ಖೊಟ್ಟಿ ದಾಖಲೆಯಿಂದ ಆಸ್ತಿ ಲೂಟಿ: ದೂರು
ಹಾವೇರಿ: ಸಂಬಂಧಿಕರೆಂಬ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ಆಸ್ತಿ ಲಪಟಾಯಿಸಲೆತ್ನಿಸಿದ ಹಾಗೂ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿದ ಘಟನೆ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ರಾಣಿಬೆನ್ನೂರಿನಲ್ಲಿ ನಡೆದಿದೆ. ರಾಣಿಬೆನ್ನೂರಿನ ಕಲ್ಲನಗೌಡ ಚನ್ನಬಸನಗೌಡ ಪಾಟೀಲ ಹಾಗೂ ಗೂಳಪ್ಪ ದೊಡ್ಡಬಸಪ್ಪ ಹೊನ್ನಾಳಿ ಪರಸ್ಪರ ಸಂಬಂಧಿಗಳಾಗಿದ್ದು, ಸಂಬಂಧಿಕರೆಂಬ ಬಾಂಧವ್ಯವನ್ನು ಕಲ್ಲನಗೌಡ ಪಾಟೀಲ ದುರುಪಯೋಗಪಡಿಸಿಕೊಂಡಿದ್ದಾರೆ. ನಮ್ಮ ಹೊಲಗಳನ್ನು ಪೋಡಿ ಮಾಡಿಸಲೆಂದು ಖಾಲಿ ಮುದ್ರಾಂಕ ಕಾಗದದ ಮೇಲೆ ಸಹಿ ಮಾಡಿಸಿಕೊಂಡು, ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ನಮ್ಮ ಜಮೀನುಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಗೂಳಪ್ಪ ದೊಡ್ಡಬಸಪ್ಪ ಹೊನ್ನಾಳಿ ರಾಣಿಬೆನ್ನೂರು ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.
ಜೂಜಾಟ: ಆರು ಜನರ ಸೆರೆ
ಹಾವೇರಿ: ಸಾರ್ವಜನಿಕ ಸ್ಥಳದಲ್ಲಿ ಹಣ ಕಟ್ಟಿ ಜೂಜಾಟವಾಡುತ್ತಿದ್ದವರ ಮೇಲೆ ದಾಳಿ ಮಾಡಿದ ಪೊಲೀಸರು ಆರು ಜನರನ್ನು ಬಂಧಿಸಿ ಬಂಧಿತರಿಂದ ರು. 2,565 ನಗದನ್ನು ವಶಪಡಿಸಿಕೊಂಡ ಘಟನೆ ಹಾನಗಲ್ಲಿನಲ್ಲಿ ಜರುಗಿದೆ. ಬಂಧಿತರನ್ನು ಸುನೀಲ ಯಲ್ಲಪ್ಪ ಕುರಿ, ಅರ್ಜುನ ಯಲ್ಲಪ್ಪ ಕರ್ಜಗಿ, ಮಂಜುನಾಥ ಬಸರೂರ, ತುಳಜಪ್ಪ ಭೊಸ್ಲೇ, ಮುಸ್ತಾಕರಫೀಕ ಸೌದಾಗರ, ವಾಸುದೇವ ಬಾಬಜಿ ಎಂದು ಗುರುತಿಸಲಾಗಿದೆ. ಹಾನಗಲ್ಲ ಪಿಎಸ್‌ಐ ಆರ್.ಜಿ. ನೀಲಮ್ಮನವರ ದಾಳಿ ನೇತೃತ್ವ ವಹಿಸಿದ್ದರು. ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ: ಓರ್ವ ಸೆರೆ
ಹಾವೇರಿ: ಸಾರ್ವಜನಿಕ ರಸ್ತೆಯ ಮೇಲೆ ಓಸಿ ಆಟವಾಡುತ್ತಿದ್ದವನ ಮೇಲೆ ದಾಳಿ ಮಾಡಿದ ಪೊಲೀಸರು ಓರ್ವನನ್ನು ಬಂಧಿಸಿ, ಆತನಿಂದ ರು. 465 ವಶಪಡಿಸಿಕೊಂಡ ಘಟನೆ ರಾಣಿಬೆನ್ನೂರು ತಾಲೂಕು ದೇವರಗುಡ್ಡದಲ್ಲಿ ಜರುಗಿದೆ. ಬಂಧಿತನನ್ನು ಚನ್ನಬಸಪ್ಪ ಅಲಿಯಾಸ ಮಾಡಳ್ಳಿಗೌಡಪ್ಪ ಬೆಟಗೇರಿ ಎಂದು ಗುರುತಿಸಲಾಗಿದೆ. ದಾಳಿಯ ನೇತೃತ್ವವನ್ನು ಪಿಎಸ್‌ಐ ಜಿ. ಶಶಿಧರ ವಹಿಸಿದ್ದರು. ರಾಣಿಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.