ಜನಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ
ಹಾನಗಲ: ಸಾಂಸ್ಕೃತಿಕ ಪರಿಸರಕ್ಕೆ ಲೋಕಾರ್ಪಣೆಯಾದ ಸಕಲ ಸುವ್ಯವಸ್ಥೆ ಹೊಂದಿದ ಶ್ರೀ ಕುಮಾರೇಶ್ವರ ಬಯಲು ರಂಗ ಮಂದಿರದಲ್ಲಿ ಶನಿವಾರ ಸಂಜೆ ಕಿಕ್ಕಿರಿದ ಜನಸ್ತೋಮದ ನಡುವೆ ಪ್ರದರ್ಶನಗೊಂಡ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹೃದಯರಲ್ಲಿ ನವೋತ್ಸಾಹ ಚಿಮ್ಮಿಸಿದವು.
ಹಾನಗಲ್ಲ ನಗರಕ್ಕೆ ಒಂದು ರಂಗ ಮಂದಿರದ ಕೊರತೆ ಬಹುದಿನಗಳಿಂದ ಕಾಡುತ್ತಿತ್ತು. ಹಲವು ದಶಕಗಳಿಂದ ನಾಡ ಕಚೇರಿಯ ಒಂದು ಪುಟ್ಟ ವೇದಿಕೆಯೇ ಹಾನಗಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಸರೆಯಾಗಿತ್ತು. ಆದರೆ, ಮಾಜಿ ಸಚಿವ ಸಿ.ಎಂ. ಉದಾಸಿ ಅವರು ಹಾನಗಲ್ಲಿನ ಸಾಂಸ್ಕೃತಿಕ ವಲಯದ ಕಲಾವಿದರು ಹಾಗೂ ಸಹೃದಯರಿಗೆ ಕೊಡ ಮಾಡಿದ ಈ ರಂಗಕೇಂದ್ರ ಒಂದು ಮಾದರಿ ಸುವ್ಯವಸ್ಥೆಯಾಗಿದೆ. ಇಲ್ಲಿ ಕಲಾವಿದರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳು ಇವೆ. ಬೆಳಕು, ಧ್ವನಿ, ವೇದಿಕೆ, ಆಸನ ಎಲ್ಲವೂ ಅತ್ಯಂತ ಅಚ್ಚುಕಟ್ಟಾಗಿವೆ. ಸಕಲ ವ್ಯವಸ್ಥೆ ರಂಗಾಸಕ್ತರಿಗೆ ಹೇಳಿ ಮಾಡಿಸಿದ ಸಾಂಸ್ಕೃತಿಕ ಕೇಂದ್ರ. ಮಾಜಿ ಸಚಿವ ಸಿ.ಎಂ. ಉದಾಸಿ ಅವರ 77ನೇ ಜನ್ಮ ದಿನದ ಅಂಗವಾಗಿ ನಡೆದ ಸಾಂಸ್ಕೃತಿಕ ಚಟುವಟಿಕೆಗಳನ್ನು ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿದರು. ಮಾಜಿ ಸಚಿವ ಸಿ.ಎಂ. ಉದಾಸಿ ಹಾಗೂ ಅವರ ಪತ್ನಿ ನೀಲಮ್ಮ ಉದಾಸಿ, ಜಿಪಂ ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಪುರಸಭಾಧ್ಯಕ್ಷೆ ಹಸೀನಾಬಿ ನಾಯ್ಕನವರ, ಜಿಪಂ ಸದಸ್ಯ ಪದ್ಮನಾಭ ಕುಂದಾಪುರ, ಎಪಿಎಂಸಿ ಅಧ್ಯಕ್ಷ ಬಿ. ಎಸ್. ಅಕ್ಕಿವಳ್ಳಿ, ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಸ್ಥೆ ಅಧ್ಯಕ್ಷ ಎ.ಎಸ್. ಬಳ್ಳಾರಿ, ಎನ್.ಜಿ. ಕುಂಬಾರಿ, ಗುರುಸಿದ್ದಪ್ಪ ಕೊಂಡೋಜಿ, ಕಲ್ಯಾಣಕುಮಾರ ಶೆಟ್ಟರ್ ಮುಂತಾದವರಿದ್ದರು.
ಶ್ರೀ ಕುಮಾರೇಶ್ವರ ಬಯಲು ರಂಗ ಮಂದಿರವನ್ನು ಶ್ರೀ ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟ್‌ನ ಗೌರವಾಧ್ಯಕ್ಷರಾದ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿಗಳವರಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಬಿ.ವೈ. ಬಂಡಿವಡ್ಡರ ಹಸ್ತಾಂತರಿಸಿದರು.
ಧಾರವಾಡದ ಗಣೇಶ ನೃತ್ಯಶಾಲೆಯ ಪುಷ್ಪಾಂಜಲಿ ಹಾಗೂ ಭರತ ನಾಟ್ಯ, ಕಾಡಶೆಟ್ಟಿಹಳ್ಳಿಯ ವಿ.ಆರ್. ಪಾಟೀಲ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಪ್ರದರ್ಶನವಾದ ಕೋಲಾಟ ಜನಪದ ನೃತ್ಯ, ಹಾನಗಲ್ಲಿನ ಹೆಜ್ಜೆ ಗೆಜ್ಜೆ ಕಲಾ ತಂಡದ ಭರತನಾಟ್ಯ ಪ್ರದರ್ಶನ ಸಹೃದಯರನ್ನು ಆಕರ್ಷಿಸಿತು.