ವ್ಯಾಪಾರ ಸ್ಥಗಿತ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ.20
ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಭಾರತ ಬಂದ್ ನಗರದಲ್ಲಿ ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ವಿವಿಧ ಕಾರ್ಮಿಕ ಸಂಘಟನೆಗಳು ಹೊಸಮನಿ ಸಿದ್ಧಪ್ಪ ವೃತ್ತದ ಬಳಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಬೆಲೆ ಏರಿಕೆ ನಿಯಂತ್ರಿಸದ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.
ರಾಷ್ಟ್ರೀಕೃತ ಬ್ಯಾಂಕುಗಳು ಹಣಕಾಸು ವಹಿವಾಟು ಸ್ಥಗಿತಗೊಳಿಸಿದ್ದನ್ನು ಬಿಟ್ಟರೆ ಇನ್ನುಳಿದಂತೆ ಸಾರ್ವಜನಿಕ ಜನ ಜೀವನ ಎಂದಿನಂತೆ ಸಾಗಿತ್ತು. ವಾಣಿಜ್ಯ ಮಳಿಗೆ, ಹೋಟೆಲ್, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಸಾರಿಗೆ ಸಂಸ್ಥೆ ಬಸ್‌ಗಳು, ಆಟೋ ಹಾಗೂ ಇನ್ನಿತರ ಖಾಸಗಿ ವಾಹನಗಳು ಎಂದಿನಂತೆ ಸಂಚರಿಸಿದವು.
ಮುಂಜಾಗ್ರತಾ ಕ್ರಮವಾಗಿ ಹಾವೇರಿ ಜಿಲ್ಲಾಧಿಕಾರಿಗಳು ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ್ದರು. ಬಂದ್ ಎಂಬ ಕಾರಣಕ್ಕೆ ಗ್ರಾಹಕರ ಸಂಖ್ಯೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಮುಖವಾಗಿತ್ತು. ರಕ್ಷಣಾ ಇಲಾಖೆ ಆಯಕಟ್ಟಿನ ಸ್ಥಳಗಳಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ನಿಯೋಜಿಸಿತ್ತು.
ಎಸ್‌ಎಫ್‌ಐ ಬೆಂಬಲ
ಭಾರತ ಬಂದ್‌ಗೆ ಎಸ್‌ಎಫ್‌ಐ ಜಿಲ್ಲಾ ಘಟಕವು ಬೆಂಬಲ ವ್ಯಕ್ತಪಡಿಸಿದೆ. ಜಿಲ್ಲಾಧ್ಯಕ್ಷ ಬಸವರಾಜ ಪೂಜಾರ, ಕಾರ್ಯದರ್ಶಿ ರೇಣುಕಾ ಕಹಾರ, ವೈ. ವಿನಾಯಕ, ಮಂಜುನಾಥ ಗೋಣೆಮ್ಮನವರ, ಮುದಾಸೀರ, ಕಿರಣ, ಸಂತೋಷ, ಭರತಕುಮಾರ, ಚಂದ್ರಶೇಖರ, ಇತರರು ಪಾಲ್ಗೊಂಡಿದ್ದರು.