ಸರ್ಕಾರೇತರ ಸಂಸ್ಥೆಗಳ ಪಾತ್ರ ಹಿರಿದು
ಹಾವೇರಿ: ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆದು, ನ್ಯಾಯದೊರಕಿಸುವಲ್ಲಿ ಮತ್ತು ಮಹಿಳಾ ಸಬಲೀಕರಣ ಕಾರ್ಯದಲ್ಲಿ ಸರ್ಕಾರೇತರ ಸಂಸ್ಥೆಗಳ ಪಾತ್ರ ಹಿರಿದಾಗಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ವಿನೋದಾ ನಟರಾಜ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ನೌಕರರ ಭವನದದಲ್ಲಿ ಜಿಲ್ಲೆಯ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿನ ಲಿಂಗ ತಾರತಮ್ಯ ಮನೋಭಾವದಿಂದ ಪುರುಷ ಹಾಗೂ ಮಹಿಳೆಯರ ಮಧ್ಯೆ ಇರುವ ಅನುಪಾತ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಪ್ರತಿ 10 ವರ್ಷಕ್ಕೊಮ್ಮೆ ನಡೆಯುವ ಜನಗಣತಿ ಅಂಕಿ ಅಂಶಗಳ ಪ್ರಕಾರ, ಪ್ರತಿ 1000 ಪುರುಷರಿಗೆ 84 ಹೆಣ್ಣು ಮಕ್ಕಳ ಕೊರತೆ ಇತ್ತು. ಆದರೆ ಕಳೆದ 10 ವರ್ಷದಲ್ಲಿ ಪ್ರತಿ 1000 ಪುರುಷರಿಗೆ 100 ಮಹಿಳೆಯರ ಕೊರತೆ ಉಂಟಾಗಿದೆ. ಇದು ಸಾಮಾಜಿಕ ಸ್ವಾಸ್ಥ್ಯ ಹದಗೆಡುವುದರ ಮುನ್ಸೂಚನೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಪಂ ಮಾಜಿ ಅಧ್ಯಕ್ಷ ಡಾ. ಮಲ್ಲೇಶಪ್ಪ ಹರಿಜನ ಮಾತನಾಡಿ, 1982ರ ಹಿಂದೆ ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಸಮುದಾಯ ಅಭಿವೃದ್ಧಿ ಯೋಜನೆ ಯುವ ಜನರ ಭಾಗವಹಿಸುವಿಕೆಯ ಕೊರತೆಯಿಂದಾಗಿ ವಿಫಲವಾಗಿದ್ದು, ಸರ್ಕಾರಿ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಸಮುದಾಯದ ಭಾಗವಹಿಸುವಿಕೆಯೊಂದಿಗೆ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಮತ್ತು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಸಿ.ಎನ್. ಹೊಳಿ ಹೊಸೂರ ಮಾತನಾಡಿ, ಮಹಿಳೆ ಸುಶಿಕ್ಷಿತಳಾದಂತೆ ಈ ಸಮಾಜವನ್ನು ಸಮರ್ಥವಾಗಿ ಎದುರಿಸಿ, ದೌರ್ಜನ್ಯ ಮುಕ್ತಳಾಗುವ ಸ್ಥಿತಿ ಬರಬಲ್ಲದು. ಮಹಿಳೆಯರ ನೋವು-ನಲಿವು ಹಾಗೂ ರಕ್ಷಣೆಯ ವಿಚಾರದಲ್ಲಿ ಪುರುಷ ಸಮಾಜದ ನಿರಾಸಕ್ತಿ ಮತ್ತು ನಿರ್ಲಕ್ಷ್ಯ ತೊಲಗಬೇಕು ಎಂದರಲ್ಲದೆ, ಮಹಿಳೆಯರ ಮೇಲಿನ ದೌರ್ಜನ್ಯ, ಸಾಗಾಟದಂಥ ಪ್ರಕರಣಗಳನ್ನು ನಿರ್ವಹಿಸುವಾಗ ತಮ್ಮ ಇಲಾಖೆಗೆ ಪೊಲೀಸ್ ಇಲಾಖೆಯ ಸ್ಪಂದನೆ ಅಗತ್ಯವಿದೆ ಎಂದರು. ಮಹಿಳೆ ಮತ್ತು ಮಕ್ಕಳ ಸಾಗಾಟ ಕುರಿತಂತೆ ನ್ಯಾಯವಾದಿ ಪಿ.ವಿ. ನಡವಿನಮಠ ಉಪನ್ಯಾಸ ನೀಡಿದರು. ಎಸ್.ಎಚ್. ಮಜೀದ್ ಸ್ವಾಗತಿಸಿದರು. ಮುತ್ತುರಾಜ ಮಾದರ ವಂದಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.