ಸಾಮೂಹಿಕ ರಾಜಿನಾಮೆಗೆ ಸಿದ್ಧ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಫೆ.15
ಸರ್ಕಾರಕ್ಕೆ ತಾಕತ್ತಿದ್ದರೆ ನಮ್ಮನ್ನು ಕಿತ್ತು ಹಾಕಲಿ. ಇದಕ್ಕಾಗಿ ಸಾಮೂಹಿಕ ರಾಜಿನಾಮೆ ಕೊಡಲು ಸಿದ್ಧವೆಂದು ಡಾ. ಬಿ.ಆರ್. ಲಮಾಣಿ ಹೇಳುವ ಮೂಲಕ ಸರ್ಕಾರಿ ವೈದ್ಯರ ಮುಷ್ಕರ ಶುಕ್ರವಾರ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.
ಮಾನವೀಯತೆ ಮರೆತಿದ್ದೀರಿ
ಆರೋಗ್ಯ ಇಲಾಖೆ ಮೇಲಿನ ಚರ್ಚೆ ನಡೆಯುವ ಸಂದರ್ಭದಲ್ಲಿ ಸದಸ್ಯ ನಿಂಗಪ್ಪ ದುಂಡೆಣ್ಣನವರ ವಿಷಯ ಪ್ರ ಸ್ತಾಪಿಸಿ, ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ, ಯಾವುದೇ ಮುಷ್ಕರ ಮಾನವೀಯತೆ ಮೀರಬಾರದು. 6 ದಿನ ವೈದ್ಯರು ನಡೆಸಿದ ಪ್ರತಿಭಟನೆಯಿಂದ ಗ್ರಾಮೀಣ ಪ್ರದೇಶದ ಜನರು ತೊಂದರೆ ಅನುಭವಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದವರಿಗೆ ಭಾಗ್ಯಲಕ್ಷ್ಮೀ, ಹೆರಿಗೆ ಭತ್ಯೆ, ಮಡಿಲು ಕಿಟ್ಟು, ಇನ್ನಿತರ ಸರ್ಕಾರಿ ಸೌಲಭ್ಯ ದೊರೆಯಲಿವೆ. ಆದರೆ, ಮುಷ್ಕರ ಹಿನ್ನೆಲೆಯಲ್ಲಿ ಗರ್ಭಿಣಿಯರು ಆಸ್ಪತ್ರೆಯಿಂದ ಹೊರಗುಳಿಯಬೇಕಾಯಿತು. ತುರ್ತು ಚಿಕಿತ್ಸೆ ಸ್ಥಗಿತಗೊಳಿಸಿ ಮಾನವೀಯತೆ ಮರೆತಿದ್ದೀರಿ ಎಂದು ಆರೋಪಿಸಿದರು.
ಕಳಕಳಿ ಇರಬೇಕು: ಇದಕ್ಕೆ ಪ್ರತಿಕ್ರಿಯಿಸಿದ ಡಾ. ಲಮಾಣಿ ಜನಪ್ರತಿನಿಧಿಗಳಾದ ತಮಗೆ ಸಾರ್ವಜನಿಕರ ಮೇಲೆ ಇರುವಂತಹ ಕಳಕಳಿ, ವೈದ್ಯರ ಮೇಲೂ ಇರಬೇಕು. ಮುಷ್ಕರ ನಿರತ ವೈದ್ಯರ ತೊಂದರೆ ಕೇಳಲು ಯಾವೊಬ್ಬ ಜನಪ್ರತಿನಿಧಿಗಳು ಬರಲಿಲ್ಲ. ಸಾರ್ವಜನಿಕರು ಪಡುತ್ತಿದ್ದ ತೊಂದರೆ ತಪ್ಪಿಸುವ ದೃಷ್ಟಿಯಿಂದಲೇ ನಾವೂ ಮುಷ್ಕರ ಹಿಂಪಡೆದು ಮಾನವೀಯತೆ ಮೆರೆದಿದ್ದೇವೆ ಎಂದರು.
ಸಭೆ ಗೌರವ ಕಾಪಾಡಿ: ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಇಓ ಕೃಷ್ಣಮೂರ್ತಿ ಸಂಬಂಧವಿಲ್ಲದ ಚರ್ಚೆಗಳಿಗೆ ಅವಕಾಶವಿಲ್ಲ. ಸಭೆಯ ಗೌರವ ಕಾಪಾಡುವಂತೆ ತಾಕೀತು ಮಾಡುವ ಮೂಲಕ ವಾಗ್ವಾದಕ್ಕೆ ತೆರೆ ಎಳೆದರು.
ಅನಾಹುತ ಸಂಭವಿಸಿದ ಮೇಲೆ ಕ್ರಮವೇ?: ತಾಲೂಕಿನ ಚಿಕ್ಕಬಾಸೂರು, ಮಲ್ಲೂರು, ಮೋಟೆಬೇನ್ನೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ರಸ್ತೆಗಳಿಗೆ ಹೊಂದಿಕೊಂಡು ಕೆರೆಗಳಿವೆ. ಹೀಗಾಗಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿ. ಇದರಿಂದ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಾಗಿದೆ. ಅಲ್ಲದೇ ಹೀರೇಹಳ್ಳಿ ಚಿಕ್ಕಬಾಸೂರು ಮಾರ್ಗ ಮಧ್ಯೆ ಕೆರೆ ಏರಿಯ ಮೇಲಿನ ರಸ್ತೆ ಅತ್ಯಂತ ಕಿರಿದಾಗಿದ್ದು, ದ್ವಿಮುಖ ಸಂಚಾರಕ್ಕೆ ಯೋಗ್ಯವಾಗಿಲ್ಲ. ಕೂಡಲೇ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ರಸ್ತೆಗೆ ಹೊಂದಿಕೊಂಡಿರುವ ಎಲ್ಲ ಕೆರೆಗಳಿಗೆ ತಡೆಗೋಡೆ ನಿರ್ಮಿಸುವಂತೆ ಸದಸ್ಯೆ ಚಮನ್ಬಿ ಮುಲ್ಲಾ ಆಗ್ರಹಿಸಿದರು.
ಲೋಕೋಪಯೋಗಿ ಇಲಾಖೆ ಅಭಿಯಂತರ ಚನ್ನಬಸಪ್ಪ, ನಂಜುಂಡಪ್ಪ ವರದಿ ಅನುಷ್ಟಾನದಲ್ಲಿ ಇಂತಹ ರಸ್ತೆಗಳನ್ನು ಗುರುತಿಸಿ ಮಾಹಿತಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ಬಳಿಕವೇ ಕಾಮಗಾರಿ ಕೈಗೊಳ್ಳುವುದಾಗಿ ತಿಳಿಸಿದರು.
ಟ್ಯಾಂಕರ್ನಿಂದ ನೀರು ಕೊಡಿ
ಬೆಳಕೇರಿ, ಬನ್ನಿಹಟ್ಟಿ, ಕದರಮಂಡಲಗಿ ಇನ್ನಿತರ ಗ್ರಾಮಗಳಲ್ಲಿ ಕುಡಿವ ನೀರಿನ ತೊಂದರೆಯಾಗಿದೆ. ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರಿಲ್ಲದಂತಾಗಿದೆ. ತೊಂದರೆ ನೀಗಿಸಲು ಮತ್ತೊಮ್ಮೆ ಕೊಳವೆಬಾವಿ ಕೊರೆಯಿಸುವುದು ಅನವಶ್ಯಕವಾಗಿದ್ದು, ಅವುಗಳಿಗೆ ವಿದ್ಯುತ್ ಸಂಪರ್ಕ, ಪೈಪ್ಲೈನ್ ಅಳವಡಿಸಲು ಲಕ್ಷಗಟ್ಟಲೇ ಹಣವ್ಯಯಿಸಬೇಕಾಗುತ್ತದೆ. ಕೂಡಲೇ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡುವಂತೆ ಸದಸ್ಯ ಮಲ್ಲಿಕಾರ್ಜುನ ಕರಲಿಂಗಪ್ಪನವರ ಆಗ್ರಹಿಸಿದರು. ಪಂಚಾಯತ್ರಾಜ್ ಅಭಿಯಂತರ ಸುರೇಶ್ ಬೇಡರ ಮಾತನಾಡಿ, ಟ್ಯಾಂಕರ್ನಿಂದಲೇ ಇಡೀ ಗ್ರಾಮಕ್ಕೆ ನೀರು ಪೂರೈಸುವುದು ಅಸಾಧ್ಯ. ಹೀಗಾಗಿ ಕೊಳವೆ ಬಾವಿ ಕೊರೆಸುವುದು ಅನಿವಾರ್ಯ ಎಂದರು.
ಒಂದೇ ಕಟ್ಟಡದಲ್ಲಿ 2 ಶಾಲೆ: ಶಿಶು ಅಭಿವೃದ್ಧಿ ಇಲಾಖೆ ಮೇಲೆ ಚರ್ಚೆ ನಡೆದು, ಖುರ್ದಕೋಡಿಹಳ್ಳಿಯಲ್ಲಿ ಒಂದೇ ಕಟ್ಟಡದಲ್ಲಿ 2 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮಕ್ಕಳಿಗೆ ಮೂಲಭೂತ ಸೌಕರ್ಯ ಕೇಂದ್ರದಲ್ಲಿ ಲಭ್ಯವಿಲ್ಲ. ಇದರಿಂದ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂಜರಿಯುತ್ತಿದ್ದಾರೆ. ಶಿಶು ಅಭಿವೃದ್ಧಿ ಅಧಿಕಾರಿ ಕೇಂದ್ರಗಳಿಗೆ ಭೇಟಿ ನೀಡುತ್ತಿಲ್ಲ. ಹೀಗಾಗಿ ಸಮಸ್ಯೆಗಳು ಅರ್ಥವಾಗುತ್ತಿಲ್ಲ. ಅಲ್ಲದೇ ಹಿರೇಅಣಜಿ ಗ್ರಾಮದಲ್ಲಿನ ಕೇಂದ್ರವು ಕೆರೆಯ ಅಂಚಿನಲ್ಲಿದ್ದು, ಮಕ್ಕಳು ಅನಾಹುತಕ್ಕೀಡಾಗುವ ಭಯವಿದೆ. ಸುರಕ್ಷತೆಗಾಗಿ ಈವರೆಗೂ ಕಾಂಪೌಂಡ್ ನಿರ್ಮಿ ಸಿಲ್ಲ. ಗಮನಕ್ಕೆ ತಂದರೂ ಸಹ ಪ್ರಯೋಜನವಾಗಿಲ್ಲ ಎಂದು ಸದಸ್ಯೆ ಗಿರಿಜವ್ವ ಮೆಣಸಿನಹಾಳ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಡಿಪಿಓ ಜಿ.ಟಿ. ಶಿರೋಳಕರ, ಖುರ್ದಕೋಡಿಹಳ್ಳಿ ಗ್ರಾಮಕ್ಕೆ ಹೊಸದಾಗಿ ಅಂಗನವಾಡಿ ಕೇಂದ್ರ ಮಂಜೂರಾಗಿದ್ದು, ಹೊಸ ಕಟ್ಟಡ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸುತ್ತಿದೆ. ಅಲ್ಲದೇ ಹಿರೇಅಣಜಿ ಕೇಂದ್ರಕ್ಕೆ ಕಾಂಪೌಂಡ್ ನಿರ್ಮಿಸಲು ಕೇವಲ ರು. 25 ಸಾವಿರ ಅನುದಾನ ಲಭ್ಯವಿದ್ದು, ಕಾಂಪೌಂಡ್ ನಿಮಿಸಲು ಅಸಾಧ್ಯ. ಅನುದಾನ ಲಭ್ಯವಾದ ಕೂಡಲೇ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು.
ತಾಪಂ ಅಧ್ಯಕ್ಷೆ ಚಿನ್ನವ್ವ ಪಾಸಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ಸದಸ್ಯರಾದ ಸುಶೀಲವ್ವ ಮೇಗಳಮನಿ, ಕಮಲವ್ವ ಲಮಾಣಿ, ಚನ್ನಬಸಪ್ಪ ದೇಸಾಯಿ ಹಾಗೂ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.