ಈಗ್ಲೇ ನೀರಿಲ್ಲ, ಬೇಸಿಗೆ ಹೇಗೆ ನಿಭಾಯಿಸ್ತೀರಿ?
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಫೆ. 6
ತಾಲೂಕಿನ ಕೊಲ್ಲಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಖಾಸಗಿ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ಬೇಸಿಗೆ ಶುರುವಾಗುವ ಮೊದಲೇ ಇಂಥ ಪರಿಸ್ಥಿತಿ ಎದುರಾದರೆ, ಮುಂದಿನ ದಿನಗಳನ್ನು ಹೇಗೆ ನಿಭಾಯಿಸಬಲ್ಲಿರಿ ಎಂದು ತಾಪಂ ಉಪಾಧ್ಯಕ್ಷ ಚಂದ್ರಪ್ಪ ಮುಚ್ಚಟ್ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಲು ಅಧಿಕಾರಿಗಳೇ ಕಾರಣ. ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದರೂ ಜಿಪಂ ಎಂಜಿನಿಯರಿಂಗ್ ವಿಭಾಗ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಜನರಿಗೆ ಉತ್ತರ ಹೇಳುವುದು ಕಷ್ಟವಾಗಿದೆ. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಚಂದ್ರಪ್ಪ ಎಚ್ಚರಿಸಿದರು.
ಸಹಾಯಕ ಅಭಿಯಂತರ ಉಳ್ಳಾಗಡ್ಡಿ ಮಾತನಾಡಿ, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ 600 ಅಡಿಗಿಂತ ಹೆಚ್ಚು ಆಳಕ್ಕೆ ಕೊಳವೆಬಾವಿ ತೆಗೆಸುವಂತಿಲ್ಲ. ಅಂತರ್ಜಲ ಕುಸಿದಿದೆ. ಹೆಚ್ಚು ಆಳಕ್ಕೆ ಕೊರೆದರೆ ಮಾತ್ರ ಕೊಲ್ಲಾಪುರ ಮತ್ತಿತರ ಗ್ರಾಮಗಳಲ್ಲಿ ನೀರು ಸಿಗುತ್ತದೆ. ಹೀಗಾಗಿ, ಸಮಸ್ಯೆ ಪರಿಹಾರ ಕಷ್ಟವಾಗಿದೆ ಎಂದರು.
23 ಗ್ರಾಮಗಳಲ್ಲಿ ನೀರಿಲ್ಲ
ತಾಲೂಕಿನ 23 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ದುಮ್ಮಿಹಾಳ, ಚಿಕ್ಕಳ್ಳಿಯಲ್ಲಿ ಕೊಳವೆ ಬಾವಿ ಕೊರೆಸಿ ಎರಡು ತಿಂಗಳಾದರೂ ಪೈಪ್ಲೈನ್ ಕಾಮಗಾರಿ ಪೂರ್ಣಗೊಂಡಿಲ್ಲ. ವಿಳಂಬಕ್ಕೆ ಕಾರಣವೇನು ಎಂದು ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ ಪ್ರಶ್ನಿಸಿದರು.
ಜಿಪಂ ಅಭಿಯಂತರ ಉಳ್ಳಾಗಡ್ಡಿ ಮಾತನಾಡಿ, ಕೆಲ ಗ್ರಾಮಗಳಲ್ಲಿ ಮೇಲ್ಮಟ್ಟದ ಜಲಾಗಾರ ಕಟ್ಟಡ ಕಾಮಗಾರಿ ಚಾಲ್ತಿಯಲ್ಲಿದ್ದು, ನೀರು ಸಂಗ್ರಹಿಸಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಬೇಗನೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರನಿಗೆ ಸೂಚಿಸಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿದರು.
ನೀರು ಬಿಡುತ್ತಿಲ್ಲ
ಮೋಟೆಬೆನ್ನೂರ ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಸಲು 4 ಸಾವಿರ ಕ್ಯುಸೆಕ್ ನೀರು ಅಗತ್ಯವಿದೆ. ಆದರೆ ಕೇವಲ 2500 ಕ್ಯುಸೆಕ್ ನೀರು ಬಿಡಲಾಗುತ್ತಿದ್ದು, ಕೆಲವು ಗ್ರಾಮಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಕುಡಿಯುವ ನೀರಿಗೆ ಆದ್ಯತೆ ನೀಡುವ ಉದ್ದೇಶದಿಂದ ಕೃಷಿ ಉದ್ದೇಶಕ್ಕೆ ನೀರು ಬಳಸುವುದನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ ಎಂದು ಉಳ್ಳಾಗಡ್ಡಿ ಹೇಳಿದರು.
ಕಂಬ ತೆಗೆದು ಪುಣ್ಯಕಟ್ಕೊಳ್ಳಿ
ರಸ್ತೆ ಅಗಲೀಕರಣ ಕಾಮಗಾರಿ ಕೈಗೊಂಡ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ರಸ್ತೆಯ ಮಧ್ಯದಲ್ಲೇ ಉಳಿದು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಈ ಬಗ್ಗೆ ನಾಲ್ಕು ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಚರ್ಚಿಸಿ, ಸ್ಥಳಾಂತರಕ್ಕೆ ಸೂಚನೆ ನೀಡಿದರೂ ಹೆಸ್ಕಾಂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ. ಇನ್ನಾದರೂ ಕಂಬ ಸ್ಥಳಾಂತರಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ತಾಪಂ ಅಧ್ಯಕ್ಷೆ ಚಿನ್ನವ್ವ ಪಾಸಿ ಅಂಗಲಾಚಿದರು.
ಹೆಸ್ಕಾಂ ಅಧಿಕಾರಿ ದಾಸಪ್ಪ ಮಾತನಾಡಿ, ಲೋಕೋಪಯೋಗಿ ಇಲಾಖೆಯು ರಸ್ತೆ ಕಾಮಗಾರಿ ವೇಳೆಯಲ್ಲೇ ರಸ್ತೆ ಮಧ್ಯದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕಾಗಿತ್ತು. ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕಂಬಗಳು ರಸ್ತೆಯಲ್ಲೇ ಉಳಿದಿವೆ. ಈಗ ಲೋಕೋಪಯೋಗಿ ಇಲಾಖೆ ಮೂಲಕ ರು. 3.75 ಲಕ್ಷ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ಸಿಕ್ಕ ಬಳಿಕ ಸ್ಥಳಾಂತರಿಸಲಾಗುವುದು ಎಂದರು.
ರಸ್ತೆ ಮೇಲೆ ಕಂಬ ಎಳೆಯಬೇಡಿ
ವಿದ್ಯುತ್ ಕಂಬಗಳ ಜೋಡಣೆ ಮಾಡುವಾಗ ರಸ್ತೆಗಳ ಮೇಲೆ ಭಾರವಾದ ಕಂಬಗಳನ್ನು ಎಳೆದೊಯ್ಯುತ್ತಾರೆ. ರಸ್ತೆ ಪಕ್ಕ ಕೇವಲ ಒಂದು ಅಡಿ ಅಂತರದಲ್ಲಿ ಕಂಬ ಹಾಕುತ್ತಾರೆ. ಹೀಗಾಗಿ, ತಾಲೂಕಿನ ಹಲವೆಡೆ ರಸ್ತೆಗಳು ಕಿತ್ತುಹೋಗಿವೆ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಲೋಕೋಪಯೋಗಿ ಅಭಿಯಂತರ ಚನ್ನಬಸಪ್ಪ ಮನವಿ ಮಾಡಿದರು.
ಗೈರು ಹಾಜರಿಗೆ ಕ್ರಮ
ಇಓ ಕೆ. ಕೃಷ್ಣಮೂರ್ತಿ ಮಾತನಾಡಿ, ಅಧಿಕಾರಿಗಳು ಸಭೆಗೆ ಗೈರು ಹಾಜರಾಗುತ್ತಿದ್ದು, ಇದರಿಂದ ಸಭೆಗೆ ಸರಿಯಾದ ಮಾಹಿತಿ ಲಭ್ಯವಿಲ್ಲದಂತಾಗಿದೆ. ಸಭೆಗೆ ಹಾಜರಾಗಲು ತಿಳಿಸಿದರೂ ನಿರ್ಲಕ್ಷ್ಯ ಮುಂದುವರಿದಿದೆ. ಇದೇ ಸ್ಥಿತಿ ಮುಂದುವರಿದಲ್ಲಿ ಜಿಲ್ಲಾಧಿಕಾರಿಗೆ ಮಾಹಿತಿ ನೀಡುವುದಾಗಿ ಎಚ್ಚರಿಸಿದರು.