80 ಎಕರೆ ಆಸ್ತಿ ಸಂರಕ್ಷಣೆ ಐರಣಿ ಹೊಳಿಮಠ ಟ್ರಸ್ಟ್‌ಗೆ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಫೆ.4
ತಾಲೂಕಿನ ಐರಣಿ ಹೊಳೆಮಠಕ್ಕೆ ಸೇರಿದ ಸುಮಾರು 80 ಎಕರೆ ಆಸ್ತಿ ಸಂರಕ್ಷಣೆಗಾಗಿ ದೆಹಲಿಯ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಮನವಿಗೆ ಸ್ಪಂದಿಸಿದ ನ್ಯಾಯಾಲಯ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಶ್ರೀಮಠದ ಆಸ್ತಿ ಸಂರಕ್ಷಣೆ ಜವಾಬ್ದಾರಿ ಐರಣಿ ಹೊಳಿಮಠದ ಸೋಲ್ ಟ್ರಸ್ಟ್‌ಗೆ ಸೇರಿದ್ದೆಂದು ಮಹತ್ವದ ತೀರ್ಪು ನೀಡಿದೆ ಎಂದು ಮಠಾಧಿಪತಿ ಬಸವರಾಜ ದೇಶಿಕೆಂದ್ರ ಶ್ರೀಗಳು ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐರಣಿ ಹೊಳೆಮಠದ ಪೂರ್ವಜರಾದ ಮುಪ್ಪಿನಾರ್ಯ ಮಹಾತ್ಮಾಜಿ ಅವರ ಜೀವಿತಾವಧಿಯಲ್ಲಿ ಯಾವುದೇ ರೀತಿಯ ತಂಟೆ, ತಕರಾರುಗಳು ಇರಲಿಲ್ಲ. ಆದರೆ, ಗ್ರಾಮಸ್ಥರೊಬ್ಬರು ಕಳೆದ 36 ವರ್ಷ ತಾವು ಅಧಿಕಾರ ಸ್ವೀಕರಿಸಿದಾಗಿನಿಂದ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತ ಮಠದ ಹಾಗೂ ತಮ್ಮ ಶಾಂತಿ ನೆಮ್ಮದಿಗೆ ಭಂಗವುಂಟು ಮಾಡುತ್ತಿದ್ದರು.
ಎಂದಿನಂತೆ ಸಹಕರಿಸಿ: 1984ರಿಂದ 1996ರ ವರೆಗೆ 12 ವರ್ಷಗಳ ಕಾಲ ಮಠ ತೊರೆದು ಶಿವಮೊಗ್ಗ ಜಿಲ್ಲೆಯ ಬೀರನಕೆರೆ(ಕಿಟ್ಟದಾಳು) ಗ್ರಾಮದಲ್ಲಿ ಮತ್ತು ರಾಜ್ಯದ ಇತರ ಗ್ರಾಮಗಳಲ್ಲಿ ವಾಸಿಸಿ ವನವಾಸ ಅನುಭವಿಸಿದ್ದೇನೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪು ಕುರಿತಂತೆ ಭಕ್ತರು ತೀವ್ರ ಆಸಕ್ತರಾಗಿದ್ದರಿಂದ ಈಗ ಪತ್ರಿಕೆಗಳ ಮೂಲಕ ಬಹಿರಂಗ ಪಡಿಸುತ್ತಿರುವುದಾಗಿ ತಿಳಿಸಿದರಲ್ಲದೇ, ಭಕ್ತರು ಅನಗತ್ಯವಾಗಿ ಆತಂಕ್ಕೊಳಗಾಗಬಾರದು. ಎಂದಿನಂತೆ ಸಹಕರಿಸಬೇಕೆಂದು ಮನವಿ ಮಾಡಿದರು.
ನ್ಯಾಯಕ್ಕೆ ಸಂದ ಜಯ: ಶ್ರೀಮಠದ ಅಡಿಯಲ್ಲಿ ನಾಡಿನಾದ್ಯಂತ ಹತ್ತಾರು ಮಠಗಳು ಧರ್ಮ ಜಾಗೃತಿ, ಅಕ್ಷರ ಮತ್ತು ಅನ್ನ ದಾಸೋಹ ನಡೆಸುತ್ತಿದ್ದು, ಭಕ್ತರು ಹಾಗೂ ಸಾರ್ವಜನಕರು ಸಹಕರಿಸಬೇಕು. ಆಸ್ತಿಯ ಸಂರಕ್ಷಣೆಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ಸಮಯದಲ್ಲಿ ಮಠದ ಪರವಾಗಿ ರಾಜ್ಯದಲ್ಲಿ ಜಿ.ಐ. ಸುರಣಗಿ, ಎಸ್.ಕೆ. ಕುಲಕರ್ಣಿ ಹಾಗೂ ದೆಹಲಿಯ ಸರ್ವೋಚ್ಚ ನ್ಯಾಯಾಲಯದಲ್ಲಿ ಅಲ್ತಾಪ ಅಹ್ಮದ್ ಮತ್ತು ದೇಶಪಾಂಡೆ ಎಂಬ ವಕೀಲರು ವಾದವನ್ನು ಸಮರ್ಥವಾಗಿ ಮಂಡಿಸಿದ್ದರು. ಇದರಿಂದ ನ್ಯಾಯಕ್ಕೆ ಜಯ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭ ಐರಣಿ ಗ್ರಾಪಂ ಉಪಾಧ್ಯಕ್ಷ ಬಿ.ಎಸ್. ಕಟ್ಟಿಮನಿ, ಪರಮೇಶಪ್ಪ ಸಾರದ, ನೀಲಾಚಾರಿ ಕಮ್ಮಾರ, ಕುಮಾರ ಹಲಗೇರಿ, ಬಾಬಣ್ಣ ಶೆಟ್ಟರ್, ರುದ್ರಪ್ಪ ಹರವಿ, ಇನ್ನಿತರರು ಉಪಸ್ಥಿತರಿದ್ದರು.
---