ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸೌಲಭ್ಯಗಳನ್ನು ನೀಡದ ಕಾಂಗ್ರೆಸ್: ಸೋಮಣ್ಣ ಬೇವಿನಮರದ

Mainashree
Updated On : 21 Feb 2013, 10:32 am

ಬ್ಯಾಡಗಿ: ದೇಶದ ಜನರನ್ನು ಬಡತನದಿಂದ ಮುಕ್ತಗೊಳಿಸದೆ ಸರ್ಕಾರದ ಸೌಲಭ್ಯಗಳನ್ನು ಬಡ ಜನರಿಗೆ ತಲುಪಿಸುವಲ್ಲಿ ವಿಫಲವಾಗಿರುವುದು ಕಾಂಗ್ರೆಸ್ ನಡೆಸಿದ 60 ವರ್ಷಗಳ ಆಡಳಿತದ ಸಾಧನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಆರೋಪಿಸಿದರು.
ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜನರನ್ನು ಕತ್ತಲೆಯಲ್ಲಿರುವಂತೆ ಮಾಡಿರುವ ಕಾಂಗ್ರೆಸ್ ಅಭಿವೃದ್ಧಿಯಲ್ಲಿ ದೇಶವನ್ನು 20 ವರ್ಷಗಳಷ್ಟು ಹಿಂದಕ್ಕೆ ತಳ್ಳಿದೆ. ಕೇಂದ್ರ ಸರ್ಕಾರ ನಡೆಸಿದ ಸಮೀಕ್ಷೆಯಂತೆ ಅಭಿವೃದ್ಧಿ ಹೊಂದಿದ ರಾಜ್ಯಗಳ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಕ್ರಮವಾಗಿ ಗುಜರಾತ್ ಹಾಗೂ ಕರ್ನಾಟಕ ಪಡೆದಿದ್ದು, ಇದು ಬಿಜೆಪಿಯ ಹೆಮ್ಮೆಯ ಸಾಧನೆ ಎಂದರು.
ಬಿಜೆಪಿ ಕಾರ್ಯಕರ್ತರ ಪಕ್ಷ. ಕಾರ್ಯಕರ್ತರೇ ಪಕ್ಷದ ಆಸ್ತಿ. ವೈಯಕ್ತಿಕ ಹಿತಾಸಕ್ತಿಗಾಗಿ ಪಕ್ಷ ತ್ಯಜಿಸಿರುವ ಕಾರ್ಯಕರ್ತರು ಇರುಳು ಕಂಡ ಬಾವಿಗೆ ಹಗಲಲ್ಲಿ ಬಾವಿಗೆ ಬಿದ್ದಂತಾಗಿದೆ. ಬಿಜೆಪಿ ಸರ್ಕಾರದ ಸಾಧನೆಗಳನ್ನು ತಮ್ಮದೆಂಬಂತೆ ಬಿಂಬಿಸುತ್ತಿರುವುದು ಹಾಸ್ಯಾಸ್ಪದ. ಅಷ್ಟಕ್ಕೂ ಇಂಥ ಹೇಳಿಕೆ ನೀಡಲು ಅವರಿಗೆ ನೈತಿಕತೆ ಇಲ್ಲ. ಪ್ರಾದೇಶಿಕ ಪಕ್ಷದ ಪರಿಕಲ್ಪನೆ ಹೇಳುತ್ತಿರುವ ಸ್ಥಳೀಯ ಶಾಸಕರಿಗೂ ಅಧಿಕಾರ ಮರೀಚಿಕೆಯಾಗಲಿದ್ದು, ಪ್ರಬುದ್ಧ ಮತದಾರರು ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದರು.
ಮಠಕ್ಕೆ ರು. 15 ಕೋಟಿ: 2008 ರ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಬಿಜೆಪಿ ಈಡೇರಿಸಿದೆ, ಪ್ರಸಕ್ತ ಬಜೆಜ್‌ನಲ್ಲಿ ಸರ್ವಜ್ಞ ಪ್ರಾಧಿಕಾರ, ನಿಜಶರಣ ಅಂಬಿಗರ ಚೌಡಯ್ಯ ಪ್ರಾಧಿಕಾರ ರಚನೆ ಹಾಗೂ ಕಾಗಿನೆಲೆ ಕನಕ ಗುರುಪೀಠ ಅಭಿವೃದ್ಧಿಗೆ ತಲಾ ರು. 2 ಕೋಟಿ ಮೀಸಲಿಡಲಾಗಿದೆ. ಬ್ಯಾಡಗಿಯಲ್ಲಿ ಕನಕ ಭವನ ನಿರ್ಮಾಣಕ್ಕೆ ರು. 50 ಲಕ್ಷ, ಹಾವೇರಿಯ ಹುಕ್ಕೇರಿಮಠ, ತಿಪ್ಪಾಯಿಕೊಪ್ಪ ಮಠ ಸೇರಿ ಒಟ್ಟು ರು. 15 ಕೋಟಿ ಅನುದಾನ ಮೀಸಲಿಟ್ಟಿದೆ ಎಂದರು. ಜಿಲ್ಲೆಯ 193 ಸ್ಥಾನಗಳಲ್ಲಿ 89 ಸದಸ್ಯರು ಬಿಜೆಪಿಯಿಂದ ಆಯ್ಕೆಯಾಗಿದ್ದು, ಈ ಬಾರಿ 96ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ ಅಧ್ಯಕ್ಷತೆ ವಹಿಸಿದ್ದರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಯಣ್ಣ ಮಲ್ಲಿಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಣ್ಣ ಉಕ್ಕುಂದ, ವಿರೂಪಾಕ್ಷಪ್ಪ ಬಳ್ಳಾರಿ, ಸಿದ್ಧರಾಜು ಕಲಕೋಟಿ, ವೀರೇಂದ್ರ ಶೆಟ್ಟರ, ಸುರೇಶ ಉದ್ಯೋಗಣ್ಣನವರ, ಬಸವಂತಪ್ಪ ಬೂದೇರ, ನಾಗಯ್ಯ ಕಲ್ಮಠ, ಪ್ರಕಾಶ ಕಾಟೇನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement