ಮೊದ್ಲ ನೀರ್ ಕೊಡ್ರಿ, ಆಮೇಲೆ ಕೇಸ್ ಹಾಕ್ರಿ
- ಕಿರಣ ಮಾಸಣಗಿ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 6
ನಮ್ಮ ಮ್ಯಾಲೆ ಕೇಸ್ ಹಾಕ್ತೀರ್ರೀ.. ಹಾಕ್ರಿ ನೋಡೋಣ. ನಾವೇನ್ ಕಳವ್ ಮಾಡೇವೋ, ಖೂನಿ ಮಾಡೇವೋ ಏನ್ ದಗಲ್ಬಾಜಿ ಮಾಡೇವಿ ಅಂತ ಕೇಸ್ ಹಾಕ್ತೀರಿ? ನೀರ್ ಕೇಳಿದ್ರ ಕೇಸ್ ಹಾಕ್ತೀರೀ. ಮೊದ್ಲ ನೀರ್ ಕೊಡ್ರಿ ಆಮೇಲೇ ಕೇಸ್ ಹಾಕ್ರಿ ಎಂಬ ಗುಡುಗಿದ ಯಮುನಮ್ಮನ ಅಬ್ಬರಕ್ಕೆ ಪೊಲೀಸ್ ಅಧಿಕಾರಿಯೇ ಸುಸ್ತು.
ಬುಧವಾರ ಹಾವೇರಿ ಹೊಸಪೇಟೆ ರಸ್ತೆ ತಡೆದು ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರನ್ನು ಪೊಲೀಸರು ದಬಾಯಿಸಿ ದೂರ ಸರಿಸಲು ಮುಂದಾಗಿ ಕೇಸ್ ಹಾಕ್ತೇವೆ ಎಂದು ಬೆದರಿಸಿದಾಗ ಬಂದ ಉತ್ತರ ಕಂಡು ಪೊಲೀಸಪ್ಪನೇ ದಂಗಾಗಿ ಹೋದ.
ಇದು ಹಾವೇರಿಯ ಇಂದಿನ ನೈಜ ಸ್ಥಿತಿ. ಕಳೆದ ಒಂದೂವರೆ ತಿಂಗಳಿನಿಂದ ಕುಡಿಯುವ ನೀರು ಪೂರೈಕೆಯಾಗಿಲ್ಲ. ಈ ಕುರಿತಂತೆ ದಿನಂಪ್ರತಿ ಕನಿಷ್ಠ 3-4 ಕಡೆ ನೀರಿಗಾಗಿ ರಸ್ತೆ ತಡೆ, ಪ್ರತಿಭಟನೆ ಸಾಮಾನ್ಯ ಎಂಬಷ್ಟರ ಮಟ್ಟಿಗೆ ನೀರಿನ ಸಮಸ್ಯೆ ಹಾವೇರಿ ನಗರದಲ್ಲಿ ತಲೆದೋರಿದೆ. ಆದರೆ, ಈ ಕುರಿತಂತೆ ಸಂಬಂಧಿಸಿದ ನಗರಸಭೆ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಕ್ಯಾರೆ ಎನ್ನುತ್ತಿಲ್ಲ.
ಕೂಡಲೇ ನೀರಿನ ಪೂರೈಕೆಗೆ ಗಮನ ಹರಿಸದೇ ಹೋದಲ್ಲಿ ನೀರಿಗಾಗಿ ಕಾದಾಟವೇ ನಡೆಯುವ ದಿನಗಳು ದೂರವಿಲ್ಲ ಎಂಬಂಥ ಸ್ಥಿತಿ ಇಂದು ಹಾವೇರಿ ನಗರದಲ್ಲಿದೆ.
ಮುನ್ನೆಚ್ಚರಿಕೆಯೇ ಇಲ್ಲ: ಪ್ರತಿ ವರ್ಷ ಜನವರಿ ಇಲ್ಲವೇ ಫೆಬ್ರವರಿ ಮೊದಲ ವಾರದಲ್ಲೇ ಹಾವೇರಿ ನಗರಕ್ಕೆ ನೀರು ಸರಬರಾಜು ಮಾಡುವ ಕಂಚಾರಗಟ್ಟಿಯ ಸೇತುವೆಗೆ ಉಸುಕಿನ ಚೀಲಗಳ ತಡೆಗೋಡೆ ನಿರ್ಮಿಸಿ ನೀರನ್ನು ತಡೆಹಿಡಿಯಲಾಗುತ್ತಿತ್ತು. ಆದರೆ, ಕಳೆದ 2 ವರ್ಷಗಳಿಂದ ಜಿಲ್ಲೆ ಬರಗಾಲಕ್ಕೆ ತುತ್ತಾಗಿದೆ.
ಪ್ರಸಕ್ತ ವರ್ಷ ಡಿಸೆಂಬರ ಆರಂಭದಲ್ಲೇ ನೀರನ್ನು ತಡೆಯಲು ಕ್ರಮ ಜರುಗಿಸಬಹುದಾಗಿತ್ತು. ಆದರೆ, ಈ ಕುರಿತಂತೆ ನಗರಸಭೆ ಮುನ್ನೆಚ್ಚರಿಕೆ ವಹಿಸಲೇ ಇಲ್ಲ. ಅಲ್ಲದೇ ಪ್ರಸ್ತುತ ನಗರಸಭಾ ಸದಸ್ಯರಲ್ಲಿನ ಒಳಬೇಗುದಿ, ಸಹಕಾರ ಇಲ್ಲದಿರುವುದು ಹಾಗೂ ಹೊಂದಾಣಿಕೆ ಕೊರತೆಯಿಂದಾಗಿ ಇಂದು ಇಡೀ ನಗರದ ಜನತೆ ನೀರಿಗಾಗಿ ಪರಿತಪಿಸುವಂತಾಗಿದೆ.
ಪರಸ್ಪರ ಕೆಸರೆರಚಾಟ: ಈ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತಮ್ಮ ತಮ್ಮೊಳಗಿನ ಮತ್ಸರವನ್ನು ಪ್ರದರ್ಶಿಸುತ್ತ, ಒಬ್ಬರು ಮತ್ತೊಬ್ಬರನ್ನು ವಾಚಾಮಗೋಚರವಾಗಿ ಬೈದಾಡುತ್ತ ಅಡ್ಡಾಡಿದ್ದೇ ಇವರ ಸಾಧನೆ ಎಂಬಂತಾಗಿದೆ. ಪರಸ್ಪರರು ಕೆಸರೆರಚುತ್ತಾ ಜವಾಬ್ದಾರಿಯಿಂದ ನುಣುಚಿಕೊಂಡರೇ ಹೊರತು ಯಾರೂ ಕಾರ್ಯನಿರ್ವಹಿಸಲು ಮುಂದಾಗುತ್ತಿಲ್ಲ. ಈ ಕುರಿತಂತೆ ದಿನಂಪ್ರತಿ ಒಂದಿಲ್ಲೊಂದು ವಾರ್ಡಿನ, ಓಣಿಯ ಜನತೆ ಮನವಿ ಸಲ್ಲಿಸುವುದು, ದೂರವಾಣಿ ಮೂಲಕ ಆಗ್ರಹಿಸುವುದು ಇಲ್ಲಿನವರಿಗೆ ಸಾಮಾನ್ಯ ಎನಿಸಿದೆಯಾದರೂ ಈ ಕುರಿತಂತೆ ಗಂಭೀರ ಚಿಂತನೆ ನಡೆಸದಿರುವುದು ದೌರ್ಭಾಗ್ಯ.
ನೀರಿಗಾಗಿ ನೀರೆಯರಿಂದ ಕಾದಾಟ: ದಿನಂಪ್ರತಿ ಒಂದಿಲ್ಲೊಂದು ಕಡೆ ನೀರಿಗಾಗಿ ನೀರೆಯರು ಕಾದಾಡುವ ನೋಟ ಹಾವೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದುದರ ಸಂಕೇತವೇ ಆಗಿದೆ. ಇದರಿಂದಾಗಿ ಪ್ರತಿ ಮನೆಗಳಲ್ಲಿ 20 ಲೀಟರ್‌ಗಳ ಮಿನರಲ್ ವಾಟರ್ ತರಿಸಿಟ್ಟುಕೊಂಡು ಜೀವನ ನಿರ್ವಹಿಸುವಂತಾಗಿದೆ.
ಈ ಕುರಿತಂತೆ ಪುರಸಭೆಯ ಮಾಜಿ ಅಧ್ಯಕ್ಷ ಪರಶುರಾಮ ಅಡಕಿ ಪತ್ರಿಕೆಯೊಂದಿಗೆ ಮಾತನಾಡಿ, ಪ್ರಸ್ತುತ ನಗರಸಭೆ ಅತ್ಯಂತ ಹೀನಾಯ ಹಾಗೂ ನಿರ್ಲಜ್ಜವಾಗಿದೆ. ಆಡಳಿತ ಮಂಡಳಿಯ ದೂರದೃಷ್ಟಿ ಕೊರತೆಗೆ ಇದು ಕನ್ನಡಿ ಹಿಡಿದಂತಾಗಿದೆ. ಪ್ರತಿ ಬಾರಿ ಈ ಕುರಿತಂತೆ ಎಚ್ಚರಿಕೆ ವಹಿಸಬೇಕಾಗಿತ್ತು.
ಹಾವೇರಿಗೆ ನೀರು ಸರಬರಾಜು ಮಾಡುವ ಕಂಚಾರಗಟ್ಟಿಯಲ್ಲಿ ನೀರು ನಿಲುಗಡೆಗೆ ಕ್ರಮ ಜರುಗಿಸಿಲ್ಲ. ಬರದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರಾ ಜಲಾಶಯದಿಂದ ಮೇಲ್ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ನೀರು ಬಿಡುಗಡೆ ಮಾಡಿಸಿಕೊಳ್ಳಬಹುದಿತ್ತು. ಆದರೆ, ನಗರಸಭೆಯವರು ಜನರ ತೊಂದರೆ ಪರಿಹರಿಸುವುದಕ್ಕಿಂತ ಸ್ವಾರ್ಥತೆಯಲ್ಲಿಯೇ ಮುಳುಗಿದ್ದಾರೆ ಎಂದು ದೂರಿದರು.
ಈ ಕುರಿತಂತೆ ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಮಾತನಾಡಿ, ಬರದ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಿಂದ ಈಗಾಗಲೇ ಅರ್ಧ ಟಿಎಂಸಿ ನೀರನ್ನು ಕಳೆದ ವಾರವೇ 2 ದಿನಗಳ ಕಾಲ ಬಿಡುಗಡೆ ಮಾಡಿ ಇದೀಗ ಪ್ರತಿದಿನ ಸುಮಾರು 250 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ಈಗಾಗಲೇ ನೀರು ರಾಣಿಬೆನ್ನೂರನ್ನು ಸಮೀಪಿಸಿದ್ದು, 2-3 ದಿನಗಳಲ್ಲಿ ಹಾವೇರಿ ನಾಗರೀಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಲಭಿಸಲಿದೆ ಎಂದು ತಿಳಿಸಿದರು.