ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಾಳೆಯಿಂದ ವಿದ್ಯಾರ್ಥಿ-ವಿಜ್ಞಾನಿ ಸಂವಾದ

Parashurama
Updated On : 8 Feb 2013, 11:14 am

ಕನ್ನಡಪ್ರಭ ವಾರ್ತೆ, ಹಾವೇರಿ, ಫೆ.7
ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಡಿಎಸ್‌ಇಆರ್‌ಟಿ, ಪದವಿಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರಾವಿಪ, ವಿವಿಧ ಇಲಾಖೆ, ಸಂಘಟನೆ ಆಶ್ರಯದಲ್ಲಿ ಡಿ. 9 ಮತ್ತು 10ರಂದು ಜಿಲ್ಲಾ ಗುರುಭವನದಲ್ಲಿ ಜಿಲ್ಲೆಯ ಆಯ್ದ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ನಾಡಿನ ಹೆಸರಾಂತ ವಿಜ್ಞಾನಿಗಳೊಂದಿಗೆ ವಿದ್ಯಾರ್ಥಿ-ವಿಜ್ಞಾನಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮೂಲ ವಿಜ್ಞಾನದ ಕಡೆಗೆ ಒಲವು ಹೆಚ್ಚಿಸಿ ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವ ಬೆಳೆಸಿ ಸ್ಫೂರ್ತಿ ತುಂಬುವುದು ಇದರ ಮೂಲ ಆಶಯ. ಜಿಲ್ಲೆಯ ಆಯ್ದ 48 ಪ್ರೌಢಶಾಲೆಯ 240 ವಿದ್ಯಾರ್ಥಿಗಳು, 48 ಜನ ಮಾರ್ಗದರ್ಶಿ ಶಿಕ್ಷಕರು ಹಾಗೂ 11 ವಿಜ್ಞಾನ ವಿಭಾಗದ ಪದವಿಪೂರ್ವ ಕಾಲೇಜಿನ 55 ವಿದ್ಯಾರ್ಥಿಗಳು ಹಾಗೂ 11 ಜನ ಉಪನ್ಯಾಸಕರು ಭಾಗವಹಿಸಿ ಪ್ರಯೋಜನ ಪಡೆಯಲಿದ್ದಾರೆ.
ಕಾರ್ಯಕ್ರಮ: ಅಂದು ಬೆಳಗ್ಗೆ 10.30ಕ್ಕೆ ಸಂಸದ ಶಿವಕುಮಾರ ಉದಾಸಿ ಉದ್ಘಾಟಿಸುವರು. ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ ಅಧ್ಯಕ್ಷತೆ ವಹಿಸುವರು. ಮಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಎಂ.ಐ. ಸವದತ್ತಿ ಆಶಯ ಭಾಷಣ ಮಾಡುವರು. ಜಿಪಂ ಉಪಾಧ್ಯಕ್ಷ ಗೀತಾ ಅಂಕಸಖಾನಿ, ಸದಸ್ಯೆ ಸರೋಜವ್ವ ಆಡಿನ, ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ, ಜಿಪಂ ಸಿಇಓ ಉಮೇಶ ಕುಸುಗಲ್ಲ, ವಿಜನ್ ಗ್ರೂಪ್ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಎಸ್. ಅನಂತರಾಜು, ಡಿಡಿಪಿಐ ಎಸ್.ಬಿ. ಕೊಡ್ಲಿ, ಡಿಡಿಪಿಐ ರವೀಂದ್ರ ಕೊಣ್ಣೂರ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಸಂಯೋಜಕ ಎ.ಎಚ್. ಕಬ್ಬಿಣಕಂತಿಮಠ ತಿಳಿಸಿದ್ದಾರೆ.
ತಾಂತ್ರಿಕ ಗೋಷ್ಠಿ-ವಿಜ್ಞಾನಿಗಳು ವಿದ್ಯಾರ್ಥಿಗಳೊಂದಿಗೆ ತಾಂತ್ರಿಕ ಗೋಷ್ಠಿಯಲ್ಲಿ ಸಂವಾದ ನಡೆಸಿ ಮೂಲ ವಿಜ್ಞಾನದ ಕಡೆಗೆ ಒಲವು ಮೂಡಲು ಸ್ಫೂರ್ತಿ ತುಂಬಲಿದ್ದಾರೆ. 9ರಂದು ಬೆಳಗ್ಗೆ 9.30ರಿಂದ 1ರ ವರೆಗೆ ಮಂಗಳೂರು ವಿವಿ ವಿಶ್ರಾಂತ ಕುಲಪತಿ ಹಾಗೂ ಹಿರಿಯ ವಿಜ್ಞಾನಿ ಪ್ರೊ. ಸವದತ್ತಿ ವಿಶ್ವದರ್ಶನ ಕುರಿತು ವಿಷಯ ಮಂಡನೆ ಮಾಡಿ ಸಂವಾದ ನಡೆಸುವರು. ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ 2ರಿಂದ 3.30ರವರೆಗೆ ಉಪಗ್ರಹಗಳ ಮೂಲಕ ಸಂಪರ್ಕ ಸಾಧನೆ ಕುರಿತು ಇಸ್ರೋ ಸಂಸ್ಥೆಯ ನಿವೃತ್ತ ವಿಜ್ಞಾನಿ ಪದ್ಮಶ್ರೀ ವಿ.ಆರ್. ಕಟ್ಟಿ ಉಪನ್ಯಾಸ ನೀಡಿ ಸಂವಾದ ನಡೆಸುವರು. ಡಿಡಿಪಿಐ ಎಸ್.ಬಿ. ಕೊಡ್ಲಿ ಅಧ್ಯಕ್ಷತೆ ವಹಿಸುವರು.
ಇಸ್ರೋ ವಿಜ್ಞಾನಿ ಡಾ. ಬಿ.ಆರ್. ಗುರುಪ್ರಸಾದ 3.30ರಿಂದ 5ರ ವರೆಗೆ ಸೌರವ್ಯೂಹದ ಅನ್ವೇಷಣೆ- ಹೊಸ ಬೆಳವಣಿಗೆಗಳು ಕುರಿತು ಉಪನ್ಯಾಸ ಮತ್ತು ಸಂವಾದ ನಡೆಸುವರು. ಡಿಡಿಪಿಐ ರವೀಂದ್ರ ಕೊಣ್ಣೂರ ಅಧ್ಯಕ್ಷತೆ ವಹಿಸುವರು. ಸಂಜೆ 5.30ರಿಂದ 6.30ರ ವರೆಗೆ ನಡೆಯುವ ಉಪನ್ಯಾಸ ಮತ್ತು ಸಂವಾದವನ್ನು ಆರೋಗ್ಯ ಮತ್ತು ರಸಾಯನಶಾಸ್ತ್ರ ಕುರಿತಂತೆ ವಿಜ್ಞಾನ ಜಾಗೃತಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಎಸ್. ಅನಂತರಾಜು ನಡೆಸಿಕೊಡುವರು. ಎಸ್.ಎಲ್. ಕಾಡದೇವರಮಠ ಅಧ್ಯಕ್ಷತೆ ವಹಿಸುವರು. ಸಂಜೆ 6.30ರಿಂದ 8.30ರವರೆಗೆ ಪವಾಡದ ಗುಟ್ಟು ಬಯಲು ಪ್ರದರ್ಶನ ನಡೆಯಲಿದೆ. ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಅಧ್ಯಕ್ಷತೆ ವಹಿಸುವರು. ಪ್ರದರ್ಶನವನ್ನು ವಿಚಾರವಾದಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ನರೇಂದ್ರ ನಾಯಕ ನಡೆಸಿಕೊಡುವರು.
ಫೆ. 10ರಂದು ಬೆಳಗ್ಗೆ 8.30ರಿಂದ 10ರವರೆಗೆ ಕ್ವಿಜ್ ಮಾಸ್ಟರ್ ಡಾ. ನಾ. ಸೋಮೇಶ್ವರ ತಜ್ಞರಾಗಿ ಭಾಗವಹಿಸಿ, ಕಲಿಕೆ-ಮರೆವು-ನೆನಪು ವಿಷಯದ ಮೇಲೆ ಉಪನ್ಯಾಸ ನೀಡಿ, ಸಂವಾದ ನಡೆಸುವರು. ಡಯಟ್ ಪ್ರಾಚಾರ್ಯ ಎಂ.ಡಿ. ಬಳ್ಳಾರಿ ಅಧ್ಯಕ್ಷತೆ ವಹಿಸುವರು. 10ರಿಂದ 12ರ ವರೆಗೆ ಹಿರಿಯ ವಿಜ್ಞಾನಿ ಎಂಆರ್‌ಎನ್ ಮೂರ್ತಿ ವಾಯುಮಂಡಲ ಮತ್ತು ಜೀವ ಕುರಿತು ಉಪನ್ಯಾಸ ಹಾಗೂ ಸಂವಾದ ನಡೆಸುವರು. ಪ್ರಭಾಕರ ಮಂಗಳೂರು ಅಧ್ಯಕ್ಷತೆ ವಹಿಸುವರು. ನಂತರ ಕ್ರಾಂತಿಕಾರಕ ರಾಸಾಯನಿಕ ಕ್ರಿಯೆಗಳು ಕುರಿತಂತೆ ಬೆಂಗಳೂರಿನ ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ.ವಿ. ಘನಶ್ಯಾಮ, ಇಸ್ರೋದ ನಿವೃತ್ತ ಎಂಜಿನಿಯರ್ ಪ್ರಭಾಕರ ಕುಲಕರ್ಣಿ ಅಂತರಿಕ್ಷದಲ್ಲಿ ಜೀವನಕ್ರಮ ಎಂಬ ವಿಷಯದ ಮೇಲೆ ಬೆಳಕು ಚೆಲ್ಲಲಿದ್ದಾರೆ.
ಸಮಾರೋಪ
ಎರಡು ದಿನಗಳ ಸಂವಾದ ಕಾರ್ಯಕ್ರಮದ ಸಮಾರೋಪ ಭಾಷಣ ಕರಾವಿಪ ಅಧ್ಯಕ್ಷ ಡಾ. ಎಚ್.ಎಸ್. ನಿರಂಜನಾರಾಧ್ಯ ಮಾಡಲಿದ್ದಾರೆ. ಡಿಡಿಪಿಐ ಕೊಡ್ಲಿ, ಡಿಡಿಪಿಐ ರವೀಂದ್ರ ಕೊಣ್ಣೂರ, ಪ್ರೊ. ಎಸ್.ವಿ. ಸಂಕನೂರ, ಬಿಇಓ ರಾಮಶೆಟ್ಟಿ, ಇತರರು ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments