ಕರೆಂಟ್ ಕೊಡಿ, ಓದೋದು ಹೇಗೆ?
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 6
ಕರೆಂಟ್ ಕೊಡಿ... ಇಲ್ಲದಿದ್ದರೆ ಮಕ್ಕಳು ಓದುವುದು ಹೇಗೆ ಎಂದು ಇಲ್ಲಿನ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿ ಅಧ್ಯಯನಕ್ಕೆ ಮಹತ್ವದ ಅವಧಿ ಇದು. ಪ್ರಥಮ ಪಿಯುಸಿ ಪರೀಕ್ಷೆಗಳು ಆರಂಭವಾಗಿವೆ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಮತ್ತಿತರ ತರಗತಿಗಳ ಪರೀಕ್ಷೆಗಳೂ ಹತ್ತಿರದಲ್ಲಿವೆ. ಆದರೆ ಅನಿಯಮಿತ ಲೋಡ್ ಶೆಡ್ಡಿಂಗ್ ಪರಿಣಾಮವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದು ಫಲಿತಾಂಶದ ಮೇಲೆ ಗಂಭೀರವಾದ ಪರಿಣಾಮ ಬೀರಲಿದೆ. ಸರ್ಕಾರ ತಕ್ಷಣ ಲೋಡ್ ಶೆಡ್ಡಿಂಗ್ ಪ್ರಕ್ರಿಯೆ ಕೈಬಿಟ್ಟು ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲವಾಗುವಂತೆ ಹಾಗೂ ಜನಸಾಮಾನ್ಯರಿಗೆ ತೊಂದರೆ ಆಗದಂತೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಸರ್ಕಾರಗಳು ಕೇವಲ ಜಲವಿದ್ಯುತ್ ಉತ್ಪಾದನೆ ಕೊರತೆಯ ನೆಪ ಬಿಟ್ಟು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಪವನ ವಿದ್ಯುತ್ ಮತ್ತಿತರ ವಿಧಾನಗಳ ಮೂಲಕ ವಿದ್ಯುತ್ ಉತ್ಪಾದನೆಗೆ ಮುಂದಾಗಬೇಕು, ಖಾಸಗಿಯವರಿಂದ ವಿದ್ಯುತ್ ಪಡೆಯುವ ಬದಲು ಸರ್ಕಾರಗಳು ತಾವೇ ವಿದ್ಯುತ್ ಉತ್ಪಾದನೆಗೆ ಮುಂದಾಗಬೇಕು. ಕಡಿಮೆ ಖರ್ಚಿನಲ್ಲಿ ವಿದ್ಯುತ್ ಉತ್ಪಾದಿಸಿ, ಜನಸಾಮಾನ್ಯರಿಗೆ ಮಿತ ದರದಲ್ಲಿ ವಿದ್ಯುತ್ ಸೌಲಭ್ಯ ಒದಗಿಸಬೇಕು. ಸಂಶೋಧನೆಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಮೆರವಣಿಗೆ ನಗರದ ಟಿಎಂಇಎಸ್ ಕಾಲೇಜಿನಿಂದ ಆರಂಭವಾಗಿ ಜಿ.ಎಚ್. ಕಾಲೇಜಿನ ಎದುರು ಬಂದು ಸೇರಿದಾಗ, ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಪೂಜಾರ, ಕಾರ್ಯದರ್ಶಿ ರೇಣುಕಾ ಕಹಾರ, ವಿನಾಯಕ, ನೀಲಮ್ಮ ಶೋಕ್ರಪ್ಪನವರ, ಬಾಹುಬಲಿ ಪಾಟೀಲ, ಚನಬಸಯ್ಯ ಹಿರೇಮಠ, ಮಂಜು ಶಿಗ್ಲಿ, ಅರ್ಚನಾ ಕಲ್ಲಮ್ಮನರ, ಶೃತಿ, ನಂದಿನಿ, ಸುರೇಖಾ, ಪ್ರಿಯಾ, ಸುಶ್ಮಿತಾ, ಸವಿತಾ, ಸಹನಾ ಬಳಗಲಿ, ರೂಪಾ, ಬಸವರಾಜ ಎರೇಸೀಮಿ, ಶರಣ ಪೂಜಾರ, ವಿಶಾಲ ಎಂ., ಶೀತಲ, ಮಂಜು ಉಪಾಧ್ಯ, ಲಿಂಗರಾಜು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.