ರೈತ ವಿರೋಧಿ ಸರ್ಕಾರ ಕಿತ್ತೆಸೆಯಿರಿ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಫೆ.14
ಸಂಮೃದ್ಧ ಕರ್ನಾಟಕ ಭರವಸೆ ನೀಡಿದ್ದ ಬಿಜೆಪಿ ಇಂದು ಭ್ರಷ್ಟಾಚಾರ, ಸ್ವ-ಜನ ಪಕ್ಷಪಾತ, ಅನಾಚಾರಗಳಲ್ಲಿ ನಂ. 1ಆಗಿದ್ದು, ಕಾಂಗ್ರೆಸ್ ಸರ್ಕಾರ 60 ವರ್ಷಗಳಿಂದ ಮಾಡದ ಕೆಲಸ ಮಾಡಿದ್ದೇವೆ ಎನ್ನುವ ಮೂಲಕ ರೈತವಿರೋಧಿ, ಜನವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರವನ್ನು ಕಿತ್ತೆಸೆಯಿರಿ ಎಂದು ವಿಪಕ್ಷ ಮಾಯಕ ಎಸ್. ಸಿದ್ಧರಾಮಯ್ಯ ಕಿಡಿಕಾರಿದರು.
ಪಟ್ಟಣದ ವಿರಕ್ತಮಠದ ಆವರಣದಲ್ಲಿ ನಡೆದ ಶಿಗ್ಗಾಂವಿ-ಸವಣೂರು ತಾಲೂಕಿನ ಕಾಂಗ್ರೆಸ್ಗೆ ಬನ್ನಿ ಬದಲಾವಣೆ ತನ್ನಿ ಕಾರ್ಯಕ್ರಮದ ಸಮಾರೋಪ ಸಮಾರಭ ಉದ್ಘಾಟಿಸಿ ಮಾತನಾಡಿದರು.
ಬೊಮ್ಮಾಯಿಯಿಂದ ಹಣ ಲೂಟಿ: ಬಿಜೆಪಿ ಮೂರು ಭಾಗವಾಗಿದೆ. ಐದು ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದು ಇತಿಹಾಸ. ನಿಮ್ಮ ಕ್ಷೇತ್ರದ ಸಚಿವ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರದ ಸಾವಿರಾರು ಕೋಟಿ ಹಣವನ್ನು ಲೂಟಿ ಹೊಡೆದಿರುವ ಭ್ರಷ್ಟ ರಾಜಕಾರಣಿ ಎಂದು ಗಂಭೀರವಾಗಿ ಆರೋಪಿಸಿದರು.
ಮೊದಲು ನೀರು ಕೊಡಿ: ರಾಜ್ಯದ ಜನತೆಗೆ ಕುಡಿಯುವ ನೀರೊದಗಿಸಲು ಕಳಸಾ ಬಂಡೂರಿ ನಾಲಾ ಯೋಜನೆ ಕುರಿತು ಪಾದಯಾತ್ರೆ ಮಾಡಿ 5 ವರ್ಷ ಕಳೆದರೂ ಇದುವರೆಗೂ ನೀರು ನೀಡಿಲ್ಲ. ನೀರಾವರಿ ಇಲಾಖೆಯಿಂದ ಪ್ರತಿ ವರ್ಷ ಸಾವಿರಾರು ಕೋಟಿ ಅನುದಾನವಿದೆ. ಆದರೆ, ನೀರಾವರಿ ಮಂತ್ರಿಗಳ ಕ್ಷೇತ್ರದಲ್ಲಿಯೇ 15 ದಿನಗಳಿಗೊಮ್ಮೆ ಕುಡಿಯುವ ನೀರನ್ನು ಒದಗಿಸುತ್ತಿದ್ದಾರೆ. ಕ್ಷೇತ್ರದ ಜನತೆಗೆ ಕುಡಿಯುವ ನೀರನ್ನು ಒದಗಿಸಲು ಆಗದ ಮಂತ್ರಿಗಳು ರಾಜ್ಯದಲ್ಲಿರುವ ನೀರಿನ ಸಮಸ್ಯೆ ಹೇಗೆ ನಿವಾರಣೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
1.18 ಸಾವಿರ ಕೋಟಿ ಸಾಲ: ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಒಟ್ಟು 16 ಮಂತ್ರಿಗಳು ಜೈಲುವಾಸ ಅನುಭವಿಸಿದ್ದಾರೆ. ಜಗದೀಶ ಶೆಟ್ಟರ್ ಸರ್ಕಾರಕ್ಕೆ ಬಹುಮತವಿಲ್ಲದೆ ಸತ್ತು ಹೋಗಿದೆ. ಅಂಗವಿಕಲ, ವಿಧವಾ ವೇತನ, ವೃದ್ಧಾಪ್ಯ ಮಾಸಾಶನಗಳು 6 ತಿಂಗಳಿಂದ ನಿಂತು ಹೋಗಿವೆ. ರಾಜ್ಯದ ಖಜಾನೆ ಕೊಳ್ಳೆ ಹೊಡೆದಿದ್ದಾರೆ. ಈಗ ರಾಜ್ಯದ ಮೇಲೆ 1.18 ಸಾವಿರ ಕೋಟಿ ಸಾಲ ಹೊರಿಸಿದ್ದಾರೆ ಎಂದರು.
ಸೆರೆವಾಸ ಅನುಭವಿಸಿದ ಏಕೈಕ ಸಿಎಂ ಬಿಎಸ್ವೈ: ಶಾಸಕ ಬಿ.ಸಿ. ಪಾಟೀಲ ಮಾತನಾಡಿ, ಹಸಿರು ಟವೆಲ್ ಹೊದ್ದುಕೊಂಡು ರೈತರ ಮೇಲೆ ಗೊಲಿಬಾರ್ ಮಾಡಿಸಿ ಬಿಎಸ್ವೈ, ರಾಜ್ಯದ ಇತಿಹಾಸದಲ್ಲೇ ಮುಖ್ಯಮಂತ್ರಿಯೋರ್ವ 24 ದಿನಗಳ ಕಾಲ ಜೈಲುವಾಸ ಮಾಡಿ ಬಂದು ದಾಖಲೆ ನಿರ್ಮಿಸಿದ್ದಾರೆ. ಅದೇ ರೈತರ ಸಮಾಧಿ ಮೇಲೆ ಈಗ ಕೆಜೆಪಿ ಪಕ್ಷ ಕಟ್ಟಿದ್ದಾರೆ ಎಂದು ದೂರಿದರು.
ಬೊಕ್ಕಸಕ್ಕೆ ನಷ್ಟ: ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಈಗಾಗಲೇ ಅನುಷ್ಠಾನಗೊಂಡ ತುಂತುರು ನೀರಾವರಿ ಯೋಜನೆ ನೀರಿಲ್ಲದೇ ಒಣಗುತ್ತಿದೆ. ಯೋಜನೆ ಆರಂಭಗೊಂಡ ಕೆಲವೇ ದಿನಗಳಲ್ಲಿ ಹನಿ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಜಲಸಂಪನ್ಮೂಲ ಇಲಾಖೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ. ಭವಿಷ್ಯದಲ್ಲಿ ಯೋಜನೆ ಫಲಪ್ರಧವಾಗಲಾರದು. ನದಿ ಪಾತ್ರ ನೀರಿನ ಕೊರತೆ ಎದುರಿಸುತ್ತಿದೆ. ವರದಾ ನದಿ ಏತ ನೀರಾವರಿ ಬದಲಾಗಿ ತುಂಗಾ ಮೇಲ್ದಂಡೆ ಯೋಜನೆ, ಬೆಡ್ತಿ ಹಳ್ಳ ತಿರುವು ಯೋಜನೆಯನ್ನು ತಾಲೂಕಿನ ವ್ಯಾಪ್ತಿಯಲ್ಲಿ ವಿಸ್ತರಿಸಬೇಕಿತ್ತು. ಸಚಿವ ಬೊಮ್ಮಾಯಿಯ ದೂರದೃಷ್ಟಿ ಕೊರತೆಯಿಂದ ರಾಜ್ಯ ಸರ್ಕಾರಕ್ಕೆ ಭಾರಿ ನಷ್ಟ ಮಾಡಿದ್ದಾರೆ ಎಂದು ಆರೋಪಿಸಿದರು.
ಕಲಘಟಗಿ ಶಾಸಕ ಸಂತೋಷ ಲಾಡ್, ಪರಿಶಿಷ್ಟ ಪಂಗಡದ ರಾಜ್ಯಾಧ್ಯಕ್ಷ ಟಿ. ಈಶ್ವರ ಮಾತನಾಡಿದರು. ಮಾಜಿ ಶಾಸಕ ಅಜ್ಜಂಫೀರ ಖಾದ್ರಿ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ವೆಂಕೋಜಿ ವಹಿಸಿದ್ದರು.
ಈ ಸಂದರ್ಭ ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಸಚಿವ ಕೆ.ಬಿ. ಕೋಳಿವಾಡ, ವಿಪ ಸದಸ್ಯ ಶ್ರೀನಿವಾಸ ಮಾನೆ, ಜಿಲ್ಲಾಧ್ಯಕ್ಷ ಮನೋಹರ ತಹಸೀಲ್ದಾರ, ಮಾಜಿ ಶಾಸಕ ರುದ್ರಪ್ಪ ಲಮಾಣಿ, ಸಿ.ಎಸ್. ಶಿವಳ್ಳಿ, ಪುರಸಭೆ ಅಧ್ಯಕ್ಷ ರಾಮಣ್ಣ ರಾಣೋಜಿ, ನಟರಾಜ ನಾಗರಹಳ್ಳಿ, ಮಜೀದ ಮಾಳಗಿಮನಿ, ಶಿವಾನಂದ ರಾಮಗೇರಿ, ವಿ.ವೈ. ಪಾಟೀಲ, ಎಸ್.ವೈ. ಪಾಟೀಲ, ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ವಿವಿಧ ಪಕ್ಷ ಮುಖಂಡರು ಕಾಂಗ್ರೆಸ್ಗೆ ಸೇರ್ಪಡೆಗೊಂಡರು.