ವೈದ್ಯ ಸಿಬ್ಬಂದಿ ಮುಷ್ಕರ: ಜನತೆ ಪರದಾಟ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಫೆ.10
ಸರ್ಕಾರ ವಿರುದ್ಧ ವೈದ್ಯಕೀಯ ಸಿಬ್ಬಂದಿ ನಡೆಸುತ್ತಿರುವ ಅನಿರ್ದಿಷ್ಟವಾಧಿ ಮುಷ್ಕರದಿಂದ ಆರೋಗ್ಯ ಕೇಂದ್ರಕ್ಕೆ ತೆರಳಿದ ರೋಗಿಗಳು ಮುಂದೇನು ಎಂಬಂತೆ ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ. ಸುಮಾರು 15 ವೈದ್ಯರು ಹಾಗೂ 65 ಇತರ ಸಿಬ್ಬಂದಿ ಮುಷ್ಕರದ ಹಿನ್ನೆಲೆಯಲ್ಲಿ ಸೇವೆಯಿಂದ ದೂರ ಉಳಿದಿದ್ದಾರೆ.
ತಾಲೂಕಿನ 64 ಗ್ರಾಮಗಳಿಗೆ, ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ, 4 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಕಾಗಿನೆಲೆ, ಚಿಕ್ಕಬಾಸೂರು, ಶಂಕ್ರೀಪುರ, ಕದರಮಂಡಲಗಿ ಗ್ರಾಮಗಳಲ್ಲಿ ಬಾಗಿಲು ಹಾಕಿದ್ದವು. ಮುಷ್ಕರದಿಂದಾಗಿ ವೈದ್ಯಕೀಯ ಸೇವೆ ತಾಲೂಕಿನಲ್ಲಿ ಬಹುತೇಕ ಸ್ಥಗಿತಗೊಂಡಿದೆ.
ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿತ್ಯ 300ಕ್ಕೂ ಹೆಚ್ಚು ಹೊರರೋಗಿಗಳು ದಾಖಲಾಗುತ್ತಿದ್ದು, ಸೇವೆ ಲಭ್ಯವಿಲ್ಲದ ಸುದ್ದಿ ತಿಳಿದು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದರು.
ತುರ್ತು ಚಿಕಿತ್ಸೆ ಸ್ಥಗಿತ: ಮುಷ್ಕರದ ಬಿಸಿ ತುರ್ತು ಚಿಕಿತ್ಸೆಗೂ ತಲುಪಿದೆ. ಸರ್ಕಾರ ಪರ್ಯಾಯ ವ್ಯವಸ್ಥೆ ಕೈಗೊಳ್ಳದಿರುವುದರಿಂದ ದುರ್ಘಟನೆಗಳು ಸಂಭವಿಸಿದಲ್ಲಿ ದೇವರೇ ಗತಿ ಎನ್ನುವಂತಾಗಿದೆ. ಸೇವೆ ಲಭ್ಯವಿರುವ ಖಾಸಗಿ ಕೇಂದ್ರಗಳ ಮಾಹಿತಿ ನೀಡಲೂ ಸರ್ಕಾರಿ ಸಿಬ್ಬಂದಿ ಹಿಂದೇಟು ಹಾಕುತ್ತಿದೆ. ಸುಮಾರು 10ಕ್ಕೂ ಹೆಚ್ಚು ಮಹಿಳೆಯರು ಹೆರಿಗೆಗೆ ದಾಖಲಾಗಿದ್ದಾರೆ. ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆ ಸ್ಥಗಿತಗೊಂಡಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.