ಬಂದ್: ಡಿಸಿ ಸೂಚನೆ (ಸುದ್ದಿ ಸಂಕ್ಷೇಪ)
ಹಾವೇರಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಫೆ. 20ರಂದು ಭಾರತ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾದ್ಯಂತ ಶಾಂತಿ- ಸುವ್ಯವಸ್ಥೆ ಹಾಗೂ ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಫೆ. 20ರಂದು ಶಾಲಾ ಕಾಲೇಜುಗಳಿಗೆ ಒಂದು ದಿನದ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ಘೋಷಿಸಿದ್ದಾರೆ.
ಬೇಸತ್ತು ನೇಣಿಗೆ ಶರಣು
ಹಾವೇರಿ: ಕೃಷಿಗೆ ಮಾಡಿದ ಸಾಲ ಹಾಗೂ ಟ್ರ್ಯಾಕ್ಟರ್ ಸಾಲದಿಂದ ಬೇಸತ್ತ ವಯೋವೃದ್ದ ಕೃಷಿಕನೋರ್ವ ತಾನುಟ್ಟಿದ್ದ ಪಂಜೆಯಿಂದಲೇ ನೇಣಿಗೆ ಶರಣಾದ ಘಟನೆ ರಾಣಿಬೆನ್ನೂರಿನ ಕರೂರು ಗ್ರಾಮದ ಹೊರವಲಯದಲ್ಲಿ ಜರುಗಿದೆ. ಮೃತನನ್ನು ಲಕ್ಷ್ಮಣ ಹನುಮಂತಪ್ಪ ಕುರುಡಪ್ಪನವರ(65) ಎಂದು ಗುರುತಿಸಲಾಗಿದೆ. ಈ ಕುರಿತಂತೆ ಕಲ್ಲಪ್ಪ ಲಕ್ಷ್ಮಪ್ಪ ಕುರುಡಪ್ಪನವರ ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ವರದಿ ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಡಿಕ್ಕಿ: ಇಬ್ಬರ ಸಾವು
ಹಾವೇರಿ: ರಾಷ್ಟ್ರೀಯ ಹೆದ್ದಾರಿ ಮೇಲೆ ಬೈಪಾಸ್ ಬಳಿ ಕಾರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೇ ಮಹಿಳೆಯೋರ್ವಳು ತೀವ್ರವಾಗಿ ಗಾಯಗೊಂಡ ಘಟನೆ ಹಾವೇರಿಯಲ್ಲಿ ಜರುಗಿದೆ. ಮೃತರನ್ನು ಅಬ್ದುಲ್ ಜಾಫರ್ ಜಂಗಮನಕೊಪ್ಪ (65), ಅಹ್ಮದರಾಜಾ ಹತ್ತಿಕಾಳ (12) ಎಂದು ಗುರುತಿಸಲಾಗಿದೆ. ಗಾಯಗೊಂಡ ಮಹಿಳೆ ಮಾಬಿಯಾಳನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ. ಕಾರು ಚಾಲಕ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತಂತೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ. 3ರಿಂದ ಪಾದಯಾತ್ರೆ
ಬ್ಯಾಡಗಿ: ಮಾ. 6ರಂದು ನಡೆಯಲಿರುವ ಕೊಟ್ಟೂರು ಬಸವೇಶ್ವರ ಜಾತ್ರೆ ನಿಮಿತ್ತ ಇಲ್ಲಿನ ಗುರು ವೃಷಭ ರಾಜೇಂದ್ರ ಪಾದಯಾತ್ರೆ ಸಮಿತಿ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದು ಒಂಭತ್ತನೇ ವರ್ಷದ ಪಾದಯಾತ್ರೆ. ಮಾ. 3ರಂದು ಮಧ್ಯಾಹ್ನ 2.30ಕ್ಕೆ ವೀರಭದ್ರೇಶ್ವರ ದೇವಸ್ಥಾನದಿಂದ ಹೊರಡುವ ಪಾದಯಾತ್ರೆ ಮಾ. 6ರಂದು ಕೊಟ್ಟೂರು ತಲುಪಲಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವ ಸದ್ಭಕ್ತರು ನಿಗದಿತ ದಿವಸ ಹಾಗೂ ಸಮಯಕ್ಕೆ ಬಂದು ಸೇರುವಂತೆ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಮೊ. 9448309749 ಅಥವಾ 9448630639 ಸಂಪರ್ಕಿಸಬಹುದು.