ಹತ್ತಿ, ಗೋವಿನಜೋಳಕ್ಕೆ ಬೆಂಬಲ ನೀಡಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಫೆ.3
ಹತ್ತಿ ಹಾಗೂ ಗೋವಿನಜೋಳಕ್ಕೆ ಬೆಂಬಲ ನಿಗದಿಪಡಿಸುವುದು, ಇನ್ನಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಭಾನುವಾರ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ನೇತೃತ್ವದಲ್ಲಿ ರೈತ ನಿಯೋಗದೊಂದಿಗೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳ ನಿವಾಸದಲ್ಲಿ ಮನವಿ ಸಲ್ಲಿಸಿದರು.
ಬೆಲೆ ನಿಗದಿಗೊಳಿಸಿ: ಪ್ರಸಕ್ತ ವರ್ಷ ಅಸಮರ್ಪಕ ಮಳೆಯಿಂದಾಗಿ ರೈತ ನಷ್ಟ ಅನುಭವಿಸುವಂತಾಗಿದೆ. ಬೆಳೆದ ಅಲ್ಪಸ್ವಲ್ಪ ಬೆಳೆಗೂ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ ಕೃಷಿಗಾಗಿ ಮಾಡಿದ ವೆಚ್ಚ ಸಹ ಮರಳಿ ಬಾರದಂತಾಗಿದೆ. ಈ ಹಿನ್ನೆಲೆಯಲ್ಲಿ ಗೋವಿನಜೋಳಕ್ಕೆ ರು. 400 ಹಾಗೂ ಹತ್ತಿಗೆ ರು. 1 ಸಾವಿರ ಬೆಂಬಲ ಬೆಲೆ ಹೆಚ್ಚಿಸಿ ಸಂಕಷ್ಟಕ್ಕೆ ಸಿಲುಕಿರುವ ರೈತನನ್ನು ರಕ್ಷಿಸುವಂತೆ ಆಗ್ರಹಿಸಿದ್ದಾರೆ.
ಏತ ನೀರಾವರಿ ಪ್ರಾರಂಭಿಸಿ: 2003ರಲ್ಲಿಯೇ ಆರಂಭವಾದ ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ಈವರೆಗೂ ಕೃಷಿಕರ ಭೂಮಿಗೆ ನೀರು ಒದಗಿಸಿಲ್ಲ. ಯೋಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರದ ಬಿಡಿಗಾಸು ತಲುಪಿಲ್ಲ. ಇದಕ್ಕಿಂತ ತಡವಾಗಿ ಆರಂಭವಾದ ಏತ ನೀರಾವರಿ ಯೋಜನೆಗಳು ಈಗಾಗಲೇ ಕೃಷಿಭೂಮಿಗೆ ನೀರು ಒದಗಿಸಿದ್ದು, ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಕೂಡಲೇ ಏತ ನೀರಾವರಿ ಕಾಮಗಾರಿ ಚುರುಕುಗೊಳಿಸುವಂತೆ ಆಗ್ರಹಿಸಿದರು.
ಅಸುಂಡಿ ಕೆರೆಗೆ ನೀರು ಹರಿಸಿ: ಕಾಲುವೆಗಳ ಮೂಲಕ ತುಂಗಭದ್ರಾ ನದಿ ನೀರಿನಿಂದ ಅಸುಂಡಿ ಕೆರೆಗೆ ತುಂಬಿಸಬೇಕು. ಇದರಿಂದ ಸುತ್ತಲಿನ ಸುಮಾರು 50ಕ್ಕೂ ಹೆಚ್ಚು ಗ್ರಾಮಗಳ 3 ಸಾವಿರ ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಹಾಗೂ 10 ಸಾವಿರ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಳವಾಗಲಿದೆ. ಅಸಮರ್ಪಕ ಮಳೆಯಿಂದ ನೀರಿಲ್ಲದೇ ಕೆರೆ ಬತ್ತಿ ಹೋಗಿದೆ. ಬೃಹತ್ ಪ್ರಮಾಣದಲ್ಲಿ ಹೂಳು ತುಂಬಿದ್ದರಿಂದ ನೀರು ನಿಲ್ಲದಂತಾಗಿದೆ. ಕೂಡಲೇ ನೀರು ತುಂಬಿ ಸಲು ಮುಂದಾಗುವಂತೆ ಸರ್ಕಾರಕ್ಕೆ ಆಗ್ರಹಿಸಿದರು.
ರಾಜ್ಯದ ಎಲ್ಲ ಕೆರೆ ಭರ್ತಿ ಮಾಡಿ: ಸರ್ಕಾರ ಹಣ ವ್ಯಯಿಸಿ ಕೆರೆಗಳಲ್ಲಿ ನೀರು ಸಂಗ್ರಹಿಸದಿದ್ದರೇ ಮುಂದಿನ ದಿನಗಳಲ್ಲಿ ರೈತರೇ ಹಣ ಕೊಟ್ಟು ನೀರು ಪಡೆಯಬೇಕಾದ ಪರಿಸ್ಥಿತಿ ಎದುರಾಗಲಿದೆ. ಜನ, ಜಾನುವಾರು ಸೇರಿದಂತೆ ಕೃಷಿ ಜೀವಂತವಾಗಿರಲು ಮೊದಲು ನೀರು ಅವಶ್ಯಕ. ನೀರು ಸದ್ಭಳಕೆ ಮಾಡಿಕೊಳ್ಳುವ ರೈತ ದೇಶಕ್ಕೆ ಅನ್ನ ಹಾಕಬಲ್ಲ. ಕೂಡಲೇ ಅಗತ್ಯ ಅನುದಾನ ಒದಗಿಸಿ ರಾಜ್ಯದ ಎಲ್ಲ ಕೆರೆಗಳನ್ನು ತುಂಬಿಸುವಂತೆ ಆಗ್ರಹಿಸಿದ್ದಾರೆ.
ಹೆಸ್ಕಾಂಗೆ ಅನುದಾನ ನೀಡಿ: ನಷ್ಟ ಅನುಭವಿಸುತ್ತಿರುವ ಹುಬ್ಬಳ್ಳಿ ವಿದ್ಯುತ್ ಪ್ರಸರಣ ವಿಭಾಗಕ್ಕೆ ರು. 1 ಸಾವಿರ ಕೋಟಿ ಅನುದಾನ ನೀಡುವ ಮೂಲಕ ಅಕ್ರಮ-ಸಕ್ರಮ ಯೋಜನೆಯಡಿ ಕೊಳವೆ ಬಾವಿಗಳಿಗೆ ಸಂಪರ್ಕ ಒದಗಿಸಬೇಕು. ಗಂಗಾಕಲ್ಯಾಣ ಯೋಜನೆಯನ್ನು ತೀವ್ರಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸುವಂತೆಯೂ ಮನವಿಯಲ್ಲಿ ತಿಳಿಸಿದ್ದಾರೆ.
ರೈತ ಮುಖಂಡರಾದ ಗಂಗಣ್ಣ ಎಲಿ, ಶಂಭಣ್ಣ ಬಿದರಿ, ಬಸನಗೌಡ ಗಂಗಪ್ಪಳವರ, ಮೌನೇಶ್ ಕಮ್ಮಾರ, ಧರ್ಮಪ್ಪ ಕುಡುಪಲಿ, ಮಂಜಪ್ಪ ನಂದಿಹಳ್ಳಿ, ಕರಬಸಪ್ಪ ನಂದಿಹಳ್ಳಿ, ಲಲಿತವ್ವ ಪಾರ್ವತೇರ, ಮಲ್ಲಪ್ಪ ನೆಗಳೂರು, ಇನ್ನಿತರರು ನಿಯೋಗದಲ್ಲಿದ್ದರು.