ಸೌಲಭ್ಯ ಪಡೆಯಲು ಸಂಘಟಿತರಾಗಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಫೆ. 13
ಗಿರಿಕಂದರ -ಗುಡ್ಡಗಾಡು ಪ್ರದೇಶಗಳಲ್ಲಿ ಅಲೆದಾಡುತ್ತಾ ಜೀವನ ನಿರ್ವಹಿಸುತ್ತಿರುವ ಬಂಜಾರ ಜನಾಂಗವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ಕಡೆಗಣಿಸಿವೆ. ಎಲ್ಲ ಅಗತ್ಯ ಸೌಲಭ್ಯ ಪಡೆಯಲು ಸಮಾಜ ಬಾಂಧವರು ಸಂಘಟಿತರಾಗಬೇಕು ಎಂದು ಬಂಜಾರ ಸೇವಾ ಟ್ರಸ್ಟ್ ರಾಜ್ಯಾಧ್ಯಕ್ಷ ಲಕ್ಷ್ಮಣ ನಾಯ್ಕ ಕರೆ ನೀಡಿದರು.
ಪಟ್ಟಣದ ಗುರುಭವನದಲ್ಲಿ ಬಂಜಾರ ಸೇವಾ ಟ್ರಸ್ಟ್ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ 2ನೇ ಬಂಜಾರ ಸಮಾವೇಶ ಹಾಗೂ ಹಿರೇಕೆರೂರು ತಾಲೂಕು ಘಟಕದ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
ಬಂಜಾರ ಸಮಾಜ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ರಾಜಕೀಯವಾಗಿ ಬೆಳೆಯಲೂ ವಿಫಲವಾಗಿದೆ. ಈ ಜನಾಂಗದ ಸ್ಥಿತಿಗತಿಗಳ ಕುರಿತು ಅಧ್ಯಯನ ಹಾಗೂ ಅಭಿವೃದ್ಧಿ ಚಟುವಟಿಕೆಯಾದ ಸ್ವಯಂ ಉದ್ಯೋಗ, ವೃತ್ತಿ ಶಿಕ್ಷಣ, ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆಗಳನ್ನು ಕೈಗೊಳ್ಳುವುದು ಟ್ರಸ್ಟ್ನ ಉದ್ದೇಶ. ಈ ಮೂಲಕ ಬಂಜಾರ ಸಮಾಜವನ್ನು ಆರ್ಥಿಕವಾಗಿ ಸಬಲವಾಗಿಸಿ, ಸ್ವಾವಲಂಬಿಯಾಗಿ ಮಾಡಲಾಗುವುದು. ತಾಂಡಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ತಿಳಿಸಿದರು.
ಚಿತ್ರದುರ್ಗ ಬಂಜಾರ ಪೀಠದ ಸರ್ದಾರ ಸೇವಾಲಾಲ್ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಬಂಜಾರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಸವರಾಜ ನಾಯಕ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಟಿ.ಆರ್. ಮೂಡಿ, ಉಮಾಶಂಕರ, ಪ್ರಾಚಾರ್ಯ ಕಾಳಿದಾಸ ನಾಯ್ಕ, ಸಮಾಜ ಸೇವಕ ಲಕ್ಷ್ಮ ಪೂಜಾರ, ಬಂಜಾರ ಪತ್ರಿಕೆ ಸಂಪಾದಕ ರಮೇಶ ಚಹ್ವಾಣ, ಪೋಮ್ಯಾ ನಾಯ್ಕ, ಶಂಕರಾನಾಯ್ಕ ಲಮಾಣಿ ಇದ್ದರು.
ಇದಕ್ಕೂ ಮೊದಲು ಪಟ್ಟಣದ ಜಿ.ಬಿ. ಶಂಕರ ರಾವ್ ವೃತ್ತದಿಂದ ಗುರಭವನದ ವರೆಗೆ ಸೇವಾಲಾಲರ ಭಾವಚಿತ್ರದ ಮೆರವಣಿಗೆ ಜರುಗಿತು. ಚಂದ್ರು ಲಮಾಣಿ ಸ್ವಾಗತಿಸಿದರು. ಎಫ್.ಡಿ.ಲಮಾಣಿ ನಿರ್ವಹಿಸಿದರು. ಮಲ್ಲೇಶಿ ಲಮಾಣಿ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.