ಜನಸ್ಪಂದನ ಪರಿಹಾರ ಸಾಧನ
ಹಾನಗಲ್ಲ: ಜನಸ್ಪಂದನ ಕಾರ್ಯಕ್ರಮಗಳು ಸಮುದಾಯದ ಒಳಗೆ ಬಂದು ಸಮಸ್ಯೆಗಳನ್ನು ಪರಿಹರಿಸುವ ಸುಲಭ ಸಾಧನವಾಗಿದ್ದು, ಇದರ ಸದುಪಯೋಗವನ್ನು ರೈತರು ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಪದ್ಮನಾಭ ಕುಂದಾಪುರ ಕರೆ ನೀಡಿದರು.
ಹಾನಗಲ್ಲ ತಾಲೂಕಿನ ಯಳ್ಳೂರಿನಲ್ಲಿ ಜನಸ್ಪಂದನ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಕೊಡುವ ಅನುದಾನಗಳ ಸದುಪಯೋಗ ಆಗಬೇಕು. ಸರ್ಕಾರಿ ಅಧಿಕಾರಿಗಳು ಜನತೆಯ ಸೇವೆಗಾಗಿ ಸಿದ್ಧರಾಗಿರುತ್ತಾರೆ.
ಅಲೆದಾಟಕ್ಕೆ ಬ್ರೇಕ್: ಜನಸ್ಪಂದನ ಕಾರ್ಯಕ್ರಮದ ಮೂಲಕ ಗ್ರಾಮಗಳಿಗೆ ಎಲ್ಲ ಇಲಾಖೆಯ ಅಧಿಕಾರಿಗಳು ಬರುತ್ತಾರೆ. ರೈತರು ತಮ್ಮ ಕಚೇರಿ ಕೆಲಸಗಳಿಗಾಗಿ ತಾಲೂಕು ಕೇಂದ್ರಗಳಿಗೆ ಅಲೆಯುವುದನ್ನು ತಪ್ಪಿಸಲಾಗುತ್ತದೆ.
ಮಿತವಾಗಿ ಬಳಸಿ: ಪ್ರಸ್ತುತ ವರ್ಷ ಮಳೆ ಅಭಾವದಿಂದಾಗಿ ವಿದ್ಯುತ್ ಕೊರತೆ ಹೆಚ್ಚಾಗಿದೆ. ಇಂಥಹದರಲ್ಲಿ ಬಹುಪಾಲು ರೈತರು ಪ್ರಸಕ್ತ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಿದ್ದಾರೆ. ಅಲ್ಲದೆ ಅನಧಿಕೃತವಾಗಿ ಹೆಚ್ಚು ವಿದ್ಯುತ್ ಬಳಸುತ್ತಿದ್ದಾರೆ. ಇದರಿಂದ ವಿದ್ಯುತ್ ಉಪಕರಣಗಳು ಕೆಡುತ್ತಿವೆ. ವಿದ್ಯುತ್ ವ್ಯತ್ಯಯ ಆಗುತ್ತಿದೆ. ಈ ಬಗ್ಗೆ ರೈತರೇ ಮುಂಜಾಗೃತಾ ಕ್ರಮ ಜರುಗಿಸಲು ಮುಂದಾಗಬೇಕು ಎಂದರು.
ಸಕಾಲ ಸದುಪಯೋಗವಾಗಲಿ: ಸಭೆಯನ್ನುದ್ದೇಶಿಸಿ ಹಾನಗಲ್ಲ ತಹಸೀಲ್ದಾರ್ ರಮೇಶ ಕೋನರೆಡ್ಡಿ ಮಾತನಾಡಿ, ಕಾನೂನುಬದ್ಧವಾಗಿ ಪಡೆಯಬೇಕಾಗಿರುವ ಸರಕಾರಿ ಸೇವೆಗೆ ಯಾರೂ ಹಿಂಜರಿಯಬೇಕಾಗಿಲ್ಲ. ಎಲ್ಲ ಸರಕಾರಿ ಕಚೇರಿಗಳಲ್ಲಿ ಸಕಾಲ ಯೋಜನೆ ಮೂಲಕ ಸಾಮಾನ್ಯ ಜನರಿಗೆ ಹೆಚ್ಚು ಅನುಕೂಲ ಕಲ್ಪಿಸಲಾಗುತ್ತಿದೆ. ಅಟಲ್‌ಜಿ ಆರೋಗ್ಯ ಕಾರ್ಯಕ್ರಮದಡಿ ಅನುಕೂಲ ಪಡೆದುಕೊಳ್ಳಲು ಸಲಹೆ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಹಮತ್‌ಬಿ ಬುಡ್ಡನವರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರಯ್ಯ ಹಿರೇಮಠ, ಚಂದ್ರಣ್ಣ ಬೆಳವತ್ತಿ, ವಿಜಯಲಕ್ಷ್ಮೀ ಪಾಟೀಲ, ಪಾರವ್ವ ಬಂಡಿವಡ್ಡರ, ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ ಕಾಮನಹಳ್ಳಿ, ವಿವಿಧ ಇಲಾಖೆ ಅಧಿಕಾರಿಗಳಾದ ಮನೋಜಕುಮಾರ ಗಡಬಳ್ಳಿ, ಬಿ.ಆರ್. ಶೆಟ್ಟರ್, ಎನ್.ಎಫ್. ಕಮ್ಮಾರ ಮುಂತಾದವರು ಪಾಲ್ಗೊಂಡಿದ್ದರು. ಅಂಬಿಕಾ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಮುಖ್ಯೋಪಾಧ್ಯಾಯ ಎಮ್.ಎನ್. ಚಿಲಕವಾಡ ಸ್ವಾಗತಿಸಿದರು. ಪಂಚಾಯತ್ ಕಾರ್ಯದರ್ಶಿ ಚಕ್ರಸಾಲಿ ವಂದಿಸಿದರು.