ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅನುದಾನ ಬಿಡುಗಡೆ ನಿರ್ಲಕ್ಷ್ಯ

Mainashree
Updated On : 21 Feb 2013, 10:33 am

ಮೂಲಭೂತ ಸೌಲಭ್ಯಕ್ಕಾಗಿ ಜನರ ಪರದಾಟ, ಪ್ರತಿಭಟನೆಕನಿಷ್ಠ ಮೂಲ ಸೌಕರ್ಯಗಳಿಂದ ವಂಚಿತವಾದ ವಾರ್ಡುಗಳು
ಹಾವೇರಿಯ ವಿವಿಧ ವಾರ್ಡುಗಳ ಸದಸ್ಯರಲ್ಲಿ ಕಾಮಗಾರಿ ಕೈಗೊಂಡು ನಗರ ಅಭಿವೃದ್ಧಿಪಡಿಸುವ ಇರಾದೆಯನ್ನು ಹೊಂದಿದ್ದರು ಸಹಿತ ಹಾವೇರಿ ನಗರಸಭೆ ಹಾಗೂ ರಾಜ್ಯ ಸರ್ಕಾರದಿಂದ ಸೂಕ್ತ ಅನುದಾನ ಬಿಡುಗಡೆಯಾಗದೇ ಪರದಾಡುವಂತಾಗಿದೆ. ಈ ಮಧ್ಯೆ ಮತದಾರರು ಮೂಲಭೂತ ಸೌಲಭ್ಯಕ್ಕಾಗಿ ಪ್ರತಿನಿತ್ಯ ಒಂದಿಲ್ಲೊಂದು ವಿಭಿನ್ನ ಪ್ರತಿಭಟನೆ, ರಸ್ತೆ ತಡೆ, ಉಪವಾಸ ಸತ್ಯಾಗ್ರಹ, ವಿವಿಧ ಕಚೇರಿಗಳಿಗೆ ಮುತ್ತಿಗೆ, ಪಾದಯಾತ್ರೆ ನಡೆಸಿದ ವಾರ್ಡ್ ಸದಸ್ಯರು ಹಾಗೂ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ವಿವಿಧ ವಾರ್ಡುಗಳ ಸದಸ್ಯರು ಏನೇ ಕಸರತ್ತು ಮಾಡಿದರೂ ಕಾಮಗಾರಿಗೆ ಸೂಕ್ತ ಅನುದಾನವಿಲ್ಲದೆ ತಲೆತಗ್ಗಿಸುವಂತಾಗಿದೆ. ನಾಲ್ಕೂವರೆ ವರ್ಷದಲ್ಲಿ ಹಾವೇರಿ ಜಿಲ್ಲೆಯಲ್ಲಿ ನಡೆದಿರುವ ಕಾಮಗಾರಿಗಳ ಕುರಿತು ಕನ್ನಡಪ್ರಭದ ಕಿರಣ ಮಾಸಣಗಿ ಸಂಕ್ಷಿಪ್ತ ಮಾಹಿತಿ ನೀಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ. ಅಲ್ಲದೇ ಯಾಲಕ್ಕಿ ಜಿಲ್ಲೆಯ ಸಂಕ್ಷಿಪ್ತ ಪರಿಚಯವನ್ನು ನೀಡಲು ಇಲ್ಲಿ ಯತ್ನಿಸಲಾಗಿದೆ. ಹಾವೇರಿ ನಗರ 31 ವಾರ್ಡುಗಳನ್ನು ಹೊಂದಿದೆ.

ಹೊಣೆ ನಿರ್ವಹಿಸದ ಹೊನ್ನೇಶ್ವರ
3 ಬಾರಿ ಬಿಜೆಪಿಯಿಂದಲೇ ಗೆದ್ದಿದ್ದ ಅಭ್ಯರ್ಥಿಯನ್ನು 4ನೇ ಬಾರಿಗೆ ನೆಲಕಚ್ಚಿಸಿದ್ದು ಈ ವಾರ್ಡ್‌ನ ಜನತೆ. ವಾರ್ಡ್ ನಂ. 15 ಸಾಮಾನ್ಯ ಕ್ಷೇತ್ರವಾಗಿದ್ದರೂ ಪರಿಶಿಷ್ಟ ಸಮುದಾಯದ ವ್ಯಕ್ತಿಗೆ ಆದ್ಯತೆ ನೀಡಿ ಬದಲಾವಣೆಗೆ ನಾಂದಿ ಹಾಡಿದ್ದರು. ಈ ವಾರ್ಡ್ ಪ್ರತಿನಿಧಿಸಿದ್ದು ಹೊನ್ನೇಶ್ವರ ತಗಡಿಮನಿ. ಅಂಬೇಡ್ಕರ ನಗರ, ರೈಲ್ವೇ ಸ್ಟೇಷನ್ ಸಮೀಪದ ಕೆಲ ಭಾಗ, ಪುರದ ಓಣಿಯ ಕೆಲ ಭಾಗಗಳು, ಅಂಚೆ-ತಂತಿ ಇಲಾಖೆ ಕಟ್ಟಡಗಳು ಇದೇ ವ್ಯಾಪ್ತಿಯಲ್ಲಿವೆ. ಈ ವಾರ್ಡ್ ಅಭಿವೃದ್ಧಿಗೆ ರು. 1 ಕೋಟಿ ಬಿಡುಗಡೆಯಾಗಿದೆ. ಬಹುತೇಕ ಕಾಂಕ್ರಿಟ್ ರಸ್ತೆ ಕೆಲಸ ಮುಗಿದಿದೆ. ಒಳಚರಂಡಿ ಯೋಜನೆಗೆ ಚಾಲನೆ ಸಿಕ್ಕಿಲ್ಲ. ಕಾಂಕ್ರಿಟ್ ರಸ್ತೆ, ಪಕ್ಕಾ ಗಟಾರ ಮುಗಿದಿದ್ದರೂ ಅಪೂರ್ಣ ಒಳಚರಂಡಿ ಕಾಮಗಾರಿ, ಗುತ್ತಿಗೆದಾರನ ನಿರ್ಲಕ್ಷ್ಯದಿಂದ ರಸ್ತೆ ನಿರ್ಮಾಣ ಪ್ರಗತಿ ಕಂಡಿಲ್ಲ. ಎಲ್ಲ ಜಾತಿ ಸೇರಿ 950 ಮತದಾರರಲ್ಲಿ ಲಿಂಗಾಯತರೇ ಹೆಚ್ಚು. ಕಳೆದ ಬಾರಿ ಪಕ್ಷೇತರರಾಗಿ ಗೆದ್ದ ತಗಡಿನಮನಿ ವಿರುದ್ಧ ಬಿಜೆಪಿಯಿಂದ ಡಾ೤ ಎಸ್.ಎಸ್. ಶಿರಗುಪ್ಪಿ, ಪಕ್ಷೇತರರಾಗಿ ಬಸವರಾಜ ಹಾಲಪ್ಪನವರ ಸೋಲುಂಡರು. ಈ ವರ್ಷ ಮತ್ತೆ ತಗಡಿನಮನಿಗೆ ಪಕ್ಷೇತರರಾಗಿ ಸ್ಪರ್ಧಿಸುವ ಇರಾದೆ ಇದೆಯಂತೆ.

ಶಿಸ್ತಿನ ಶೆಟ್ಚರ್ ಮೇಡಮ್
ವಾರ್ಡ್ 16ರಲ್ಲಿ ಅಂಗನವಾಡಿ, ಸಭಾಭವನ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೂ ಜಾಗವಿಲ್ಲ. ಇದ್ದ 11 ಗುಂಟೆ ಜಾಗೆಯನ್ನು ಗೆಜೆಟ್‌ನಲ್ಲಿ ಖಬರಸ್ಥಾನಕ್ಕೆ ಮೀಸಲಿರಿಸಿದ್ದರಿಂದ ತುತ್ತು ಬಾಯಿಗೆ ಬಾರದಾಗಿದೆ ಎನ್ನುತ್ತಾರೆ ವಾರ್ಡಿನ ಸದಸ್ಯೆ ಬಿಜೆಪಿಯ ಲಲಿತಾ ಶೆಟ್ಟರ್. ವಾರ್ಡಿಗೆ ಬಂದ ರು. 91 ಲಕ್ಷ; ಬಿಡುಗಡೆ ಅರ್ಧ. ಪಕ್ಕಾ ಗಟಾರ ಬಹುತೇಕ ಮುಗಿದಿದೆ. ಒಳಚರಂಡಿ ಸೇರಿದಂತೆ ಬಹುತೇಕ ಕಾಮಗಾರಿ ಮುಗಿದಿಲ್ಲ. 2 ಕೊಳವೆ ಬಾವಿಗಳಿದ್ದು, ಮತ್ತೊಂದನ್ನು ಶೀಘ್ರ ಕೊರೆಸುತ್ತೇವೆ. ನೀರಿನ ಸಮಸ್ಯೆ, ಸ್ವಚ್ಛತೆ ಬಿಟ್ಟು ಉಳಿದದ್ದು ಸಾಮಾನ್ಯ. ಕೋಲಕಾರ ಓಣಿ, ಶಿವಬಸವ ನಗರದ ಕೆಲ ಭಾಗಗಳು ಈ ವಾರ್ಡ್ ವ್ಯಾಪ್ತಿಗಿದೆ. ಎಲ್ಲ ಸಮುದಾಯ ಸೇರಿ 1,100 ಮತದಾರರಿದ್ದಾರೆ. ಎಸ್‌ಎಫ್‌ಸಿ ಯೋಜನೆಯಡಿ ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ರು. 10 ಲಕ್ಷ ಇದ್ದರೂ ಜಾಗೆ ಸಮಸ್ಯೆಯಿಂದ ಸಾಕಾರವಾಗಿಲ್ಲ. ಉದ್ಯಾನ ನಿರ್ಮಿಸಲು ನಗರಸಭೆ ಸಹಕರಿಸುತ್ತಿಲ್ಲವಂತೆ. ಕಳೆದ ಬಾರಿ ಬಿಜೆಪಿಯಿಂದ ಗೆದ್ದ ಲಲಿತಾ ಶೆಟ್ಟರ್ ವಿರುದ್ಧ ಪಕ್ಷೇತರರಾಗಿ ಮಾಧುರಿ ದೇವಧರ, ಕಾಂಗ್ರೆಸ್‌ನಿಂದ ಶೈಲಜಾ ಲಿಂಗದಹಳ್ಳಿ ಸೋಲುಂಡಿದ್ದರು.

ಅಭಿವೃದ್ಧಿಗೆ ರಾಜಪುರೋಹಿತ ಆದ್ಯತೆ
80 ವರ್ಷಗಳಿಂದ ನೆನೆಗುದಿಗೆ ಬಿದ್ದ ಕಾಮಗಾರಿಗಳಲ್ಲಿ ಬಹುತೇಕ ಮುಗಿಸಿದ್ದರೂ ಇನ್ನೂ ಅರ್ಧದಷ್ಟು ಚಾಲನೆಗೊಳ್ಳಬೇಕಿರುವುದು ವಾರ್ಡ್ ನಂ. 20ರ ಅಸಲಿ ಹಕಿಹತ್. ಹಾಲಿ ಸದಸ್ಯೆ ಬಿಜೆಪಿಯ ಅನುಪಮಾ ರಾಜಪುರೋಹಿತ. ವಾರ್ಡ್‌ಗೆ ರು. 70 ಲಕ್ಷ ಬಂದರೂ ಅಭಿವೃದ್ಧಿಗೆ ಸಾಕಾಗದು. ಬಹುತೇಕ ಸಂದಿಗೊಂದಿಗಳಿಂದಲೇ ತುಂಬಿರುವ ಕೊಳಚೆಗಳನ್ನು ಎಸೆಯಲೆಂದೇ ಉಪಯೋಗಿಸಿದಂತಿರುವ ಈ ವಾರ್ಡ್ ಪ್ರಸಕ್ತ ಸಾಲಿನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದೆ. ಅತಿ ಹೆಚ್ಚಿನ ಭಂಗಿ ರಸ್ತೆಗಳಿಂದ ಕೂಡಿದ ವಾರ್ಡ್ ಒಳಚರಂಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಅಲ್ಲಲ್ಲಿ ಶೇ. 10ರಷ್ಟು ಕಾಮಗಾರಿ ಉಳಿದಿದೆ. ಅದರ ಮೇಲೆ ಮೆಟ್ಲಿಂಗ್ ಕಾರ್ಯ ಸಾಗಿದೆ. ಅದರ ಮೇಲೆ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕರಗುದರಿ ಚಾಳ, ತಾಪಂ, ಹಳೆ ಜಿಪಂ ಕಟ್ಟಡದ ಸುತ್ತಲಿನ ಭಾಗ, ಶಹರ ಠಾಣೆ, ಪೊಲೀಸ್ ಕ್ವಾರ್ಟರ್ಸ್‌ಗಳು ಈ ವಾರ್ಡ್ ವ್ಯಾಪ್ತಿಯಲ್ಲಿವೆ. ಶಹರ ಠಾಣೆ ಬಳಿ ಶಿವರಾಂ ಕಾರಂತ ವೃತ್ತದಲ್ಲಿ ಹೈಮಾಸ್ಟ್ ಅಳವಡಿಸಿದೆ. 7 ಕೊಳವೆ ಬಾವಿಗಳಿವೆ. ಪಕ್ಕಾ ಗಟಾರ ನಿರ್ಮಾಣ ಮುಗಿದಿದ್ದು, ರಸ್ತೆ ನಿರ್ಮಾಣ ಆದಲ್ಲಿ ಶೇ. 70ರ ಅಭಿವೃದ್ಧಿ ಪೂರ್ಣ. ಈ ವಾರ್ಡ್‌ನಲ್ಲಿ 1,200 ಮತದಾರರಿದ್ದು, ಲಿಂಗಾಯತ, ಬ್ರಾಹ್ಮಣ ಸೇರಿದಂತೆ ಹಿಂದುಳಿದ ವರ್ಗದವರಿದ್ದಾರೆ. ಇಲ್ಲಿ ಯಾರನ್ನೂ ನಿರ್ಲಕ್ಷ್ಯಿಸುವಂತಿಲ್ಲ. ಕಳೆದ ಬಾರಿ ಬಿಜೆಪಿಯಿಂದ ಆಯ್ಕೆಯಾದ ಅನುಪಮಾ ರಾಜಪುರೋಹಿತ ವಿರುದ್ಧ ಕಾಂಗ್ರೆಸ್‌ನಿಂದ ರಾಜೇಶ್ವರಿ ರಜಪೂತ ಸ್ಫರ್ಧಿಸಿ ಸೋತಿದ್ದರು. ಪ್ರಸಕ್ತ ಸಾಲಿನಲ್ಲಿಯೂ ಮತ್ತೆ ಅನುಪಮಾ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.

ಅಭಿವೃದ್ಧಿಯಲ್ಲಿ ಜಾರಿದ ಜಮಾದಾರ
ಈ ವಾರ್ಡಲ್ಲಿ ಮಾಂಸ, ಮೀನು ಮಾರುಕಟ್ಟೆಯಿಂದ ಮೂಗು ಮಚ್ಚಿ ತಿರುಗುವ ಸ್ಥಿತಿ ಈಗಿಲ್ಲ. ಪಕ್ಷೇತರರಾಗಿ 17ನೇ ವಾರ್ಡಿಗೆ ಸದಸ್ಯರಾಗಿ ಆಯ್ಕೆಯಾಗಿದ ಅಬ್ದುಲ್ ರಜಾಕ್ ಜಮಾದಾರ. ಸೂಲಮಟ್ಟಿ, ಕೋಲಕಾರ ಓಣಿಯ ಕೆಲ ಭಾಗಗಳು, ಮೀನು ಮಾರುಕಟ್ಟೆ, ಮಾಂಸ ಮಾರುಕಟ್ಟೆ, ನೀರಿನ ಟ್ಯಾಂಕ್ ಸುತ್ತಲಿನ ಈ ಪ್ರದೇಶ ಎತ್ತರ ಮಟ್ಟದ ಪ್ರದೇಶವಾಗಿದ್ದು, ಅದೇ ಕಾರಣಕ್ಕೆ 80 ವರ್ಷಗಳ ಹಿಂದೆ ಇಲ್ಲಿ ವಾಟರ್ ಟ್ಯಾಂಕ್ ನಿರ್ಮಾಣವಾಗಿದೆ. ವಾರ್ಡ್‌ಗೆ ಬಂದ ರು. 67 ಲಕ್ಷದಲ್ಲಿ ಅಲ್ಲಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಪ್ರಗತಿಯಲ್ಲಿದೆ. ಪಕ್ಕಾ ಗಟಾರ ನಿರ್ಮಾಣ ಮುಗಿದಿದೆ. ತಲಾ ರು. 5 ಲಕ್ಷದಲ್ಲಿ ದ್ವಾರಬಾಗಿಲು, ಅಂಗನವಾಡಿ ಕಟ್ಟಡ ನಿರ್ಮಾಣ ಜಮಾದಾರರ ಕೆಲಸಕ್ಕೆ ಸಾಕ್ಷಿ. ಅಪೂರ್ಣ ಒಳಚರಂಡಿ ಯೋಜನೆ, ಅರ್ಧಂಬರ್ಧ ಮೆಟ್ಲಿಂಗ್ ಇಲ್ಲಿ ಸಾಮಾನ್ಯ. ಇನ್ನು ಡಾಂಬರೀಕರಣ ಆಗಬೇಕಾದ ರಸ್ತೆಗಳೇ ಎಲ್ಲೆಂದರಲ್ಲಿ ಕಾಣಸಿಗುತ್ತವೆ. ಈ ವಾರ್ಡ್‌ನಲ್ಲಿ 946 ಮತದಾರರಿದ್ದಾರೆ. ವಾರ್ಡ್‌ನಲ್ಲಿ ಮುಸ್ಲಿಂ, ಮರಾಠಾ, ಪರಿಶಿಷ್ಟ ಜನಾಂಗ ಹಾಗೂ ಹಿಂದುಳಿದ ವರ್ಗಗಗಳ ಜನತೆ ವಾಸವಾಗಿದ್ದು, ಇಲ್ಲಿ ಯಾರೊಬ್ಬರೂ ನಿರ್ಣಾಯಕರಾಗದೇ ಎಲ್ಲ ಸಮುದಾಯ ಸಮಾನ ಪ್ರಾತಿನಿಧ್ಯ ಹೊಂದಿವೆ. ಕಳೆದ ಬಾರಿ ಚುನಾವಣೆಯಲ್ಲಿ ವಿಜಯ ಸಾಧಿಸಿದ್ದ ಅಬ್ದುಲ್ ರಜಾಕ್ ಜಮಾದಾರ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅವರ ವಿರುದ್ಧ ನಜೀರ ಕಾಗಿನೆಲ್ಲಿ ಕಾಂಗ್ರೆಸ್‌ನಿಂದ ಹಾಗೂ ಜೆಡಿಎಸ್‌ನಿಂದ ಇಮ್ತಿಯಾಜ್ ಬಿಜಾಪುರ ಸ್ಫರ್ಧಿಸಿ ಸೋಲನುಭವಿಸಿದ್ದಾರೆ. ಪ್ರಸಕ್ತ ಸಾಲಿನಲ್ಲೂ ಅಬ್ದುಲ್‌ರಜಾಕ್ ಜಮಾದಾರ ಸ್ಪರ್ಧಿಸುವ ಉಮೇದಿನಲ್ಲಿದ್ದಾರೆ.

ನಗರಸಭೆ ನಿರ್ಲಕ್ಷ್ಯ: ಬಾಗಿದ ಬೆಟಗೇರಿ
3 ಅಂಗನವಾಡಿ ಕೇಂದ್ರಗಳಿದ್ದರೂ ಸ್ವಂತ ಕಟ್ಟಡ ಇಲ್ಲ. ಅಂಬೇಡ್ಕರ ಭವನ, ಸಮಗಾರ ಸಭಾಭವನ, ಚೌಡೇಶ್ವರಿ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಕುರಿತಂತೆ ನಗರಸಭೆ ಸೌಲಭ್ಯ ಕಲ್ಪಿಸಲೇ ಇಲ್ಲ ಎಂಬ ದೂರು ವಾರ್ಡ್ 18ರ ಕಾಂಗ್ರೆಸ್ ಸದಸ್ಯೆ ಶಾರದಾ ಬೆಟಗೇರಿ ಅವರದು. ಈ ವಾರ್ಡ್‌ಗೆ ಹರಿದು ಬಂದ ಅನುದಾನ ಕೇವಲ 40 ಲಕ್ಷ. ಅಲ್ಲದೇ ಸಣ್ಣ ವಾರ್ಡೆಂಬ ತಾತ್ಸಾರ. ಈ ವಾರ್ಡ್‌ನಲ್ಲಿ ನದಿ ನೀರು ಪೂರೈಕೆಗಾಗಿ ಪೈಪ್‌ಲೈನ್ ವ್ಯವಸ್ಥೆ ಇಲ್ಲ. ಅಲ್ಲಲ್ಲಿ ಕಾಂಕ್ರಿಟ್ ರಸ್ತೆ, ಪಕ್ಕಾ ಗಟಾರ ಕಾಮಗಾರಿ ನಡೆದಿದೆ. ಬಹುತೇಕ ಹಿಂದುಳಿದ ವರ್ಗಗಗಳ ಜನತೆ ವಾಸವಾಗಿರುವ ಈ ವಾರ್ಡ್ ಅಭಿವೃದ್ಧಿಗೆ ನಗರಸಭೆ ಕೊಡುಗೆ ಅಷ್ಟಕ್ಕಷ್ಟೆ. ಒಳಚರಂಡಿ ಯೋಜನೆ ಇದ್ದ ವ್ಯವಸ್ಥೆಯನ್ನೂ ಹಾಳುಗೆಡವಿದೆ ಎಂಬ ಆರೋಪವಿದೆ. ಈ ವಾರ್ಡ್ ಮೊದಲೇ ಅತಿ ಹಳೆಯ ಹಿಂದುಳಿದ ಸ್ಥಳ. ಇಲ್ಲಿ ಯಾವುದಕ್ಕೂ ಜಾಗೆ ಇಲ್ಲದ ಸ್ಥಿತಿ. ಕಂದಕ ರೋಡ, ಪೆಂಜಾರ ಗಲ್ಲಿ, ಸುಭಾಸ್ ಸರ್ಕಲ್‌ನ ಒಂದು ಭಾಗ, ಶಿವಯೋಗೀಶ್ವರ ನಗರದ ಕೆಲ ಭಾಗಗಳು ಇದರ ವ್ಯಾಪ್ತಿಗೆ ಬರುತ್ತವೆ. ಇಲ್ಲಿ 1,360 ಮತದಾರರಿದ್ದಾರೆ. ಇದರಲ್ಲಿ ಮುಸ್ಲಿಂ  ಮತಗಳೇ ನಿರ್ಣಾಯಕ. ಇದನ್ನು ಹೊರತುಪಡಿಸಿದಂತೆ ಪ. ಜಾತಿ, ಮರಾಠಾ, ಕೆಲ ಹಿಂದುಳಿದ ವರ್ಗಗಳ ಜನತೆ ವಾಸವಾಗಿದ್ದಾರೆ. ಕಾಂಗ್ರೆಸ್‌ನಿಂದ ಗೆದ್ದ ಶಾರದಾ ಬೆಟಗೇರಿ ವಿರುದ್ಧ ಕಳೆದ ಬಾರಿ ಬೆಂಗಳೂರು ಕಮಲಮ್ಮ ಜೆಡಿಎಸ್‌ನಿಂದ, ಬಿಜೆಯಿಂದ ದಂಡೆಮ್ಮನವರ ಸೋಲನುಭವಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಶಾರದಾ ಬೆಟಗೇರಿ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದು, ಪತಿಯ ರಾಜಕಾರಣಕ್ಕೆ ಸಾಥ್ ನೀಡಲಿದ್ದಾರೆ.

ಕಾಮಗಾರಿಯಲ್ಲಿ ತೃಪ್ತಿಪಟ್ಟ ತುಪ್ಪದ
ಅಭಿವೃದ್ಧಿ ನಿಟ್ಟಿನಲ್ಲಿ ದಾಪುಗಾಲು ಹಾಕಿದ, ಯುಜಿಡಿ ಪೂರ್ಣಗೊಂಡ ವಾರ್ಡ್ 19 ಒಂದೇ. ಬಹುತೇಕ ನಗರದ ಮಧ್ಯವರ್ತಿ ಸ್ಥಳವಾಗಿರುವುದೇ ಈ ವಾರ್ಡ್ ಪ್ರತಿನಿಧಿಸಿದವರು ನಗರಸಭೆ ಸದಸ್ಯರಾಗಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಗಿರೀಶ ತುಪ್ಪದ ಬಿಜೆಪಿಯಿಂದ ಆಯ್ಕೆಯಾದವರು. ಈ ವಾರ್ಡ್‌ಗೆ ಬಂದ ಅನುದಾನ 90 ಲಕ್ಷ. ಇದರಲ್ಲಿ ಬಹುತೇಕ ಕಡೆ ಪಕ್ಕಾ ಗಟಾರ ನಿರ್ಮಿಸಿದರೂ ಕೆಲವೆಡೆ ಉಳಿದಿದೆ. ಕಾಂಕ್ರಿಟ್ ರಸ್ತೆ ಬಹುತೇಕ ಮುಗಿದಿದೆ. ತುಪ್ಪದ ಆಸಕ್ತಿ ಫಲವಾಗಿ ಒಳಚರಂಡಿ ಕಾಮಗಾರಿ ಮುಗಿದಿದೆ. ಸುಭಾಸ ವೃತ್ತ, ಹೊಸಮಠದ ಎದುರು 2 ಹೈಮಾಸ್ಟ್ ದೀಪ ಅಳವಡಿಸಿದೆ. ಬಸವ ಭವನದ ಬಸವೇಶ್ವರ ಗಾರ್ಡನ್ ಅಭಿವೃದ್ಧಿ ಮುಂತಾದ ಕಾಮಗಾರಿ ಪೂರೈಸಿದ್ದಾರೆ. ವಾರ್ಡ್‌ನಲ್ಲಿ 12 ಕೊಳವೆ ಬಾವಿಗಳಿದ್ದು, ಅಕ್ಕಮಹಾದೇವಿ ಹೊಂಡದ ಪಕ್ಕದಲ್ಲೇ ಇರುವುದರಿಂದಾಗಿ ನೀರಿನ ಕೊರತೆ ಇಲ್ಲ. 1,250ಕ್ಕೂ ಹೆಚ್ಚು ಮತದಾರರಿದ್ದು, ಲಿಂಗಾಯತ, ವಿಶ್ವಕರ್ಮ, ಮುಸ್ಲಿಂ, ಹಿಂದುಳಿದ ವರ್ಗದವರು ವಾಸವಾಗಿದ್ದಾರೆ. ಎಲ್ಲ ಮತ, ಪಂಗಡಗಳ ಜನತೆ ನಿರ್ಣಾಯಕ ಪಾತ್ರ ವಹಿಸುವವರಾಗಿದ್ದಾರೆ. ಕಳೆದ ಬಾರಿ ಗಿರೀಶ ತುಪ್ಪದ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಇವರ ವಿರುದ್ಧ ಕಾಂಗ್ರೆಸ್‌ನಿಂದ ಮಲ್ಲೇಶಪ್ಪ ಪಟ್ಟಣಶೆಟ್ಟಿ ಹಾಗೂ ಜೆಡಿಎಸ್‌ನಿಂದ ಈರಾಣಿ ಸ್ಫರ್ಧಿಸಿ ಸೋಲುಂಡಿದ್ದರು. ತುಪ್ಪದ ಇತ್ತೀಚಿನ ರಾಜಕೀಯ ವಿದ್ಯಮಾನದಲ್ಲಿ ಕೆಜೆಪಿಯೊಂದಿಗೆ ಪ್ರಬಲವಾಗಿ ಗುರುತಿಸಿಕೊಂಡು ಕೆಜೆಪಿ ಸಮಾವೇಶಕ್ಕೆ ಶ್ರಮಿಸಿದವರು. ಪ್ರಸಕ್ತ ಸಾಲಿನಲ್ಲಿ ಕೆಜೆಪಿಯಿಂದ ಸ್ಪರ್ಧಿಸಲು ಕಾತರರಾಗಿದ್ದಾರೆ.

ಅಭಿವೃದ್ಧಿ ನಿರ್ಲಕ್ಷಿಸಿದ ಚಿನ್ನಿಕಟ್ಟಿ
ಯಾಲಕ್ಕಿ ಕಂಪಿನ ನಾಡಿನಲ್ಲಿ ಉದ್ಯಾನ, ಅದಕ್ಕೆ ಕಾಂಪೌಂಡ್ ನಿರ್ಮಿಸಿದ ಕೀರ್ತಿ ವಾರ್ಡ್ ನಂ. 26ರ ಸದಸ್ಯ ಬಿಜೆಪಿಯ ವಿಜಯಕುಮಾರ ಚಿನ್ನಿಕಟ್ಟಿಗೆ ಸಲ್ಲುತ್ತದೆ. ಈ ವಾರ್ಡ್‌ಗೆ ಬಂದ ರು. 1.5 ಕೋಟಿಯಲ್ಲಿ ವೆಚ್ಚ 1 ಕೋಟಿ. ಅದರಲ್ಲಿ ಕಾಂಕ್ರಿಟ್ ರಸ್ತೆ, ಗಾರ್ಡನ್, ವಾಟರ್ ಟ್ಯಾಂಕ್, ಪಕ್ಕಾ ಗಟಾರ ಪೂರ್ಣಗೊಂಡಿದೆ. ಒಳಚರಂಡಿ ಯೋಜನೆ ಅಪೂರ್ಣ. ಸಿಡಿ ನಿರ್ಮಾಣ, ನೀರಿನ ಟ್ಯಾಪ್ ಅಳವಡಿಕೆ, ಗಾರ್ಡನ್‌ನಲ್ಲಿ ಕಾರಂಜಿ ಅಳವಡಿಕೆ ಮೂಲಕ ಕಾಮಗಾರಿ ವಿಸ್ತರಿಸಲಾಗಿದೆ. ಈ ವಾರ್ಡ್ ವ್ಯಾಪ್ತಿಗೆ ಶಿವಲಿಂಗ ನಗರ, ಕುಂಬಾರ ಓಣಿ, ಉದಯನಗರ, ವೀರಾಪುರ ರಸ್ತೆಯ ಕೆಲ ಭಾಗಗಳು ಬರುತ್ತಿದ್ದು, ಅಲ್ಲಿನ ಚೌಡೇಶ್ವರಿ ದೇವಸ್ಥಾನದ ಎದುರು ಉದ್ಯಾನವನ ನಿರ್ಮಾಣಕ್ಕಾಗಿ ಯೋಜನೆ ತಯಾರಿಸಲಾಗಿದೆ. ಕಾಮಗಾರಿ ನೆನೆಗುದಿಗೆ ಬಿದ್ದಿದೆ. 1,350 ಮತದಾರರಲ್ಲಿ ಲಿಂಗಾಯತ, ಮುಸ್ಲಿಂ, ಜೈನ್, ವಿಶ್ವಕರ್ಮ ಜನತೆ ಇದ್ದಾರೆ. ಇಲ್ಲಿ ಎಲ್ಲರೂ ಸಮಾನ ಪ್ರಾಶಸ್ತ್ಯ. ಬಿಜೆಪಿಯಿಂದ ಪ್ರತಿನಿಧಿಸಿದ ವಿಜಯಕುಮಾರ ಚಿನ್ನಿಕಟ್ಟಿ ವಿರುದ್ಧ ಕಳೆದ ಸಲ ಕಾಂಗ್ರೆಸ್‌ನಿಂದ ಶಿವಯೋಗಿ ಅರಸನಾಳ, ಜೆಡಿಎಸ್‌ನಿಂದ ಅಶೋಕ ಮುದಗಲ್ಲ ಸೋತಿದ್ದರು. ಈ ಬಾರಿ ಕೆಜೆಪಿಯಿಂದ ಸ್ಪರ್ಧಿಸಲಿದ್ದಾರೆ.

ಅಸಹಕಾರದಲ್ಲೂ ಮಂಜುಳಾ ಭೇಷ್
ಹಾವೇರಿ ರಸ್ತೆಗಳಿಗೆ ಡಾಂಬರೀಕರಣದ ಫರ್ಮಾನು ಹೊರಡಿಸಿದ್ದು ವಾರ್ಡ್ 21ರ ಬಿಜೆಪಿ ಸದಸ್ಯೆ ನಗರಸಭೆಯ ಮೊದಲ ಅವಧಿ ಅಧ್ಯಕ್ಷೆ ಮಂಜುಳಾ ಕರಬಸಮ್ಮನವರ. ನಗರಸಭೆ ಅಧ್ಯಕ್ಷರಾಗಿದ್ದಾಗ ಅನೇಕ ಯೋಜನೆ ಕೈಗೆತ್ತಿಕೊಂಡರೂ ಸದಸ್ಯರ ಅಸಹಕಾರದಿಂದ ವಿಪಕ್ಷದವರಂತೆ ಕಾರ್ಯ ನಿರ್ವ ಹಿಸಿದರು. ನಗರಸಭೆ ಪ್ರೌಢಶಾಲೆ ಶಿಕ್ಷಕರ ನೇಮಕಾತಿಯಲ್ಲಿ ಕೋರ್ಟ್‌ನಿಂದ ಭೇಷ್ ಎನಿಸಿಕೊಂಡರು. ವಾರ್ಡಿಗೆ ಬಂದ ರು. 80 ಲಕ್ಷದಲ್ಲಿ ಯುಜಿಡಿ ಅಪೂರ್ಣ. ಬಹುತೇಕ ಪಕ್ಕಾ ಗಟಾರ ನಿರ್ಮಾಣವಾಗಿದೆ. 8 ಸಿಡಿ ನಿರ್ಮಾಣ, ರು. 10 ಲಕ್ಷದಲ್ಲಿ ಕೊರವರ ಓಣಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ರಸ್ತೆಗಳ ಮೆಟ್ಲಿಂಗ್ ನಡೆದಿದೆ. ಡಾಂಬರೀಕರಣ ಆಗಬೇಕು. ಕೊರಗರ ಓಣಿ, ರಜಪೂತ ಓಣಿ, ಗೊಂದಲಿಗರ ಓಣಿ, ದೇಸಾಯಿ ಗಲ್ಲಿ, ಡೊಳ್ಳಿನ ಓಣಿಗಳು ವಾರ್ಡ್ ವ್ಯಾಪ್ತಿಗಿವೆ. 2 ಕೊಳವೆ ಬಾವಿ, 3 ಕೈಪಂಪ್‌ಗಳಿವೆ. ರು. 2 ಲಕ್ಷದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಸಿದೆ. 980 ಮತದಾರರಲ್ಲಿ ಶೇ. 40 ಕೊರವರು ನಿರ್ಣಾಯಕರು. ಗೊಂದಲಿಗರು, ರಜಪೂತ, ಕುರುಬ, ಲಿಂಗಾಯತ ಸಮಾಜದವರೂ ಇದ್ದಾರೆ. ಕಳೆದ ಬಾರಿ ಕರಬಸಮ್ಮನವರ ವಿರುದ್ಧ ಕಾಂಗ್ರೆಸ್‌ನಿಂದ ರತ್ನಾ ಭೀಮಕ್ಕನವರ ಸೋತಿದ್ದರು.

ನಗರಸಭೆ ತಾರತಮ್ಯ: ವೇದವ್ಯಾಸ ಕಟ್ಟಿ
ಒಳಚರಂಡಿ ಯೋಜನೆಯಿಂದಾಗಿ ವಾರ್ಡ್ 22ರಲ್ಲಿ ಸಮಸ್ಯಗಳದ್ದೇ ಸರಮಾಲೆ. ಹಾಲಿ ಸದಸ್ಯ ಬಿಜೆಪಿಯ ವೇದವ್ಯಾಸ ಕಟ್ಟಿ. ಇಲ್ಲಿ ಅಭಿವೃದ್ಧಿ ಕಾರ್ಯಗಳಿಗೂ ಮನೆಗಳನ್ನೇ ಉರುಳಿಸಬೇಕಾದ ಇಕ್ಕಟ್ಟಾದ ಪ್ರದೇಶ. ಈ ವಾರ್ಡ್‌ಗೆ ಬಂದ ರು. 52 ಲಕ್ಷದಲ್ಲಿ ಕಾಮಗಾರಿಗಳಿಗೆ ಸಿಕ್ಕಿದ್ದು ರು. 41ಲಕ್ಷ. ಉಳಿದ ಹಣವನ್ನು ಗಾಂಧಿರಸ್ತೆ ಅಭಿವೃದ್ಧಿಗೆ ಮೀಸಲಿರಿಸಿದೆ. ಇದರಲ್ಲಿ ಪಕ್ಕಾ ಗಟಾರ, ಸಂದಿಗೊಂದಿಗಳಲ್ಲಿ ಸ್ವಚ್ಛತೆ, ಸಣ್ಣ-ಪುಟ್ಟ ಚರಂಡಿಗಳ ನಿರ್ಮಾಣ ಅಲ್ಲಲ್ಲಿ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಮೆಟ್ಲಿಂಗ್‌ಗೆ ಹಣ ಬಿಡುಗಡೆಯಾಗಿಲ್ಲ. ಹಳೆ ಪೋಸ್ಟ್ ರೋಡ, ಪೋತದಾರ ಗಲ್ಲಿ, ಕೊಂಡವಾಡ ಗಲ್ಲಿ, ಈಶ್ವರ ದೇವಸ್ಥಾನ ರಸ್ತೆ ಕೆಲ ಭಾಗಗಳು ಈ ವಾರ್ಡ್ ವ್ಯಾಪ್ತಿಗಿವೆ. ಎಲ್ಲೂ ರಸ್ತೆ ಅಭಿವೃದ್ಧಿಪಡಿಸಿಲ್ಲ. ಮರುಡಾಂಬರೀಕರಣದ ಟೆಂಡರ್ ಮುಗಿದಿದೆ. 890 ಮತದಾರರಲ್ಲಿ ಲಿಂಗಾಯತ, ಬ್ರಾಹ್ಮಣರೇ ನಿರ್ಣಾಯಕ. ಇತರೆ ಸಮುದಾಯದವರೂ ಇದ್ದಾರೆ. 9 ಕೊಳವೆ ಬಾವಿಗಳಿವೆ. ಬಿಜೆಪಿಯಿಂದ ಆಯ್ಕೆಯಾದ ವೇದವ್ಯಾಸ ಕಟ್ಟಿ ವಿರುದ್ಧ ಕಳೆದ ಬಾರಿ ಜೆಡಿಎಸ್‌ನಿಂದ ತಿಪ್ಪಣ್ಣ ಕೂಲಿ, ಕಾಂಗ್ರೆಸ್‌ನಿಂದ ವೆಂಕಟೇಶ ಪಾಟೀಲ ಕುಲಕರ್ಣಿ ಸ್ಪರ್ಧಿಸಿ ಸೋಲುಂಡಿದ್ದರು.

ಛಲದಿಂದ ಶ್ರಮಿಸಿದ ಷಣ್ಮುಖ
ನೀರಿಗಾಗಿ ಪ್ರತಿ ವರ್ಷದ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಪರದಾಡುವ ಜನರ ಸಮಸ್ಯೆ ಪರಿಹರಿಸಲು ಸದಸ್ಯರು ಅಸಹಕಾರದಿಂದಾಗಿ ಈಡೇರಿಲ್ಲ ಎನ್ನುತ್ತಾರೆ ವಾರ್ಡ್ 23ರ ಬಿಜೆಪಿ ಸದಸ್ಯ ಡಾ. ಷಣ್ಮುಖಪ್ಪ ಕಮ್ಮಾರ. ಬಂದದ್ದು ರು. 48 ಲಕ್ಷ, ಬಿಡುಗಡೆಯಾದದ್ದು ರು. 33 ಲಕ್ಷ. ಎಲ್ಲ ಅಪೂರ್ಣ ಕಾಮಗಾರಿ. ಪಕ್ಕಾ ಗಟಾರ, ಒಳಚರಂಡಿ ಯೋಜನೆ ಮುಗಿದಿದೆ. ಈ ವಾರ್ಡ್ ವ್ಯಾಪ್ತಿಗೆ ಕಂದಕ ರೋಡನ ಒಂದು ಭಾಗ, ಚೌಡೇಶ್ವರಿ ದೇವಸ್ಥಾನದ ಸುತ್ತಲಿನ ಕೆಲ ಭಾಗಗಳು, ಹತ್ತರಗೇರಿ, ಹುಮನಾಬಾದ ಗಲ್ಲಿ ಬರುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಜಾಗ ಇಲ್ಲ. ಶೇ. 20 ಜನತೆ ಬಯಲು ಶೌಚ ನಂಬಿದ್ದಾರೆ. ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಇಲ್ಲಿನವರ ವಿರೋಧವಿದೆ. ಶೇ. 80 ಜನರು ಸಾರ್ವಜನಿಕ ನಳ ಅವಲಂಬಿಸಿದ್ದಾರೆ. 1,400 ಮತದಾರರಲ್ಲಿ ಮುಸ್ಲಿಮರೇ ನಿರ್ಣಾಯಕರು. ಲಿಂಗಾಯತ, ಎಸ್ಸಿ, ಎಸ್ಟಿ, ಇತರ ಹಿಂದುಳಿದ ವರ್ಗದವರಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಗೆದ್ದ ಡಾ. ಎಸ್.ಎಸ್. ಕಮ್ಮಾರ ವಿರುದ್ಧ ಕಾಂಗ್ರೆಸ್‌ನಿಂದ ನೂರ ಅಹ್ಮದ್ ಹಾಗೂ ಜೆಡಿಎಸ್‌ನಿಂದ ಬಸವರಾಜ ಹೊಸಮನಿ ಸ್ಫರ್ಧಿಸಿ ಸೋಲುಂಡಿದ್ದರು. ಪ್ರಸಕ್ತ ಡಾ. ಕಮ್ಮಾರ ಮತ್ತೆ ಕೆಜೆಪಿಯಿಂದ ಸ್ಪರ್ಧಿಸುವ ಸಿದ್ಧತೆಯಲ್ಲಿದ್ದಾರೆ.

ನೀರಿಗಾಗಿ ನಿರಾಸೆಯಾದ ನೀಲಮ್ಮ
ಹಾವೇರಿಯ ಬಹುತೇಕ ವಾರ್ಡ್‌ಲ್ಲಿ ಅಂಗನವಾಡಿಗಳು ಕಟ್ಟಡ ಕೊರತೆಯಿಂದ ಬಳಲುತ್ತಿವೆ. ಸಿದ್ಧವಾದ ಕಟ್ಟಡ ಸಾರ್ವಜನಿಕರ ಶಯನಗೃಹವಾಗಿವೆ. ಇದು ವಾರ್ಡ್ 24ರ ಗಮನಿಸಲೇಬೇಕಾದ ಒಂದಂಶ. ಈ ಅಂಗನವಾಡಿ ಕಟ್ಟಡ 8-10 ವರ್ಷಗಳಿಂದಲೂ ಕೆಲವರ ಖಾಸಗಿ ಸ್ವತ್ತಿನಂತೆ ಉಪಯೋಗಿಸಲ್ಪಡುತ್ತಿದೆ. ಈ ವಾರ್ಡ ಹಾಲಿ ಸದಸ್ಯೆ ಬಿಜೆಪಿಯ ನೀಲಮ್ಮ ಹಂಜಗಿ. ರು. 80 ಲಕ್ಷದಲ್ಲಿ 800 ಮೀ ಪಕ್ಕಾ ಗಟಾರ, ರು. 40 ಲಕ್ಷದಲ್ಲಿ ರಸ್ತೆ, ಮೆಟ್ಲಿಂಗ್ ಬಹುತೇಕ ಮುಗಿದಿದೆ. ರಸ್ತೆ ಕಾಮಗಾರಿ ನಡೆದಿದೆ. ಒಳಚರಂಡಿ ಯೋಜನೆ ಅಪೂರ್ಣ. ಹತ್ತರಗೇರಿ ಒಂದು ಭಾಗ, ನಡುವಿನಮಠ ದಡ್ಡಿ, ಕಂದಕರೋಡಿನ ಕೆಲ ಭಾಗಗಳು ಸೇರಿದಂತೆ ಸುತ್ತಲಿನ ಕೆಲ ಭಾಗಗಳು ವಾರ್ಡ್‌ನ ವ್ಯಾಪ್ತಿಗಿವೆ. 800 ಮತದಾರರಲ್ಲಿ ಲಿಂಗಾಯತರೇ ನಿರ್ಣಾಯಕ. ಮುಸ್ಲಿಂ, ಜೈನ, ಹಿಂದುಳಿದ ವರ್ಗದವರೂ ಇದ್ದಾರೆ. 3 ಬೋರ್‌ಗಳಲ್ಲಿ ಅಂತರ್ಜಲ ಕುಸಿತವಿದ್ದರಿಂದ ನೀರಿಗೆ ಹಾಹಾಕಾರ. ಪೈಪ್‌ಲೈನ್ ಸರಿಯಾಗಿರದ್ದರಿಂದ ಅಸಮರ್ಪಕನೀರು ಪೂರೈಕೆ. ಕಳೆದ ಬಾರಿ ಬಿಜೆಪಿಯ ನೀಲಮ್ಮ ಹಂಜಗಿ ವಿರುದ್ಧ ಕಾಂಗ್ರೆಸ್‌ನ ಪರ್ವಿನ್ ಯಾದವಾಡ್ ಸೋತಿದ್ದರು. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಲು ನೀಲಮ್ಮ ಸಜ್ಜಾಗಿದ್ದಾರೆ.

ಹಿಂದುಳಿದ ವಾರ್ಡಿಗೆ ಸಾಲಿ ಮುನ್ನುಡಿ
ಯಾವ ಯೋಜನೆಯಡಿ ವಾರ್ಡಿಗೆ ಹಣ ಬಿಡುಗಡೆಆದ ಬಗ್ಗೆ ಗೊತ್ತಿಲ್ಲದ, ಹಿಂದುಳಿದ ವಾರ್ಡ್ ಮಾದರಿಯಾಗಿಸಿದ ತೃಪ್ತಿ ಇದೆ ಎನ್ನುತ್ತಾರೆ 14ನೇ ವಾರ್ಡ್‌ನ ಪಕ್ಷೇತರ ಸದಸ್ಯ ಹನುಮಂತಪ್ಪ ಸಾಲಿ. ರು. 30 ಲಕ್ಷದಲ್ಲಿ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಾಣ, 650 ಮೀ. ರಸ್ತೆ ಮೆಟ್ಲಿಂಗ್ ಮುಗಿದಿದೆ. ವಿಜಯನಗರದ ಉದ್ಯಾನವನವನ್ನು ರು. 8 ಲಕ್ಷದಲ್ಲಿ ಅಭಿವೃದ್ಧಿಪಡಿಸಿದೆ. ಒಳಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಿದ್ದು, ನೀರು, ಬೀದಿ ದೀಪ ವ್ಯವಸ್ಥೆ ಸರಿಯಾಗಿಲ್ಲ ಎಂಬ ಆರೋಪ ಜನರದ್ದು. ಕೆಲವೆಡೆ ರಸ್ತೆ ಅಭಿವೃದ್ಧಿ ನಡೆದರೂ ಮುಗಿದಿಲ್ಲ. ನಾಗೇಂದ್ರನಮಟ್ಟಿ, ವಿಜಯನಗರ ಈ ವಾರ್ಡಿಗೆ ಸೇರಿವೆ. ಬಡವ, ದೀನದಲಿತರೇ ಹೆಚ್ಚಿರುವ ಈ ವಾರ್ಡ್‌ನಲ್ಲಿ ಆಗಬೇಕಾದ ಕೆಲಸಗಳು ಸಾಕಷ್ಟು. 1,317 ಮತದಾರರಿರುವ ಈ ವಾರ್ಡಿನಲ್ಲಿ ಯಾವುದೇ ಜಾತಿ, ಮತ, ಪಂಥದವರ ಪ್ರಾಬಲ್ಯ ಸಾಧಿಸಿಲ್ಲ. ನಿರ್ಗಮಿತ ಸದಸ್ಯ ಸಾಲಿ, ಪ್ರಸಕ್ತ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ. ಕಳೆದ ಬಾರಿ ಸಾಲಿ ವಿರುದ್ಧ ಪಕ್ಷೇತ್ರರ ಅಭ್ಯರ್ಥಿಯಾಗಿದ್ದ ಸುರೇಶ ದೊಡ್ಡಮನಿ ಹಾಗೂ ಬಿಜೆಪಿಯಿಂದ ಶಾಂತಣ್ಣ ಅರಸನಾಳ ಸ್ಪರ್ಧಿಸಿ ಸೋತ್ತಿದ್ದರು.

ಕಣದಿಂದ ಹಿಂದೆ ಸರಿದರೇ ಶೋಭಾ!
ಹಾವೇರಿಯಲ್ಲಿ ಆಡಳಿತ ಆರಂಭವಾಗಿ 85 ವರ್ಷಗಳಾದರೂ ಮಾಗಾವಿ ಕುಟುಂಬದ ಯಾರಾದ ರೊಬ್ಬರು ಆಯ್ಕೆಯಾಗುವುದು 25ನೇ ವಾರ್ಡ್‌ನ ವಿಶೇಷ. ಹಾಲಿ ಸದಸ್ಯೆ ಶೋಭಾ ಮಾಗಾವಿ. ಪ್ರಸಕ್ತ ಸಾಲಿನಿಂದ ಮಾಗಾವಿ ಕುಟುಂಬ ರಾಜಕಾರಣದಿಂದಲೇ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ. ರು. 1 ಕೋಟಿಯಲ್ಲಿ ಪಾಳು ಬಾವಿ ಮೇಲೆ 3 ಲಕ್ಷದಲ್ಲಿ ಅಂಗನವಾಡಿ ನಿರ್ಮಿಸಿದೆ. ಪಕ್ಕಾ ಗಟಾರ, 9 ಕಡೆ ಕಾಂಕ್ರಿಟ್ ರಸ್ತೆನಿರ್ಮಾಣ, 4 ಕಡೆ ಸಿಡಿ ನಿರ್ಮಾಣ, ಮೆಟ್ಲಿಂಗ್, ರಸ್ತೆ ಕಾಮಗಾರಿ ಬಾಕಿ ಉಳಿದಿದೆ. ಕೆಲ ಕಾಮಗಾರಿ ಬಾಕಿ ಇವೆ. ಒಳಚರಂಡಿ ಯೋಜನೆ ಅಪೂರ್ಣ. ಸ್ಟೇಷನ್ ರಸ್ತೆ, ಪುರದ ಓಣಿ ಸೇರಿದಂತೆ ಸುತ್ತಲಿನ ಪ್ರದೇಶಗಳ ಕೆಲ ಭಾಗಗಳು ಈ ವಾರ್ಡ್‌ನ ವ್ಯಾಪ್ತಿಗಿವೆ. ಪೈಪ್‌ಲೈನ್ ಅಸಮರ್ಪಕ. 4 ಕೊಳವೆ ಬಾವಿಗಳಿದ್ದರೂ ನೀರಿಗೆ ಪರದಾಟ. ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಕೆಲವರಿಂದ ಅಡ್ಡಿಯಿದೆ. 1,120 ಮತದಾರರಲ್ಲಿ ಉಪ್ಪಾರರೇ ನಿರ್ಣಾಯಕ. ಲಿಂಗಾಯತ, ಮುಸ್ಲಿಂ, ಕೆಲ ಹಿಂದುಳಿದ ವರ್ಗದವರಿದ್ದಾರೆ. ಬಿಜೆಪಿಯಿಂದ ಗೆದ್ದಿರುವ ಶೋಭಾ ಮಾಗಾವಿ ವಿರುದ್ಧ ಕಳೆದ ಬಾರಿ ಪಾರ್ವತಿ ಹಂಚಿನಮನಿ ಸೋತಿದ್ದರು. ಪ್ರಸಕ್ತ ರಾಜಕೀಯದಿಂದ ಶೋಭಾ ಹಿಂದೆ ಸರಿಯುತ್ತಾರಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement