ಅಧಿಕಾರಕ್ಕೆ ಬಂದರೆ ಮಠಗಳಿಗೆ ರು. 500 ಕೋಟಿ
ಹಾನಗಲ್ಲ: ಪ್ರಸಕ್ತ ಸಾಲಿನಲ್ಲಿ ಕೆಜೆಪಿಗೆ ಆಡಳಿತ ಚುಕ್ಕಾಣಿ ನೀಡಿದ್ದೇ ಆದಲ್ಲಿ ರು. 500 ಕೋಟಿಯನ್ನು ಮಠಗಳು ನಡೆಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ತೆಗೆದಿರಿಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ಹಾನಗಲ್ಲಿನಲ್ಲಿ ನಡೆದ ವಿಜಯರಾಯ ಸಂಗಮೇಶ್ವರರ 24ನೇ ಜಯಂತ್ಯುತ್ಸವ ಹಾಗೂ ಕುಂಚಿಟಿಗರ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಸಮುದಾಯಕ್ಕೆ ಶ್ರಮಿಸಿದ್ದೇನೆ: ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಮಾಜಿಕ ನ್ಯಾಯ ಆಡಳಿತ ಮಂತ್ರವನ್ನಾಗಿ ಸ್ವೀಕರಿಸಿದ್ದು, ಅದರಂತೆ ನಡೆದುಕೊಂಡಿದ್ದೇವೆ. ಎಲ್ಲ ವರ್ಗಗಳ ಜನತೆಯನ್ನು ಸಮಾನವಾಗಿ ಕಂಡು ಅವುಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇವೆ. ಯಡಿಯೂರಪ್ಪ ಕೇವಲ ಲಿಂಗಾಯತ ಸಮುದಾಯದ ನಾಯಕನಲ್ಲ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ, ಅಲ್ಪಸಂಖ್ಯಾತರ ಹಜ್ ಭವನ ನಿರ್ಮಾಣಕ್ಕೆ, ವಾಲ್ಮೀಕಿ ಸಮುದಾಯ, ದೇವರ ದಾಸಿಮಯ್ಯ, ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಹಣ ನೀಡಿರುವುದಾಗಿ ಹೇಳಿದರು.
ಸಮುದಾಯ ಭವನಕ್ಕೆ ಅನುದಾನ: ಹೊಸದುರ್ಗದಲ್ಲಿ ನಿರ್ಮಿಸುತ್ತಿರುವ ಕುಂಚಿಟಿಗರ ಭವನ ಕಟ್ಟಡಕ್ಕೆ ತಮ್ಮ ಮುಂದಿನ ಅವಧಿಯಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿದ ಬಿಎಸ್‌ವೈ, ಎಲ್ಲ ವರ್ಗದ ಜನತೆಗೆ ನ್ಯಾಯ ಒದಗಿಸುತ್ತೇನೆ ಎಂದರು.
ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಶಿಕ್ಷಣ ಪಡೆದಂತೆ ನಾವು ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಅಲಕ್ಷಿಸುತ್ತಿದ್ದೇವೆ. ಸಮಾಜದಲ್ಲಿರುವ ಪದ್ಧತಿಗಳಲ್ಲಿ ವೈಜ್ಞಾನಿಕ ಕಾರಣಗಳಿವೆ. ಅವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ಕುಂಚಿಟಿಗ ಸಮಾಜದವರು ಶ್ರಮಜೀವಿಗಳಾಗಿದ್ದು, ಕೃಷಿ ಅವಲಂಬಿತರಾಗಿದ್ದಾರೆ. ಆದರೆ, ಈ ಸಮುದಾಯ ರಾಜಕೀಯ, ಸಾಮಾಜಿಕ, ಧಾರ್ಮಿಕವಾಗಿ ಗಟ್ಟಿಯಾಗಬೇಕಿದೆ ಎಂದರು.
ಹೊಸದುರ್ಗದ ಕುಂಚಿಟಿಗ ಸಂಸ್ಥಾನದ ಶಾಂತವೀರ ಶ್ರೀಗಳು ಸಮಾವೇಶದ ನೇತೃತ್ವ ವಹಿಸಿದ್ದರು. ಕೊರಟಗೆರೆ ಕುಂಚಿಟಿಗ ಸಂಸ್ಥಾನದ ಹನುಮಂತನಾಥ ಶ್ರೀಗಳು, ಪಂಚಮಸಾಲಿ ಜಯಮೃಂತ್ಯುಂಜಯ ಶ್ರೀ, ಸೇವಾಲಾಲ ಸರ್ದಾರ ಸ್ವಾಮಿಗಳು, ರೇಣುಕಾನಂದ ಸ್ವಾಮಿಜಿ, ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಹಾನಗಲ್ಲ ಕುಂಚಿಟಿಗ ಸಮಾಜದ ಅಧ್ಯಕ್ಷ ಮಂಜುನಾಥ ನಾಗಜ್ಜನವರ ಅಧ್ಯಕ್ಷತೆ ವಹಿಸಿದ್ದರು. ವಿಧಾನಸಭೆ ವಿಪಕ್ಷ ಉಪನಾಯಕ ಟಿ.ಬಿ. ಜಯಚಂದ್ರ, ಮಾಜಿ ಸಚಿವ ಸಿ.ಎಂ. ಉದಾಸಿ, ಸಂಸದ ಶಿವಕುಮಾರ ಉದಾಸಿ, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ, ನರಸೇಗೌಡ್ರು, ಯು.ಬಿ. ಬಣಕಾರ, ವಿಧಾನಸಭೆ ಮಾಜಿ ಉಪಸಭಾಪತಿ ಮನೋಹರ ತಹಸೀಲ್ದಾರ್, ಗಂಗಾಮತ ಸಮಾಜದ ರಾಜ್ಯಾಧ್ಯಕ್ಷ ಬಿ.ಕೆ. ಮೋಹನಕುಮಾರ, ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಜಿಪಂ ಸದಸ್ಯ ಪದ್ಮನಾಭ ಕುಂದಾಪುರ, ಬಸವರಾಜ ಹಾದಿಮನಿ, ಇತರರು ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷ ಗಣೇಶ ಮೂಡ್ಲಿಯವರ ಸ್ವಾಗತಿಸಿದರು. ತಾಲೂಕು ಅಧ್ಯಕ್ಷ ಅಶೋಕ ಸಣ್ಣವೀರಪ್ಪನವರ ಪ್ರಾಸ್ತಾವಿಕ ಮಾತನಾಡಿ, ವಂದಿಸಿದರು.