ಹಾವೇರಿ: ನಾಳೆ ವಿದ್ಯುತ್ ವ್ಯತ್ಯಯ
ಹಾವೇರಿ: ಹಾವೇರಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ನಿಮಿತ್ತ ಫೆ. 9ರಂದು ಬೆಳಗ್ಗೆ 8.30ರಿಂದ ಸಂಜೆ 4 ಘಂಟೆ ವರೆಗೆ 33 ಕೆವಿ ಕೆರಿಮತ್ತಿಹಳ್ಳಿ, 33 ಕೆವಿ ಆಡೂರ ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಕೆ ಆಗುತ್ತಿರುವ ಎಲ್ಲ 11 ಕೆವಿ ಮಾರ್ಗಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕು ಎಂದು ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಮನವಿ ಮಾಡಿದ್ದಾರೆ.
10ರಂದು ನವೋದಯ ಪ್ರವೇಶ ಪರೀಕ್ಷೆ
ಹಾವೇರಿ: ಹಾನಗಲ್ಲ ಜವಾಹರ ನವೋದಯ ವಿದ್ಯಾಲಯಕ್ಕೆ 6ನೇ ತರಗತಿ ಪ್ರವೇಶ ಪರೀಕ್ಷೆ ಫೆ. 10ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಇಲ್ಲಿನ ಹುಕ್ಕೇರಿಮಠದ ಶಿವಬಸವೇಶ್ವರ ಪ್ರೌಢಶಾಲೆಯಲ್ಲಿ ಜರುಗಲಿದೆ ಎಂದು ಬಿಇಓ ಕೆ. ರಾಮ ಶೆಟ್ಟಿ ತಿಳಿಸಿದ್ದಾರೆ. ಒಟ್ಟು 720 ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಎಲ್ಲ ಅರ್ಹ ವಿದ್ಯಾರ್ಥಿಗಳು ಅಂದು ಬೆಳಗ್ಗೆ 9.30ಕ್ಕೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರುವಂತೆ ತಿಳಿಸಿದ್ದಾರೆ.
ಆರ್‌ಟಿಇ ಅರ್ಜಿ ಅವಧಿ ವಿಸ್ತರಣೆ
ಹಾವೇರಿ: ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆಯಡಿ ಮಕ್ಕಳಿಂದ ಅರ್ಜಿ ಸಲ್ಲಿಕೆ ಅವಧಿಯನ್ನು ಫೆ. 19ರ ವರೆಗೆ ವಿಸ್ತರಿಸಲಾಗಿದೆ ಎಂದು ಡಿಡಿಪಿಐ ಎಸ್.ಬಿ. ಕೊಡ್ಲಿ ತಿಳಿಸಿದ್ದಾರೆ. ಅಗತ್ಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಲಭ್ಯತೆ ವಿಳಂಬವಾಗುತ್ತಿರುವುದರಿಂದ ಅರ್ಜಿ ಸಲ್ಲಿಕೆ ಕೊನೆ ದಿನಾಂಕವನ್ನು ವಿಸ್ತರಿಸುವಂತೆ ಸಾರ್ವಜನಿಕರ ಬೇಡಿಕೆ ಪರಿಗಣಿಸಿ ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಅವಧಿಯನ್ನು ವಿಸ್ತರಿಸಿದ್ದಾರೆ.
ಶ್ರೀಗಳಿಗೆ ಸಂಸದರ ಸಂತಾಪ
ಹಾವೇರಿ: ಸೋಮವಾರ ನಿಧನರಾದ ಹರಿಹರದ ಪಂಚಮಸಾಲಿ ಪೀಠಾಧಿಪತಿ ಡಾ. ಮಹಾಂತ ಸ್ವಾಮಿಗಳ ಅಗಲಿಕೆಗೆ ಹಾವೇರಿ ಸಂಸದ ಶಿವಕುಮಾರ ಉದಾಸಿ ಸಂತಾಪ ವ್ಯಕ್ತಪಡಿಸಿದ್ದಾರೆ.ಕಾಯಕ ಯೋಗಿಯಾಗಿ, ಬಹುಭಾಷಾ ಸಾಹಿತಿ ಮತ್ತು ಸಮಾಜಮುಖಿ ಚಿಂತಕರಾಗಿ, ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅಕ್ಷರದಾಸೋಹಿಯಾಗಿದ್ದ ಸ್ವಾಮೀಜಿಯವರ ಅಗಲಿಕೆ ಸಮಾಜ ಓರ್ವ ಧೀಮಂತ ಧಾರ್ಮಿಕ ನಾಯಕ ಮತ್ತು ಚಿಂತಕನನ್ನು ಕಳೆದುಕೊಂಡಂತಾಗಿದೆಯೆಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಶಿವರಾಜ ಸಜ್ಜನರ ಸಂತಾಪ
ಹಾವೇರಿ: ನಾಡಿನ ಪಂಚಮಸಾಲಿ ಸಮಾಜವನ್ನು ಒಗ್ಗೂಡಿಸಿ ಸಮಾಜಕ್ಕೆ ತನ್ನದೇ ಆದ ಕಾರ್ಯವೈಖರಿ ಹಾಗೂ ಗುರಿ ನೀಡುವಲ್ಲಿ ಡಾ. ಮಹಾಂತ ಶ್ರೀ ಪಾತ್ರ ಅವರ್ಣನೀಯ ಎಂದು ವಿಪ ಸದಸ್ಯ ಶಿವರಾಜ ಸಜ್ಜನರ ಕಂಬನಿ ಮಿಡಿದಿದ್ದಾರೆ.
ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
ಹಾವೇರಿ: ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಬೇಸತ್ತು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸವಣೂರಿನಲ್ಲಿ ಜರುಗಿದೆ. ಮೃತನನ್ನು ಮೋಹನ ಅಲಿಯಾಸ ಮೌನೇಶ ಸಣ್ಣದ್ಯಾಮಣ್ಣ ಸುಣಗಾರ (45) ಎಂದು ಗುರುತಿಸಲಾಗಿದೆ. ಮೂರ್ನಾಲ್ಕು ವರ್ಷದಿಂದ ಇದ್ದ ಹೊಟ್ಟೆನೋವು ಕಡಿಮೆಯಾಗದ ಕಾರಣ ಬೇಸತ್ತು ಆತ್ಮಹತ್ಯೆಗೆ ಮುಂದಾಗಿದ್ದಾನೆ. ತೀವ್ರ ಸುಟ್ಟ ಗಾಯಗಳೊಂದಿಗೆ ಕಿಮ್ಸ್‌ಗೆ ದಾಖಲಿಸಿದ್ದರೂ ಉಪಚಾರ ಫಲಿಸದೆ ಮೃತಪಟ್ಟನೆಂದು ಪುಟ್ಟಪ್ಪ ಉಡುಚಪ್ಪ ಸುಣಗಾರ ಸವಣೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.
ಹಳ್ಳದಲ್ಲಿ ಬಿದ್ದು ಅಪರಿಚಿತ ಸಾವು
ಹಾವೇರಿ: ಅಪರಿಚಿತ ವ್ಯಕ್ತಿಯೋರ್ವ ಹಳ್ಳದಲ್ಲಿ ಬಿದ್ದು ಮೃತಪಟ್ಟ ಘಟನೆ ಹಾನಗಲ್ಲ ತಾಲೂಕ ಚಿಕ್ಕೇರಿ ಹೊಸಳ್ಳಿ ಗ್ರಾಮದ ಭರಮಕೋಡಿ ಹಳ್ಳದಲ್ಲಿ ಜರುಗಿದೆ. ಈತ 2 ದಿನಗಳಿಂದ ತಾಲೂಕಿನ ಚಿಕ್ಕೇರಿ ಹೊಸಳ್ಳಿ ಗ್ರಾಮಗಳಲ್ಲಿ ಅಲೆದಾಡುತ್ತಿದ್ದ. ಆದರೆ, ಹೆಚ್ಚಿನ ಮಾಹಿತಿ ಇಲ್ಲ. ಮೃತನಿಗೆ ಸುಮಾರು 40 ವರ್ಷ ವಯಸ್ಸು. ತೆಳ್ಳನೆಯ ಮೈಕಟ್ಟು. ಕಪ್ಪು ಬಣ್ಣದ ದಾಡಿ ಬಿಟ್ಟಿದ್ದಾನೆ. ಬಿಳಿ ಶಾಂಡೋ ಬನಿಯನ್, ನೀಲಿ ಬಣ್ಣ ಚಡ್ಡಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಮಾರುತೆಪ್ಪ ನಾಗಪ್ಪ ಓಣಿಕೇರಿ ಎಂಬುವರು ನೀಡಿದ ದೂರಿನಂತೆ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.