ಶಿಕ್ಷಣಕ್ಕೆ ರಂಭಾಪುರಿ ಶಿಕ್ಷಣ ಸಂಸ್ಥೆ ವರದಾನ
ಶಿಗ್ಗಾಂವಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ರಂಭಾಪುರಿ ಶಿಕ್ಷಣ ಸಂಸ್ಥೆ ವರದಾನವಾಗಿದೆ. ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆಯಲು ಮುಂದಾಗಬೇಕು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹೇಳಿದರು.
ಪಟ್ಟಣದ ರಂಭಾಪುರಿ ಜ. ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕ ಸ್ನೇಹಸಮ್ಮೇಳನ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನಸಂಗ್ರಹ ಅಗತ್ಯ. ಜ್ಞಾನವಂತರು, ಪ್ರತಿಭಾವಂತರು ಈ ನಾಡಿನ ಭದ್ರ ಬುನಾದಿ. ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಮೂಲಕ ಎನ್‌ಎಸ್‌ಎಸ್, ಎನ್‌ಸಿಸಿ ಘಟಕದಲ್ಲಿ ಸೇರುವುದು ಅಗತ್ಯವಾಗಿದೆ. ಶಿಕ್ಷಣದ ಜೊತೆಗೆ ದೈಹಿಕವಾಗಿ, ಆರೋಗ್ಯವಂತರಾಗಲು ಇದರಿಂದ ಸಾಧ್ಯವಿದೆ ಎಂದರು.
ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಮಾತನಾಡಿ, ದೇಶದ ಭವಿಷ್ಯ ವಿದ್ಯಾರ್ಥಿಗಳಲ್ಲಿ ಅಡಗಿದೆ. ಹೀಗಾಗಿ ವಿದ್ಯಾರ್ಥಿಗಳು ದುಶ್ಚಟಗಳನ್ನು ಬಿಟ್ಟು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಆಡಳಿತಾಧಿಕಾರಿ ವಿಶ್ವನಾಥಸ್ವಾಮಿ ಕಂಬಾಳಿಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಎಂ.ಎ. ಕದಂ, ಪ್ರಾಚಾರ್ಯ ಸಿ.ಎಚ್. ತಾವರಗುಂದಿ, ಮಮತಾ ಹೊನ್ನಪ್ಪನವರ, ಎನ್‌ಎಸ್‌ಎಸ್ ಅಧಿಕಾರಿ ಎಸ್.ಎಫ್. ಶಿವಣ್ಣನವರ, ಎನ್.ಸಿ. ಪಾಟೀಲ, ಎಂ.ಎನ್. ವೆಂಕೋಜಿ, ಎಂ.ಬಿ. ಅಂಕಲಕೋಟಿ, ಹನುಮರೆಡ್ಡಿ ನಡುವಿನಮನಿ, ಎಸ್.ಎನ್. ಶೇಖ್, ಗದಿಗೆಯ್ಯ ಹಿರೇಮಠ, ಎಂ.ಎಸ್. ಸಿದ್ದಪ್ಪನವರ, ಎಸ್.ಬಿ. ಪೂಜಾರ, ಎನ್.ಸಿ. ನಾಯಕ, ಮತ್ತಿತರರು ಉಪಸ್ಥಿತರಿದ್ದರು.
ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎಸ್.ವಿ. ಕುಲಕರ್ಣಿ ವರದಿ ವಾಚನ ಮಾಡಿದರು. ಎಸ್.ಎನ್. ತೀರ್ಥ ಸ್ವಾಗತಿಸಿದರು. ಶಿವಪ್ರಕಾಶ ಬಳಿಗಾರ ನಿರ್ವಹಿಸಿದರು. ಎಂ.ಎಸ್. ಸಂಗಣ್ಣವರ ವಂದಿಸಿದರು.