ರಾಣಿಬೆನ್ನೂರಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ
ರಾಣಿಬೆನ್ನೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ರಾಷ್ಟ್ರವ್ಯಾಪಿ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ತಾಲೂಕಾದ್ಯಂತ ಮಿಶ್ರ ಪ್ರತಿಕ್ರಿಯೆ ಉಂಟಾಗಿತ್ತು.
ನಗರದಲ್ಲಿರುವ ಎಲ್ಲಾ ಸರ್ಕಾರಿ ಶಾಲೆ ಕಾಲೇಜುಗಳು, ರಾಷ್ಟ್ರೀಕೃತ ಬ್ಯಾಂಕ್ಗಳು, ಎಪಿಎಂಸಿ ಮಾರುಕಟ್ಟೆ, ಅಂಚೆ ಕಚೇರಿ, ಭಾರತ ಸಂಚಾರ ನಿಗಮದ ಉಪ ವಿಭಾಗಾಧಿಕಾರಿಗಳ ಕಚೇರಿ ಸಿಬ್ಬಂದಿ ಬಂದ್ಗೆ ಬೆಂಬಲಿಸಿ ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದರು. ರಾಜ್ಯ ರಸ್ತೆ ಸಾರಿಗೆ ಸಂಸ್ಧೆಯ ರಾಣಿಬೆನ್ನೂರು ಘಟಕದಿಂದ, ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಹಾಗೂ ಹಾವೇರಿ-ದಾವಣಗೆರೆಗೆ ಸಂಚರಿಸುವ ಬಸ್ಗಳು ಎಂದಿನಂತೆ ಸಂಚಾರ ನಡೆಸಿದವು.
ಪೆಟ್ರೋಲ್ ಬಂಕ್ಗಳ ಕಾರ್ಮಿಕರು, ಅಟೋ ಚಾಲಕರು ಕರ್ತವ್ಯದಲ್ಲಿ ನಿರತರಾಗಿದ್ದರು. ನೆಹರು ಮಾರುಕಟ್ಟೆಯಲ್ಲಿನ ಕಿರಾಣಿ ಅಂಗಡಿಗಳು, ತರಕಾರಿ ಮಾರುಕಟ್ಟೆ, ಎಂಜಿ ರಸ್ತೆಯಲ್ಲಿರುವ ಬಟ್ಟೆ ಹಾಗೂ ಇತರೆ ಅಂಗಡಿಗಳ ವ್ಯಾಪಾರಸ್ಥರು ತಮ್ಮ ವ್ಯಾಪಾರ ವಹಿವಾಟಿನಲ್ಲಿ ನಿರತರಾಗಿದ್ದರು.