ಪ್ರತಿಭಾನ್ವಿತರು ಪ್ರಶಸ್ತಿ ಬೆನ್ನು ಹತ್ತುವುದಿಲ್ಲ: ಚಾವಡಿ
ಹಾವೇರಿ: ಪ್ರತಿಭೆಯುಳ್ಳ ಲೇಖಕರು ಪ್ರಶಸ್ತಿ ಪುರಸ್ಕಾರ ಪಡೆಯುವ ಎಲ್ಲಾ ಅರ್ಹತೆ ಇದ್ದರೂ ಪ್ರಶಸ್ತಿ ಪುರಸ್ಕಾರಗಳಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಅರ್ಜಿ ಆಹ್ವಾನಿಸಿ ಪ್ರಶಸ್ತಿ ನೀಡುವ ಕ್ರಮ ಸರಿಯಲ್ಲ. ಪ್ರತಿಭಾನ್ವಿತರು ಪ್ರಶಸ್ತಿಗಾಗಿ ಬೆನ್ನು ಹತ್ತುವುದಿಲ್ಲ. ಪ್ರಶಸ್ತಿಗೆ ಆಯ್ಕೆ ಮಾಡುವಾಗ ಲೇಖಕರ ಪ್ರತಿಭೆ, ಸಾಧನೆ ಮಾನದಂಡವಾಗಬೇಕೆ ಹೊರತು, ಶಿಫಾರಸು, ವಸೂಲಿ, ಮೂಲಕ ಪ್ರಶಸ್ತಿ ಪಡೆಯುವ ಕ್ರಮ ಆತ್ಮ ವಂಚನೆಗೆ ರಹದಾರಿ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ನಿಂಗಪ್ಪ ಚಾವಡಿ ಅಭಿಪ್ರಾಯಪಟ್ಟರು.
ಇಲ್ಲಿಯ ಬಸವೇಶ್ವರ ನಗರದ ನ್ಯಾಯವಾದಿ ಭೀಮಕ್ಕನವರ ನಿವಾಸದಲ್ಲಿ ಬಸವೇಶ್ವರ ನಗರ ಮಹಿಳಾ ನಾಗರಿಕ ವೇದಿಕೆಯ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿ ಪುರಸ್ಕೃತ ಮಾಲತೇಶ ಅಂಗೂರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂಗೂರ, ತಮಗೆ ಎಷ್ಟೇ ಪ್ರಶಸ್ತಿ ಪುರಸ್ಕಾರಗಳು ಬಂದಾಗ್ಯೂ ಹಿಗ್ಗಿಲ್ಲ ಮತ್ತು ಕುಗ್ಗಿಲ್ಲ ಎಂದರು. ಅಧ್ಯಕ್ಷತೆಯನ್ನು ಮಹಿಳಾ ನಾಗರಿಕ ವೇದಿಕೆಯ ಅಧ್ಯಕ್ಷೆ ರಾಜೇಶ್ವರಿ ಬಿಷ್ಟನಗೌಡರ ವಹಿಸಿದ್ದರು. ರತ್ನಾ ಭೀಮಕ್ಕನರ ಪ್ರಾಸ್ತಾವಿಕವಾಗಿ ಮಾತನಾಡಿದರು. ಲತಾ ಹಳಕೊಪ್ಪ, ರೇಣುಕಾ ನರಗುಂದ ಇದ್ದರು.