ಕಾನೂನಡಿ ಎಲ್ಲರಿಗೂ ನ್ಯಾಯ ದೊರೆಯಲಿ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ.18
ಭಾರತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿಯ ಕಾನೂನುಗಳು ಪ್ರಪಂಚಕ್ಕೆ ಮಾದರಿ. ಅಲ್ಲದೇ ಎಲ್ಲರಿಗೂ ನ್ಯಾಯ ದೊರೆಯುವಂತಾಗಬೇಕು ಎಂದು ಹಾನಗಲ್ಲಿನ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶ ಎಂ. ರಾಮಚಂದ್ರ ಕರೆ ನೀಡಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಕಾನೂನು ಸಾಕ್ಷರತಾ ರಥ ಸಂಚಾರ, ಜನತಾ ನ್ಯಾಯಾಲಯ ಹಾಗೂ ಕಾನೂನು ಅರಿವು-ನೆರವು ವಿಷಯ ಕುರಿತ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.
ಕಾನೂನಿನ ಮುಂದೆ ಎಲ್ಲರೂ ಸರಿಸಮಾನರು. ಅನ್ಯಾಯ, ಅತ್ಯಾಚಾರ, ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣ ಮಾಡಬೇಕಿದೆ. ಆದ್ದರಿಂದ ಕಾನೂನು ನೆರವು ಎಲ್ಲರೂ ಪಡೆಯುವಂತಾಗಲಿ ಎಂದರು.
ಕರ್ತವ್ಯ ಪಾಲಿಸಿ: ಸಂವಿಧಾನ ಹಕ್ಕುಗಳ ಕುರಿತು ನ್ಯಾ. ದೊಡ್ಡಮನಿ ಮಾತನಾಡಿ, ಮನುಷ್ಯನಿಗೆ ಅನ್ಯಾಯವಾದಾಗ ಅವನು ದೂರು ದಾಖಲಿಸಿ ನ್ಯಾಯ ಪಡೆಯುವುದು ಅವನ ಹಕ್ಕು. ಸಂವಿಧಾನದ ಆರು ಮೂಲಭೂತ ಹಕ್ಕುಗಳನ್ನು ತಿಳಿದುಕೊಂಡು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಜೊತೆಗೆ ದೇಶಕ್ಕೆ ಸಲ್ಲಿಸಬೇಕಾದ ಕರ್ತವ್ಯಗಳನ್ನು ಮರೆಯಬಾರದು ಎಂದು ಎಚ್ಚರಿಸಿದರು.
ನೇರ ನ್ಯಾಯಾಲಯ ಮೊರೆ ಹೋಗಬಹುದು: ಪ್ರಥಮ ವರದಿ(ಎಫ್‌ಐಆರ್) ಕುರಿತು ಎಸ್.ಎಂ. ಕೋತಂಬರಿ ಮಾತನಾಡಿ, ಜಗಳ, ಅಪಘಾತ, ಅನ್ಯಾಯವಾದಾಗ ವ್ಯಕ್ತಿಯಾಗಲಿ, ಸಂಬಂಧಿಕರಾಗಲಿ ಖುದ್ದು ವೀಕ್ಷಣೆ ಮಾಡಿದ ವ್ಯಕ್ತಿ ಬಂದು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ, ಎಫ್‌ಐಆರ್ ಹಾಕಬಹುದು.
ಸಂಬಂಧಪಟ್ಟವರು ದೂರು ಸ್ವೀಕರಿಸದಿದ್ದಲ್ಲಿ ನೇರವಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬಹುದು ಎಂದರು.
ಬಳಿಕ ವಿದ್ಯಾರ್ಥಿಗಳೊಂದಿಗೆ ಸಿವಿಲ್ ನ್ಯಾಯಾಧೀಶ ಮದ್ವೇಶ್ವರ ಡಬೇರ, ಆರ್.ವಿ. ಒಡೆಯರ, ಎಸ್.ಎಚ್. ಸವಣೂರು, ಆರ್.ಪಿ. ಅಕ್ಕಿವಳ್ಳಿ ಸಂವಾದ ನಡೆಸಿ, ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.
ಈ ಸಂದರ್ಭ ನ್ಯಾಯವಾದಿಗಳಾದ ವೀಣಾ ಬ್ಯಾತನಾಳ, ಮಂಗಳಾ ತಿರಕಣ್ಣನವರ ಭಾಗವಹಿಸಿದ್ದರು.
ಪ್ರಾಚಾರ್ಯ ಮಹ್ಮದ ಷರೀಫ್ ಹಾನಗಲ್ಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುಮಿತ್ರ ಹನಕನಳ್ಳಿ ಹಾಗೂ ರೇಣುಕಾ ಹನಕನಳ್ಳಿ ಪ್ರಾರ್ಥಿಸಿದರು. ಡಾ ದಿನೇಶ ಸ್ವಾಗತಿಸಿದರು. ಸುಮಾ ಪ್ರಾಸ್ತಾವಿಕ ಮಾತನಾಡಿದರು. ಟಿಪ್ಪು ಸುಲ್ತಾನ್‌ನಾಯ್ಕ ವಾಡಿ ನಿರ್ವಹಿಸಿದರು.