ಹೈಟೆಕ್ ಆಡಳಿತ ಬಡವರ ಪರದಾಟ
ಶಿಗ್ಗಾಂವಿ: ಹೈಟೆಕ್ ಆಡಳಿತ ಬಡವರ ಪರದಾಟ, ಕುಡಿಯುವ ನೀರಿಗಾಗಿ ಹೋರಾಟ, ಹುಬ್ಬಳ್ಳಿಯಲ್ಲಿ ಆಡಳಿತ ಯಂತ್ರ ಕ್ಷೇತ್ರದ ಜನತೆ ಅತಂತ್ರ, ನೀರಿನ ಮಂತ್ರಿ ಕೈಯಲ್ಲಿ ಬೊಗಸೆ ನೀರಿಗೂ ಬರ.
ಹೀಗೆ ಪ್ರಾಸಬದ್ಧವಾಗಿ ಮಾತನಾಡಿದವರು ಮಾಜಿ ಶಾಸಕ ಸೈಯದ್ ಅಜ್ಜಂಪೀರ ಎಸ್. ಖಾದ್ರಿ, ಬಂಕಾಪುರ ಪುರಸಭೆ ಸ್ಥಳೀಯ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಹಿನ್ನಲೆಯಲ್ಲಿ ಸ್ಥಳೀಯ ದಿಲ್ಲಿ ದರ್ಬಾರ ಹಾಲ್ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಮುಖಂಡರ ಸಭೆಯಲ್ಲಿ ಶಾಸಕ ಬಸವರಾಜ ಬೊಮ್ಮಾಯಿಯವರ ಹೈಟೆಕ್ ಆಡಳಿತದಿಂದ ಕ್ಷೇತ್ರದ ಜನತೆಯಲ್ಲಿ ಭ್ರಮನಿರಸನವನ್ನುಂಟು ಮಾಡಿದ್ದಾರೆ ಎಂದು ಟೀಕಿಸಿದರು.
ತತ್ವ, ಸಿದ್ಧಾಂತ ಅಳವಡಿಸಿಕೊಳ್ಳಿ: ಮತದಾರರ ಮನಸಿಚ್ಛೆಯಂತೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಈ ಬಗ್ಗೆ ಸ್ಥಳೀಯ ಪಕ್ಷದ ಮುಖಂಡರು ಪಕ್ಷದ ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿ ಸ್ಪಂದಿಸುವ ವ್ಯಕ್ತಿಗಳನ್ನು ಆಯ್ಕೆ ಮಾಡಿ ಕೊಡಬೇಕು ಅಂತ ಕಾಂಗ್ರೆಸ್ ಮುಖಂಡರಿಗೆ ವಿನಂತಿಸಿದರು.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ: ಮುಂಬರುವ ವಿದಾನಸಭೆಯಲ್ಲಿ ಪಕ್ಷ ಬಹುಮತದಿಂದ ಸರ್ಕಾರ ರಚಿಸುವುದು ಖಚಿತವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಒಗ್ಗಟ್ಟಿನಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದಾಗ ಕಾಂಗ್ರೆಸ್ಗೆ ಜಯ ದೊರೆಯಲಿದೆ ಎಂದು ಕರೆ ನೀಡಿದರು.
ಅಭ್ಯರ್ಥಿ ಗೆಲವಿಗೆ ಶ್ರಮ: ಇದೇ ಸಂದರ್ಭ ಪುರಸಭೆ ಮಾಜಿ ಅಧ್ಯಕ್ಷ ರಾಮಣ್ಣ ರಾಣೋಜಿ ಮಾತನಾಡಿ, ಪಕ್ಷದಡಿಯಲ್ಲಿ ಅಧ್ಯಕ್ಷನಾಗಿ ಉತ್ತಮ ಆಡಳಿತ ಒದಗಿಸಿದ ತೃಪ್ತಿ ಇದ್ದು, ಯುವಕರಿಗೆ ಆದ್ಯತೆ ಕೊಡುವ ಉದ್ದೇಶದಿಂದ ಮತ್ತು ಪಕ್ಷದ ಅಭ್ಯರ್ಥಿಗಳ ಗೆಲವಿಗೆ ಶ್ರಮಿಸುವುದಾಗಿ ತಿಳಿಸಿದರು.
ಬಂಕಾಪುರ ಮಾಜಿ ಅಧ್ಯಕ್ಷರಾದ ಮುನ್ನಾಗುಲ್ಮಿ, ಸತೀಶ ಆಲದಕಟ್ಟಿ, ಎ.ಸಿ. ಜಮಾದರ ಮಾತನಾಡಿದರು. ಸಭೆಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷರಾದ ಎನ್.ಸಿ. ಪಾಟೀಲ, ಗುಡ್ಡಪ್ಪ ಜಲದಿ, ಯುವ ಕಾಂಗ್ರೆಸ್ ಅಧ್ಯಕ್ಷ ಆಜೂರ, ತಾಲೂಕು ಮುಖಂಡರಾದ ಹನುಮರೆಡ್ಡಿ, ಮಾಜಿ ಸದಸ್ಯರಾದ ರಾಮಕೃಷ್ಣ ರಾಯ್ಕರ, ಬಾಬಾ ತರೀನ, ಶಿಶುಪಾಲ ಟೋಪಣ್ಣವರ, ಲಲಿತಾ ಹಂಜಗಿ, ಖಲಂದರ ಬಟ್ಟಿಪುರಿ, ಮುಖಂಡರಾದ ಗಂಗಾಧರ ಬಡ್ಡಿ, ಮಹದೇವಪ್ಪ ವಡ್ಡರ, ಎಮ್.ಎಸ್. ಮಾಸನಕಟ್ಟಿ, ಬಿ.ಎಫ್. ಬಡ್ಡಿ, ಮಿಚ್ಗುನಿ, ನೀಲಪ್ಪ ಸಣ್ಣಕ್ಕಿ, ನರಸಪ್ಪ ಟೋಪಣ್ಣವರ, ಪದ್ಮಾ ಟೀಚರ, ಪ್ರದೀಪ ಇಬ್ರಾಹಿಂಪುರ, ಮಾದೇವ ಗಣಪ್ಪನವರ, ಇನ್ನಿತರರು ಹಾಜರಿದ್ದರು.
ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಮ್.ಎನ್. ವೆಂಕೋಜಿ ವಹಿಸಿದ್ದರು.