ಹಾವೇರಿ: ಮಹಾಂತ ಶಿವಾಚಾರ್ಯ ಸ್ವಾಮೀಜಿಗೆ ಶ್ರದ್ಧಾಂಜಲಿ
ಹಾನಗಲ್ಲ: ವೀರಶೈವ ಪಂಚಮಸಾಲಿ ಪೀಠದ ಸ್ಥಿರ ಪಟ್ಟಾಧ್ಯಕ್ಷರಾದ ಡಾ. ಮಹಾಂತ ಶಿವಾಚಾರ್ಯ ಮಾಹಾಸ್ವಾಮೀಜಿ ಪಂಚಮಸಾಲಿ ಜನಾಂಗವನ್ನು ಜಾಗೃತ ಸಮಾಜವನ್ನಾಗಿಸಲು ಪಟ್ಟ ಶ್ರಮ ಹಾಗೂ ಪೀಠ ಸ್ಥಾಪನೆಯ ಮಹತ್ತರ ಕಾರ್ಯವನ್ನು ಸಮಾಜ ಮರೆಯಲಾರದು ಎಂದು ಸಮಾಜದ ಮುಖಂಡ ಎ.ಎಸ್. ಬಳ್ಳಾರಿ ಹೇಳಿದರು.
ಲಿಂಗೈಕ್ಯರಾದ ಹಾನಗಲ್ಲಿನಲ್ಲಿ ವೀರಶೈವ ಪಂಚಮಸಾಲಿ ಪೀಠದ ಸ್ಥಿರಪಟ್ಟಾಧ್ಯಕ್ಷರಾದ ಡಾ. ಮಹಾಂತ ಶಿವಾಚಾರ್ಯ ಮಾಹಾಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ಶ್ರೀಗಳ ಶ್ರಮದಿಂದ ಪಂಚಮಸಾಲಿ ಸಮಾಜವನ್ನು ಸರ್ಕಾರ ಈಗ 2ಎ ಮೀಸಲಾತಿಗೆ ಸೇರಿಸುವ ಯತ್ನ ಸಾಗಿದೆ. ಪೀಠ ಸ್ಥಾಪನೆಯಿಂದ ಇಡೀ ಸಮಾಜ ಒಟ್ಟಾಗಲು ಸಾಧ್ಯವಾಗಿದೆ ಎಂದರು.
ಮಾಲತೇಶ ಸೊಪ್ಪಿನ, ಎ.ಎಸ್. ಬಳ್ಳಾರಿ, ಎನ್.ಎಸ್. ಪಡೆಪ್ಪನವರ, ಮಾರುತಿ ಶಿಡ್ಲಾಪುರ, ನಾಗಪ್ಪ ಶಿವಣ್ಣನವರ, ರಾಜಣ್ಣ ಬೆಟಗೇರಿ, ಸೈದಣ್ಣನವರ, ನಿಜಲಿಂಗಪ್ಪ ಮುದೆಪ್ಪನವರ, ಬಾಬಣ್ಣ ಪಟ್ಟಣಶೆಟ್ಟಿ, ಯಲ್ಲಪ್ಪ ಮಾವೂರ, ಎಲ್.ಎಸ್. ಶಿವಣ್ಣವರ, ಕುಳೇನೂರು, ಮಳೆಣ್ಣನವರ, ಶಿವಣ್ಣ ಹೋತನಹಳ್ಳಿ, ಬಸವರಾಜ ಸೂರಗೊಂಡರ, ಕಲ್ಲಪ್ಪ ಪೂಜಾರ ಇತರರು ಇದ್ದರು.
--
ಚನ್ನಮ್ಮ ಪುತ್ಥಳಿ ಅನಾವರಣಕ್ಕೆ 10 ಲಕ್ಷ
ಹಿರೇಕೆರೂರು: ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿ ಅನಾವರಣ ಮಾಡಲು ಸರ್ಕಾರ ರು. 10 ಲಕ್ಷ ಬಿಡುಗಡೆ ಮಾಡಿದೆ ಎಂದು ಬಿಜೆಪಿ ಮುಖಂಡ ಪಾಲಾಕ್ಷಗೌಡ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ನಡೆದ ಪಂಚಮಸಾಲಿ ಸಮಾಜದ ಸಮಾರಂಭದಲ್ಲಿ ತಾವು ನೀಡಿದ ಭರವಸೆಯಂತೆ ಸರ್ಕಾರದ ಮೇಲೆ ಒತ್ತಡ ತಂದು ಪುತ್ಥಳಿ ಅನಾವರಣಕ್ಕೆ ಹಣ ಮಂಜೂರು ಮಾಡಿಸಿದೆ ಎಂದರು.