ಬ್ಯಾಡಗಿ: ಇಂದು ಜೆಡಿಎಸ್ ಸಭೆ (ಸುದ್ದಿ ಸಂಕ್ಷೇಪ)
ಬ್ಯಾಡಗಿ: ಪುರಸಭೆ ಚುನಾವಣೆ ನಿಮಿತ್ತ ಜೆಡಿಎಸ್ ತಾಲೂಕು ಘಟಕ ಫೆ. 19ರಂದು ಬೆಳಗ್ಗೆ 11ಕ್ಕೆ ಪಟ್ಟಣದ ಮುಪ್ಪಿನಸ್ವಾಮಿ ಮಠದಲ್ಲಿ ಪೂರ್ವಭಾವಿ ಸಭೆ ಏರ್ಪಡಿಸಿದೆ. ಸಭೆಯಲ್ಲಿ ಮಲ್ಲಿಕಾರ್ಜುನ ಬೇವಿನಮರದ, ಸಿ.ಬಿ. ಕಾರಗಿ, ನಂದೀಶ ನೆಲ್ಲಿಕೊಪ್ಪ, ರಮೇಶ ಕುಂಠೆ, ಕುರುವತ್ತೆಪ್ಪ ಬಾಳಿಕಾಯಿ ಉಪಸ್ಥಿತರಿರುವರು. ಮೋಹನ ಬಿನ್ನಾಳ ಅಧ್ಯಕ್ಷತೆ ವಹಿಸಲಿದ್ದು, ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡು ಸಲಹೆ-ಸೂಚನೆ ನೀಡುವಂತೆ ಕಾರ್ಯದರ್ಶಿ ಶಶಿಧರ ಗೊಲ್ಲರಹಳ್ಳಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ. 5ರಂದು ಅಡ್ಡಪಲ್ಲಕ್ಕಿ ಮಹೋತ್ಸವ
ರಾಣಿಬೆನ್ನೂರು: ತಾಲೂಕಿನ ಮಣಕೂರಿನ ಹಾಲಸ್ವಾಮಿ ಜಾತ್ರೋತ್ಸವದ ಅಂಗವಾಗಿ ಮಾ. 5 ಮತ್ತು 6ರಂದು ಶ್ರೀಶೈಲದ ಡಾ ಚನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀಗಳ ಅಡ್ಡಪಲಕ್ಕಿ ಮಹೋತ್ಸವ ಜರುಗಲಿದೆ ಎಂದು ಹಾಲಸ್ವಾಮಿ ಮಠದ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಶ್ರೀಗಳು ತಿಳಿಸಿದರು. ಮಾ. 5ರಂದು ಮಧ್ಯಾಹ್ನ 2ಕ್ಕೆ ಡಾ ಚನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಸಲಾಗುವುದು. 6ರಂದು ಬೆಳಗ್ಗೆಯಿಂದ ಸಂಜೆವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀಮಠಕ್ಕೆ ಆಗಮಿಸಲು ಭಕ್ತಾಧಿಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಲಭ್ಯವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪರಮೇಶಪ್ಪ ಅಂಗಡಿ, ಮಹೇಶ ಪಾಟೀಲ, ಎಸ್.ಜಿ. ಮಹಾನುಭಾವಿಮಠ ಉಪಸ್ಥಿತರಿದ್ದರು.
ಇಂದು ದತ್ತಿ ಉಪನ್ಯಾಸ
ಶಿಗ್ಗಾಂವಿ: ಪಟ್ಟಣದ ಮಾಮಲೇದೇಸಾಯಿ ಪದವಿಪೂರ್ವ ಮಹಾವಿದ್ಯಾಲಯದ ಸಭಾಭವನದಲ್ಲಿ ಫೆ. 19ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಹಾಗೂ ತಾಲೂಕು ಕಸಾಪ ಆಶ್ರಯದಲ್ಲಿ ಹನುಮಂತಗೌಡ್ರ ಅಯ್ಯನಗೌಡ್ರ ಪಾಟೀಲ, ಗುರುಸಿದ್ದಪ್ಪ ಅಜೂರು ದತ್ತಿ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ. ಜಿಲ್ಲಾ ಕಸಾಪ ಅಧ್ಯಕ್ಷ ಜಿ.ಬಿ. ಮಾಸಣಗಿ ಅಧ್ಯಕ್ಷತೆ ವಹಿಸುವರು. ಎಂ.ಬಿ. ಅಂಕಲಕೋಟಿ ಉದ್ಘಾಟಿಸುವರು. ಅತಿಥಿಗಳಾಗಿ ಶಂಕರಗೌಡ್ರ ಪಾಟೀಲ, ಎಂ.ಸಿ. ಪಾಟೀಲ(ಆಜೂರ), ದತ್ತಿ ಉಪನ್ಯಾಸಕರಾಗಿ ಎಫ್.ಬಿ. ಮರಡೂರು, ಎಸ್.ಪಿ. ಜಂಗವಾಡ ಆಗಮಿಸಲಿದ್ದಾರೆ. ಕಲ್ಲಪ್ಪ ಆಜೂರು, ವಿರೂಪಾಕ್ಷಪ್ಪ ಪಡಿಗೋದಿ, ಕಸಾಪ ತಾಲೂಕಾಧ್ಯಕ್ಷ ಬಸವರಾಜ ಬಸರೀಕಟ್ಟಿ, ಪ್ರಭು ಹಲಗೇರಿ, ವಿಜಯಕುಮಾರ ಕಿಳ್ಳಿಕೇತರ, ಎಂ.ಎಂ. ಪಾಟೀಲ, ಮಹಾಂತೇಶ ಹಿತ್ತಲಮನಿ, ಮಲ್ಲಪ್ಪ ರಾಮಗಿರಿ ಪಾಲ್ಗೊಳ್ಳುವರು.
ಡಿಕ್ಕಿ: ಬೈಕ್ ಸವಾರ ಸಾವು
ಹಾವೇರಿ: ರಾಷ್ಟ್ರೀಯ ಹೆದ್ದಾರಿ ಮೇಲೆ ಅಡ್ಡಾದಿಡ್ಡಿಯಾಗಿ ಚಲಿಸಿದ ಲಾರಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಣಿಬೆನ್ನೂರಿನ ಕವಲೆತ್ತು ಗ್ರಾಮದ ಬಳಿ ಜರುಗಿದೆ. ಮೃತನನ್ನು ಮಂಜುನಾಥ ಗುಡ್ಡಪ್ಪ ಮೇಡ್ಲೇರಿ (26) ಎಂದು ಗುರುತಿಸಲಾಗಿದೆ. ಚಾಲಕ ರಮೇಶ ಲಾರಿ ಮೇಲೆ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಬದಿಯ ತೆಗ್ಗಿನಲ್ಲಿ ಲಾರಿ ಉರುಳಿದೆ. ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ದಯಾನಂದ ವೀರಭದ್ರಪ್ಪ ಕಟ್ಟಿಮನಿ ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಪ್ರಕರಣ ದಾಖಲಾಗಿದೆ, ತನಿಖೆ ನಡೆದಿದೆ.
ಎತ್ತಿನ ಕೋಡು ಬಡಿದು ಸಾವು
ಹಾವೇರಿ: ಸಾಕಿದ ಜಾನುವಾರಕ್ಕೆ ಆಹಾರ ಹಾಕಲು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಜಾನುವಾರಗಳ ಕೋಡು ಬಡಿದ ಪರಿಣಾಮ ವಯೋವೃದ್ಧನೋರ್ವ ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಮಡತಪಟ್ಟ ಘಟನೆ ಸವಣೂರು ತಾಲೂಕು ಹೊಸಳ್ಳಿ ಗ್ರಾಮಗಲ್ಲಿ ಜರುಗಿದೆ. ಮೃತನನ್ನು ಬಸಪ್ಪ ಸಂಪಕ್ಕ ಸಂಕಪ್ಪನವರ (65) ಎಂದು ಗುರುತಿಸಲಾಗಿದೆ. ಎತ್ತುಗಳು ಜೋರಾಗಿ ಹಾಯ್ದಿದ್ದರಿಂದ ಎತ್ತಿನ ಕೊಂಬು ಬಸಪ್ಪನ ವೃಷಣಕ್ಕೆ ಹಾಗೂ ಎದೆಗೆ ತಾಗಿ ಗಾಯವಾಗಿತ್ತು. ಉಪಚಾರಕ್ಕಾಗಿ ಕಿಮ್ಸ್ಗೆ ದಾಖಲಿಸಲಾಗಿತ್ತಾದರೂ ಫಲಿಸದೆ ಮೃತಪಟ್ಟನೆಂದು ಅವರ ಮಗ ಶಂಕ್ರಪ್ಪ ಬಸಪ್ಪ ಸಂಕಪ್ಪನವರ ದೂರು ನೀಡಿದ್ದು, ಸವಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.