ಅಲ್ಪಸಂಖ್ಯಾತರಿಗೆ ಆದ್ಯತೆ: ಬಿಎಸ್‌ವೈ
ಹಾವೇರಿ: ಪ್ರಸಕ್ತ ಸಾಲಿನಲ್ಲಿ ಬಿಜೆಪಿ ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ. ಕೆಜೆಪಿ ಅಧಿಕಾರಕ್ಕೆ ಬಂದಲ್ಲಿ ಅಲ್ಪಸಂಖ್ಯಾತರಿಗೆ ಆಗಿರುವ ಅನ್ಯಾಯ ಸರಿಪಡಿಸುವುದೇ ನಮ್ಮ ಮೊದಲ ಆದ್ಯತೆ ಎಂದು ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಹೇಳಿದರು.
ಇಲ್ಲಿನ ಶಿವಶಕ್ತಿ ಪ್ಯಾಲೇಸ್‌ನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಅಲ್ಪಸಂಖ್ಯಾತರಿಗೆ ನ್ಯಾಯ: ಹಲವು ವರ್ಷಗಳಿಂದ ಅಲ್ಪಸಂಖ್ಯಾತರನ್ನು ರಾಜಕೀಯ ಪಕ್ಷಗಳು ಕೇವಲ ಓಟ್‌ಬ್ಯಾಂಕ್ ಆಗಿ ಉಪಯೋಗಿಸಿಕೊಂಡಿವೆಯೇ ಹೊರತು, ಅವರ ಅಭಿವೃದ್ಧಿಗೆ ಚಿಂತಿಸಿಲ್ಲ. ಮುಂದೆ ಕೆಜೆಪಿ ಅಧಿಕಾರಕ್ಕೆ ಬಂದಾಗ ಅನ್ಯಾಯ ಸರಿಪಡಿಸಿ ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರುವಂತೆ ನೋಡಿಕೊಳ್ಳಲಾಗುವುದು ಎಂದರು.
ಇಚ್ಛಾಶಕ್ತಿ ಕೊರತೆಯಿಂದ ಹಿನ್ನಡೆ: ರಾಜ್ಯದಲ್ಲಿ ಯಾವುದೇ ಸರ್ಕಾರ ಅಸ್ಥಿತ್ವದಲ್ಲಿಲ್ಲ. ಸರ್ಕಾರದಲ್ಲಿ ಹಣದ ಕೊರತೆ ತೀವ್ರವಾಗಿದೆ. ರಾಜ್ಯದಲ್ಲಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಇಚ್ಛಾಶಕ್ತಿ, ದೂರದೃಷ್ಟಿ ಕೊರೆತೆಯಿಂದಾಗಿ ರಾಜ್ಯದ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ ಎಂದರು.
ಇತರ ಪಕ್ಷಗಳಲ್ಲಿ ನಡುಕ: ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ಇಂದು ರಾಜ್ಯದ ಎಲ್ಲ ಪಕ್ಷಗಳಿಗೆ ಕೆಜೆಪಿ ತಲೆನೋವಾಗಿದೆ. ಕಾರಣ ದಿನದಿಂದ ದಿನಕ್ಕೆ ಕೆಜೆಪಿ ಪ್ರವರ್ಧಮಾನಕ್ಕೆ ಬರುತ್ತಿದೆ. ಬಿಎಸ್‌ವೈ ಸಾಧನೆಗಳೇ ಬೆಂಬಲವಾಗಿ ನಿಂತಿರುವುದು ಎಲ್ಲ ಪಕ್ಷಗಳಲ್ಲೂ ನಡುಕ ಹುಟ್ಟಿಸಿದೆ. ಈ ಕಾರಣದಿಂದ ಎಲ್ಲರಿಗೂ ಕೆಜೆಪಿ ಮಾತ್ರವೇ ವಿರೋಧ ಪಕ್ಷವೆಂಬಂತೆ ಭಾಸವಾಗುತ್ತಿದೆ ಎಂದರು. ಇದರ ಶ್ರಮ ಬಿಎಸ್‌ವೈಗೆ ಹಾಗೂ ಕಾರ್ಯಕರ್ತರಿಗೆ ಸಲ್ಲಬೇಕಿದೆ. ಮುಂಬರುವ ದಿನಗಳಲ್ಲಿ ಎಲ್ಲೆಡೆ ಕೆಜೆಪಿ ರಾರಾಜಿಸುವ ಮಟ್ಟಕ್ಕೆ ಪಕ್ಷ ಸಂಘಟಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ ಅವರು, 2008ರ ಚುನಾವಣೆ ಗೆಲವು ಬಿಜೆಪಿ ಗೆಲವಾಗಿರದೇ ಯಡಿಯೂರಪ್ಪ ಅವರ ಗೆಲವಾಗಿದೆ. ಜನತೆ ಮರೆತಿಲ್ಲ. ಬರುವ ದಿನಗಳಲ್ಲಿ ಅದಕ್ಕೆ ಸೂಕ್ತವಾಗಿ ಉತ್ತರಿಸಲಿದ್ದಾರೆ ಎಂದರು. ಮಾಜಿ ಸಚಿವ ಶೋಭಾ ಕರಂದ್ಲಾಜೆ, ವಿಪ ಸದಸ್ಯ ಶಿವರಾಜ ಸಜ್ಜನರ, ನೆಹರು ಓಲೇಕಾರ, ಜಿ. ಶಿವಣ್ಣ, ಸುರೇಶಗೌಡ ಪಾಟೀಲ, ಯು.ಬಿ. ಬಣಕಾರ, ಕೆಜೆಪಿ ಜಿಲ್ಲಾಧ್ಯಕ್ಷ ಮೈಲಪ್ಪ ಗುಡಗೂರ ಇದ್ದರು.