ಕ್ರಿಕೆಟ್: ರಾಣಿಬೆನ್ನೂರು ತಂಡಕ್ಕೆ ಉದಾಸಿ ಟ್ರೋಫಿ
ಹಾನಗಲ್ಲ: ಹಾನಗಲ್ಲಿನ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕ್ರಬ್ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಶಿವಕುಮಾರ ಉದಾಸಿ ಕ್ರಿಕೆಟ್ ಟ್ರೋಫಿ ರಾಣಿಬೆನ್ನೂರು ತಂಡದ ಪಾಲಾಗಿದೆ. ಗಾಜಿಪುರ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು. ಮಂಗಳೂರು, ಬಾಗಲಕೋಟೆ, ಬಿಜಾಪುರ, ತುಮಕೂರ, ಕಾರವಾರ ಮುಂತಾದ ಕಡೆಗಳ 20ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು. ಮಹಾರಾಷ್ಟ್ರ ಹಾಗೂ ಗೋವಾ ಆಟಗಾರರ ಪ್ರದರ್ಶನ ಕ್ರಿಕೆಟ್ಪ್ರಿಯರಿಗೆ ರಸದೌತಣ ನೀಡಿತು. ಅಂತಿಮ ಪಂದ್ಯದಲ್ಲಿ ಎದುರಾದ ರಾಣಿಬೆನ್ನೂರು ಹಾಗೂ ಹೊರರಾಜ್ಯದ ಆಟಗಾರರನ್ನು ಒಳಗೊಂಡ ಗಾಜಿಪುರ ತಂಡಗಳು ರೋಚಕತೆಗೆ ಸಾಕ್ಷಿಯಾದವು. ಎಂಟು ದಿನಗಳ ಪಂದ್ಯಾವಳಿಯ ಫೈನಲ್ ಪಂದ್ಯ ವೀಕ್ಷಿಸಲು 10 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಆಗಮಿಸಿದ್ದರು. ಮಾಜಿ ಸಚಿವ ಸಿ.ಎಂ. ಉದಾಸಿ ಬಹುಮಾನ ವಿತರಿಸಿದರು. ಎ.ಎಸ್. ಬಳ್ಳಾರಿ, ಬಿ.ಎಸ್. ಅಕ್ಕಿವಳ್ಳಿ, ಬಾಬಾಜಾನ ಕೊಂಡವಾಡೆ ಇದ್ದರು.