ಜಿಲ್ಲಾ ಸಮಗ್ರ ಅಭಿವೃದ್ಧಿ ಮುನ್ನೋಟಕ್ಕೆ ಚಾಲನೆ
ಹಾವೇರಿ: ಹನ್ನೆರಡನೇ ಪಂಚವಾರ್ಷಿಕ ಯೋಜನಾ ಅವಧಿಗೆ (2012-13ರಿಂದ 2016-17) ಸಮಗ್ರ ಜಿಲ್ಲಾ ಅಭಿವೃದ್ಧಿ ಮುನ್ನೋಟವನ್ನು ತಯಾರಿಸುವ ಪ್ರಕ್ರಿಯೆಗೆ ಗುರುವಾರ ಚಾಲನೆ ನೀಡಲಾಯಿತು.
ಜಿಪಂ ಸಭಾಂಗಣದಲ್ಲಿ ಜಿಪಂ ಜಿಲ್ಲಾ ಯೋಜನಾ ಸಮಿತಿ ನಿರ್ದೇಶನದಂತೆ ಕರ್ನಾಟಕ ವಿಶ್ವವಿದ್ಯಾನಿಯ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಸ್.ಟಿ. ಬಾಗಲಕೋಟ ಹಾಗೂ ಪ್ರೊ. ಎಂ.ಸಿ. ಮುಗದೂರ ಅವರ ನೇತೃತ್ವದ ತಾಂತ್ರಿಕ ಸಲಹಾ ತಂಡ ಪಾಲ್ಗೊಂಡು ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಮಾಹಿತಿ ಸಂಗ್ರಹಿಸಿ ಮುನ್ನೋಟ ಸಿದ್ಧಗೊಳಿಸಲು ತೀರ್ಮಾನಿಸಿದೆ.
ಜಿಪಂ ಉಪಕಾರ್ಯದರ್ಶಿ ಜಿ. ಗೋವಿಂದಸ್ವಾಮಿ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ 208 ಗ್ರಾಪಂ, 7 ತಾಪಂ ಹಾಗೂ 8 ಸ್ಥಳೀಯ ಸಂಸ್ಥೆ ಅಂದರೆ ನಗರ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿದ್ದು, ಜಿಪಂ ಸೇರಿದಂತೆ ಈ ಎಲ್ಲ ಸಂಸ್ಥೆಗಳ ಅಭಿವೃದ್ಧಿಯಲ್ಲಿರುವ ಕೊರತೆಗಳನ್ನು ಗುರುತಿಸಿ, ಈ ಕೊರತೆಗಳನ್ನು ನೀಗಿಸಲು ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ರೂಢಿಸಬೇಕಾದ ಹಣಕಾಸು ಮತ್ತು ಸಂಪನ್ಮೂಲಗಳ ಬಗ್ಗೆ ಕರ್ನಾಟಕ ವಿವಿ ತಾಂತ್ರಿಕ ನೆರವು ಸಂಸ್ಥೆ ಜಿಲ್ಲಾ ಯೋಜನಾ ಸಮಿತಿಗೆ ಸಲಹೆ ನೀಡಲಿದೆ ಎಂದರು.
ಜಿಪಂ ಮುಖ್ಯ ಯೋಜನಾಧಿಕಾರಿ ಬಸನಗೌಡ ಮಾತನಾಡಿ, ತಾಂತ್ರಿಕ ನೆರವು ಸಂಸ್ಥೆಯ ತಜ್ಞರ ತಂಡ ಫೆ. 14ರಿಂದ 20ರ ವರೆಗೆ ಜಿಲ್ಲೆ ಹಾಗೂ ವಿವಿಧ ತಾಲೂಕುಗಳಲ್ಲಿ ಸಭೆ ನಡೆಸಿ ಆಯಾ ಹಂತದ ಅಧಿಕಾರಿಗಳಿಗೆ 5 ವರ್ಷಾವಧಿಯ ಮುನ್ನೋಟ ವರದಿ ತಯಾರಿಕೆಗೆ ಬೇಕಾದ ದತ್ತಾಂಶಗಳನ್ನು ತಾವು ಒದಗಿಸಿದ ನಮೂನೆಗಳಲ್ಲಿ ಪಡೆದು, ಏ. 15ರೊಳಗೆ ವರದಿ ನೀಡಬೇಕಿದೆ. ಈ ವರದಿ ಆಧರಿಸಿ ಜಿಲ್ಲಾ ಯೋಜನಾ ಸಮಿತಿ ಸಮಗ್ರ ಜಿಲ್ಲಾ ಅಭಿವೃದ್ಧಿ ಮುನ್ನೋಟ ತಯಾರಿಸಲಿದೆ ಎಂದರು. ಜಿಲ್ಲಾಮಟ್ಟದ ಹಾಗೂ ಹಾವೇರಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ತಾಂತ್ರಿಕ ನೆರವು ಸಂಸ್ಥೆಯ ಸಮನ್ವಯಾಧಿಕಾರಿ ಪ್ರೊ. ಎಸ್.ಟಿ. ಬಾಗಲಕೋಟೆ ಅವರು, ಸಂಸ್ಥೆಗೆ ಒದಗಿಸಬೇಕಾದ ಮಾಹಿತಿ ಸಂಗ್ರಹಿಸುವ ವಿಧಾನಗಳನ್ನು ತಿಳಿಸಿಕೊಟ್ಟರು.
ತಾಂತ್ರಿಕ ಸಂಸ್ಥೆಯ ತಜ್ಞರ ತಂಡ ಫೆ. 18ರಂದು ಹಾನಗಲ್ಲ ಹಾಗೂ ಹಿರೇಕೆರೂರು, ಫೆ. 19ರಂದು ಬ್ಯಾಡಗಿ ಮತ್ತು ರಾಣಿಬೆನ್ನೂರು, 20ರಂದು ಶಿಗ್ಗಾಂವಿ ಮತ್ತು ಸವಣೂರಿನಲ್ಲಿ ಆಯಾ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳೀಯ ಸಂಸ್ಥೆ ಮತ್ತು ಗ್ರಾಪಂ ಪಿಡಿಓಗಳ ಸಭೆ ನಡೆಸಿ, ಮಾಹಿತಿ ಸಂಗ್ರಹಕ್ಕೆ ಮಾರ್ಗದರ್ಶನ ನೀಡಲಿದೆ ಎಂದು ಮುಖ್ಯ ಯೋಜನಾಧಿಕಾರಿ ಬಸನಗೌಡ ತಿಳಿಸಿದರು.