ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ
ಹಾವೇರಿ: ಕುಡಿಯುವ ನೀರು, ನೈರ್ಮಲ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ನಡುವಿನಮಠ ದಡ್ಡಿ ಓಣಿಯ ನಿವಾಸಿಗಳು ರಸ್ತೆ ಮೇಲೆ ಖಾಲಿ ಕೊಡಗಳನ್ನಿಟ್ಟು ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಜಮಾಯಿಸಿದ ಮಕ್ಕಳು, ಮಹಿಳೆಯರು ಹಾಗೂ ಸಾರ್ವಜನಿಕರು ಸುಮಾರು ನಾಲ್ಕು ಗಂಟೆ ರಸ್ತೆ ತಡೆ ನಡೆಸಿದರು. ಅಲ್ಲದೇ, ನಗರಸಭೆ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿದರು. ಟೈರ್ ಹಾಗೂ ರಟ್ಟಿನ ಖಾಲಿ ಡಬ್ಬಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಓಣಿಯ ಮುಖಂಡ ಅಬ್ದುಲ್‌ಖಾದೀರ್ ಜಿಲಾನೆ ಹಾಗೂ ಪ್ರದೀಪ ನಡುವಿನಮಠ ಮಾತನಾಡಿ, ಕಳೆದ ಒಂದೂವರೇ ತಿಂಗಳಿನಿಂದ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ. ಆರು ತಿಂಗಳಿನಿಂದ ಗಟಾರು ಸ್ವಚ್ಛ ಮಾಡಿಲ್ಲ. ಈ ಕುರಿತು ನಗರಸಭೆ ಅಧಿಕಾರಿಗಳನ್ನು ಕೇಳಲು ಹೋದರೆ, ನಮ್ಮನ್ನು ಹೊಡೆಯಲು ಬಂದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡುವುದಾಗಿ ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಡುವಿನಮಠ ದಡ್ಡಿ ಓಣಿ ಪ್ರದೇಶ ಮಾರುಕಟ್ಟೆ ಪ್ರದೇಶದಲ್ಲಿ ಬರುವುದರಿಂದ ಜನದಟ್ಟನೆ ಹೆಚ್ಚಾಗಿರುತ್ತದೆ. ಮಾರುಕಟ್ಟೆಗೆ ಬಂದ ಜನರು ಮನೆಗೆ ಬಂದು ಕುಡಿಯಲು ಗ್ಲಾಸು ನೀರು ಕೇಳಿದರೂ ಕೊಡದಂತಹ ದಯನೀಯ ಸ್ಥಿತಿ ಓಣಿಯಲ್ಲಿದೆ. ಗಟಾರುಗಳನ್ನು ಸ್ವಚ್ಛ ಮಾಡದೇ ಹಲವು ತಿಂಗಳುಗಳೇ ಗತಿಸಿವೆ. ಅವು ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಅಲ್ಲದೆ ದುರ್ವಾಸನೆ ಬೀರುತ್ತಿದೆ. ಓಣಿಯಲ್ಲಿ ಸ್ವಚ್ಛತೆ ಇಲ್ಲದೇ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಜನರು ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ಅಲೆಯುವಂತಾಗಿದೆ ಎಂದು ದೂರಿದರು.
ಅಕ್ಟೋಬರ್ ತಿಂಗಳಲ್ಲಿಯೇ ಸ್ವಚ್ಛತೆ, ಬೋರವೆಲ್ ದುರಸ್ತಿ ಮಾಡುವಂತೆ ನಗರಸಭೆ ಆಯುಕ್ತರಿಗೆ ಲಿಖಿತ ಮನವಿ ಮಾಡಿದ್ದೇವೆ. ಒಂದೇ ವಾರದಲ್ಲಿ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿ ಈವರೆಗೆ ಇತ್ತ ಸುಳಿದಿಲ್ಲ ಎಂದು ಆಪಾದಿಸಿದರು.
ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ ಸ್ವಚ್ಛಗೊಳಿಸಬೇಕು. ಬೀದಿ ದೀಪ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಡುವಿನಮಠ, ಮುಜಾವರ, ಹಿರೇಮಠ, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.