾ ಗ್ರಾಪಂ ಅಭಿವೃದ್ಧಿ ಅಧಿಕಾರಿಯಾಗಲಿ ತೆರವುಗೊಳಿಸಲು ಮುಂದಾಗಿಲ್ಲ. ಹಲವಾರು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಸೂಕ್ತ ಕ್ರಮ ಜರುಗಿಸಿ: ಗ್ರಾಮದ ಇನ್ನೆರಡು ಕಡೆಗಳಲ್ಲಿ ಸರ್ಕಾರಿ ಆಸ್ತಿ ಅತಿಕ್ರಮಿಸಿದ ಉದಾಹರಣೆಗಳಿವೆ. ಅದಾಗ್ಯೂ ಅಧಿಕಾರಿಗಳು ಕಂಡೂ ಕಂಡರಿಯದಂತೆ ವರ್ತಿಸುತ್ತಿದ್ದು, ಅಧಿಕಾರಿಗಳ ಜೊತೆ ಶಾಮೀಲಾಗಿರುವ ಕುರಿತು ಸಂಶಯ ವ್ಯಕ್ತಪಡಿಸಿದ ಗ್ರಾಮಸ್ಥರು ಕೂಡಲೇ ಅತಿಕ್ರಮಣದಾರರನ್ನು ತೆರವುಗೊಳಿಸಬೇಕು. ಸರ್ಕಾರಿ ಆಸ್ತಿಯನ್ನು ಇನ್ನಿತರ ಉದ್ದೇಶಗಳಿಗೆ ಬಳಸದಂತೆ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಕುಡಿಯಲು ನೀರು ಕೊಡಿ: ಬೇಸಿಗೆ ಆರಂಭಕ್ಕೂ ಮುನ್ನವೇ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸಬೇಕಾಗಿದೆ. ಹೆಚ್ಚುವರಿ ಕೊಳವೆ ಬಾವಿ ಕೊರೆಸುವ ಕಾರ್ಯ ಅನುಷ್ಠಾನಗೊಂಡಿಲ್ಲ. ಕೇವಲ ಭರವಸೆಗಳನ್ನೇ ಗ್ರಾಮಸ್ಥರು ಕೇಳಬೇಕಾಗಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದರು.
ಎಚ್ಚೆತ್ತುಕೊಳ್ಳದ ಅಧಿಕಾರಿಗಳು: ಗ್ರಾಮದಲ್ಲಿರುವ 2 ಮೇಲ್ಮಟ್ಟದ ಜಲಾಗಾರಗಳನ್ನು ಸ್ವಚ್ಛಗೊಳಿಸಿ ವರ್ಷಗಳೇ ಸಂದಿವೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಈವರೆಗೂ ಕ್ರಮ ಜರುಗಿಸಿಲ್ಲ. ಕೆಲ ದಿನಗಳ ಹಿಂದೆ ಕಲುಷಿತ ನೀರು ಸೇವನೆಯಿಂದ ಗ್ರಾಮದ ಜನರು ಆಸ್ಪತ್ರೆಗೆ ದಾಖಲಾದ ಘಟನೆ ಜನಮಾನಸದಿಂದ ಹೋಗಿಲ್ಲ. ಹೀಗಿದ್ದೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದರು.
ನೂತನ ಕಟ್ಟಡಕ್ಕೆ ಅನುದಾನ: ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರ ಬದಲಾವಣೆ ಹಾಗೂ ನೂತನ ಕೇಂದ್ರ ಆರಂಭಿಸಲು ಗ್ರಾಮಸ್ಥರು ಒತ್ತಾಯಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿ.ಟಿ. ಶಿರೋಳಕರ ಈ ಕುರಿತು ತಾವು ಪರಿ ಶೀಲಿಸಿ ಕ್ರಮ ಜರುಗಿಸುವುದಾಗಿ ತಿಳಿಸಿದರು. ಇಓ ಕೆ. ಕೃಷ್ಣಮೂರ್ತಿ ಪ್ರಸ್ತುತ ವರ್ಷದ 13ನೇ ಹಣಕಾಸು ಯೋಜನೆಯಲ್ಲಿ ನೂತನ ಕೇಂದ್ರದ ಕಟ್ಟಡ ಕಾಮಗಾರಿ ನಿರ್ಮಿಸಲು ಅನುದಾನ ನೀಡುವುದಾಗಿ ತಿಳಿಸಿದರು.
ವಾಗ್ವಾದ: ಗ್ರಾಪಂ ಕಾರ್ಯಾಲಯದ ಸಿಬ್ಬಂದಿಯೊಬ್ಬರನ್ನು ಕಾನೂನು ಬಾಹಿರವಾಗಿ ಆಯ್ಕೆ ಮಾಡಲಾಗಿದ್ದು, ದಾಖಲೆ ಸಹಿತ ವಿವರಗಳನ್ನು ಬಹಿರಂಗಪಡಿಸುವಂತೆ ಗ್ರಾಮಸ್ಥರು ಪಿಡಿಓ ಶೈಲಾ ಅವರನ್ನು ಆಗ್ರಹಿಸಿದರು. ಗ್ರಾಮಸ್ಥರು-ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು. ಸಿಇಓ ಪ್ರತಿಕ್ರಿಯಿಸಿ, ಈ ಕುರಿತು ನಿರ್ಣಯದ ಮೇರೆಗೆ ಆಯ್ಕೆ ಮಾಡಲಾಗಿದೆ. ಗ್ರಾಮಸ್ಥರು ಒತ್ತಡ ಮಾಡುತ್ತಿರುವುದರಿಂದ ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ಗ್ರಾಮದ ರಸ್ತೆ ಕಿತ್ತು ಹೋಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಕೂಡಲೇ ಸರಿಪಡಿಸುವಂತೆ ಸಭೆಯಲ್ಲಿ ಗ್ರಾಮಸ್ಥರು ಅರ್ಜಿ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷ ರಾಜಶೇಖರ ಯತ್ನಳ್ಳಿ, ಉಪಾಧ್ಯಕ್ಷೆ ಕೆ. ಶಾಂತವ್ವ ಸಮಾಜ ಕಲ್ಯಾಣಾಧಿಕಾರಿ ಅಣ್ಣಪ್ಪ, ಸಹಾಯಕ ನಿರ್ದೇಶಕ ಚಿದಾನಂದ, ಹೆಸ್ಕಾಂ ಎಇಇ ದಾಸಪ್ಪ, ಬಿಇಓ ಪ್ರಸನ್ನಕುಮಾರ, ಉಪ ತಹಸೀಲ್ದಾರ್ ಬಿ.ಎಸ್. ಅರೋಗ್ಯ ಇಲಾಖೆಯ ಡಾ. ಬಿ.ಆರ್. ಲಮಾಣಿ ಇತರರಿದ್ದರು.