ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅನುದಾನದ ಕ್ರಿಯಾಶೀಲ ಕಾರ್ಯ

Lingaraj Badiger
Updated On : 22 Feb 2013, 12:32 pm

ಅನುದಾನ ಜಮ್ಮಾಯಿಸಿದ ಜ್ಯೋತಿ
ಬಹುತೇಕ ಮಧ್ಯಮ, ಕೆಳವರ್ಗದ ಜನರೇ ವಾಸವಾಗಿರುವ, ಅತ್ಯಂತ ಇಕ್ಕಟ್ಟಿನ ವಾರ್ಡ ನಂ. 27ರ ಹಾಲಿ ಸದಸ್ಯೆ ಬಿಜೆಪಿಯ ಜ್ಯೋತಿ ಸಾತೇನಹಳ್ಳಿ. ಬಂದಿದ್ದು ರು. 60 ಲಕ್ಷ; ಬಿಡುಗಡೆಯಾಗಿದ್ದು ರು. 50 ಲಕ್ಷ. ಅದರಲ್ಲಿ 6 ಲಕ್ಷದಲ್ಲಿ ಸಾರ್ವಜನಿಕ ಶೌಚಾಲಯ, ಅದಕ್ಕೆ ಕೊಳವೆಬಾವಿ, ಪೈಪ್‌ಲೈನ್, ಸಿಂಟೆಕ್ಸ್ ಅಳವಡಿಸುವ ಮೂಲಕ ವಾರ್ಡಿನ ಜನತೆಗೆ ಸಾರ್ವಜನಿಕ ಸ್ವಚ್ಛತೆ ಹಾಗೂ ಪರಿಸರ ಕಾಳಜಿ ಮೂಡಿಸಿದ್ದಾರೆ. ರಸ್ತೆಗಳ ಮೆಟ್ಲಿಂಗ್, ಪೈಪ್‌ಲೈನ್ ಕಾಮಗಾರಿ ಅರ್ಧಂಬರ್ಧ ಆಗಿದೆ. ವಾರ್ಡ್ ವ್ಯಾಪ್ತಿಗೆ ಬಣ್ಣದಮಠದ ಸುತ್ತಲಿನ ಕೆಲ ಭಾಗಗಳು, ಯಾಲಕ್ಕಿ ಓಣಿ, ಗುಡಿಸಲಗೇರಿ, ಕೆಸಿಸಿ ಬ್ಯಾಂಕ್ ಸುತ್ತಲಿನ ಕೆಲ ಪ್ರದೇಶಗಳು, ಗುತ್ತಲ ರಸ್ತೆಯ ಕೆಲಭಾಗಗಳು ಹಾಗೂ ಹುಕ್ಕೇರಿಮಠದ ಸುತ್ತಲಿನ ಕೆಲ ಭಾಗಗಳು ಸೇರುತ್ತವೆ. ಇಲ್ಲಿ ಒಟ್ಟು 1,161 ಮತದಾರರಿದ್ದು, ಜೈನರು, ಲಿಂಗಾಯತ, ಮುಸ್ಲಿಂ, ಎಲ್ಲ ಸಮುದಾಯ ಇಲ್ಲಿ ವಾಸವಾಗಿದೆ. ಆದರೆ, ಲಿಂಗಾಯತ ಮತಗಳೇ ನಿರ್ಣಾಯಕ. ಕಳೆದ ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಜ್ಯೋತಿ ಸಾತೇನಹಳ್ಳಿ ವಿರುದ್ಧ ಕಾಂಗ್ರೆಸ್‌ನಿಂದ ಪಾರ್ವತಿ ಹಲಗಣ್ಣನವರ, ಜೆಡಿಎಸ್‌ನಿಂದ ಜಾಬೀನ ಸೋತಿದ್ದರು.

ಕಾರ್ಯದಲ್ಲಿ ಶಿಸ್ತಿನ ಸಿಪಾಯಿ ಶಶಿಕಲಾ
ಕಳೆದ ಬಾರಿ ಅತಿ ಹೆಚ್ಚಿನ ಅಂತರದಿಂದ ಗೆದ್ದು ಬಂದ ವಾರ್ಡ್ 28ರ ಬಿಜೆಪಿ ಸದಸ್ಯೆ ಶಶಿಕಲಾ ಕೋಡಿತ್ಕರ ಈಗ ಕೆಜೆಪಿಯಿಂದಲೇ ಸ್ಫರ್ಧಿಸಲು ತಯಾರಿ ನಡೆಸಿದ್ದಾರೆ. ಬಂದ ರು. 2 ಕೋಟಿಯಲ್ಲ್ಲಿ ಪಕ್ಕಾ ಗಟಾರ ಬಹುತೇಕ ಪೂರ್ಣಗೊಂಡಿದೆ. ಒಳಚರಂಡಿ ಯೋಜನೆ ಅಪೂರ್ಣ. ಕಾಂಕ್ರಿಟ್ ರಸ್ತೆ ನಿರ್ಮಾಣ ಅಲ್ಲಲ್ಲಿ ಪೂರ್ಣ. ಇತರೆ ರಸ್ತೆಗಳ ಮೆಟ್ಲಿಂಗ್ ಕಾಮಗಾರಿ ಸಾಗಿದ್ದು, ಕೆಲವೇ ದಿನಗಳಲ್ಲಿ ಡಾಂಬರೀಕರಣ ಕೈಗೆತ್ತಿಕೊಳ್ಳುವ ಸೂಚನೆ ಇದೆ. ರು. 1.15 ಹಾಗೂ ರು. 10 ಲಕ್ಷ ಮೌಲ್ಯದ ಸಾರ್ವಜನಿಕ ಶೌಚಾಲಯ ನಿರ್ಮಾಣ ಮೂಲಕ ಬಯಲು ಶೌಚಕ್ಕೆ ಮುಕ್ತಿ ಹಾಡಲಾಗಿದೆ. 8 ಸಿಡಿಗಳು ನಿರ್ಮಾಣಗೊಂಡಿದ್ದು, 3 ಕೊಳವೆ ಬಾವಿಗಳಿದ್ದರೂ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲವಾಗಿದೆ ಹಾಗೂ ಅಂತರ್ಜಲಮಟ್ಟ ಪಾತಾಳಕ್ಕಿಳಿದಿರುವುದು ಜನತೆಯಲ್ಲಿ ಆತಂಕ ಹೆಚ್ಚಿದೆ. ಈ ವಾರ್ಡ್ ವ್ಯಾಪ್ತಿಗೆ ಗೌಳಿಗಲ್ಲಿ, ಬಸ್ತಿ ಓಣಿ, ಅಕ್ಕಿಪೇಟೆ, ಗುಡಿಸಗೇರಿಯ ಕೆಲ ಭಾಗಗಳು, ಲಾಲ್‌ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆ, ಇನ್ನಿತರ ಹಲವು ಪ್ರದೇಶಗಳು ಬರುತ್ತಿದ್ದು, ಇಲ್ಲಿ ಒಟ್ಟು 1,100 ಮತದಾರರಿದ್ದಾರೆ. ಇಲ್ಲಿಯೂ ಲಿಂಗಾಯತ ಮತಗಳೇ ನಿರ್ಣಾಯಕ. ಮುಸ್ಲಿಂ, ಮರಾಠಾ, ಹಿಂದುಳಿದ ವರ್ಗಗಳ ಜನತೆ ಇಲ್ಲಿ ವಾಸವಾಗಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಚುನಾಯಿತರಾಗಿದ್ದ ಶಶಿಕಲಾ ಕೋಡಿತ್ಕರ ವಿರುದ್ಧ ಕಾಂಗ್ರೆಸ್‌ನಿಂದ ಸುಶೀಲಮ್ಮ ಗೌಳಿ ಸ್ಪರ್ಧಿಸಿದ್ದರು. ಈ ನೇರಾನೇರ ಸ್ಫರ್ಧೆಯಲ್ಲಿ 401 ಮತಗಳಿಂದ ಶಶಿಕಲಾ ಆಯ್ಕೆಯಾಗಿದ್ದರು. ಪ್ರಸಕ್ತ ಸಾಲಿನಲ್ಲಿ ಶಶಿಕಲಾ ಮತ್ತೆ ಕೆಜೆಪಿಯಿಂದ ಸ್ಪರ್ಧಿಸುವ ಕುರಿತಂತೆ ಸಿದ್ಧತೆಯಲ್ಲಿದ್ದಾರೆ.

ರಾಜಕೀಯ ಬೇಡವೇ ಬಾರ್ಕಿಯಮ್ಮ!
ಹಿಂದುಳಿದ ಪ್ರದೇಶ- ಮುಂದುವರಿಯುತ್ತಿರುವ ಪ್ರದೇಶವೆಂದೂ ಗುರುತಿಸದ ಸಂದಿಗ್ಧ ಸ್ಥಿತಿಯಲ್ಲಿನ ವಾರ್ಡ್ 29. ಹಾಲಿ ಸದಸ್ಯೆ ಬಿಜೆಪಿಯ ಗೌರಮ್ಮ ಬಾರ್ಕಿ. ಲಾಭದ ಲೆಕ್ಕಾಚಾರದ ರಾಜಕಾರಣ ಬೇಡವೆಂದು ನಿರಾಕರಿಸಿರುವ ಅವರು, ಸ್ಪರ್ಧಿಸದಿರಲು ನಿರ್ಧರಿಸಿ ಬಿಟ್ಟಿದ್ದಾರೆ. ಈ ವಾರ್ಡ್‌ಗೆ ಬಂದದ್ದು ರು. 1 ಕೋಟಿ. ಆದರೆ, ಬಿಡುಗಡೆಗೆ ಮೀನಮೇಷ. ಆಗದ ಕಾಮಗಾರಿಗೆ ಬಿಲ್ ನೀಡಲಾಗಿದೆ. ಆಗಿರುವ ಕೆಲಸಕ್ಕೆ ಬಿಲ್ ನೀಡದೇ ಗುತ್ತಿಗೆದಾರರನ್ನು ಸತಾಯಿಸಲಾಗುತ್ತಿದೆ. ಈ ಅನುದಾನದಲ್ಲಿ 8ಸಿಡಿ, ರು. 3 ಲಕ್ಷಗಳಲ್ಲಿ ಒಂದು ಅಂಗನವಾಡಿ ಕೇಂದ್ರ, ಪಕ್ಕಾ ಗಟಾರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಅಗತ್ಯವಿರುವ ಕಡೆಗಳಲ್ಲಿ ಕಾಂಕ್ರಿಟ್ ರಸ್ತೆ ಪೂರ್ಣಗೊಂಡಿದೆ. ಆದರೆ, ಒಳಚರಂಡಿ ಯೋಜನೆಯಿಂದಾಗಿ ವಿವಿಧ ಅಭಿವೃದ್ದಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ರಸ್ತೆಗಳ ಮೆಟ್ಲಿಂಗ್ ಆಗಿಲ್ಲ. ಡಾಂಬರೀಕರಣದ ವಾಸನೆಯೂ ಇಲ್ಲಿಲ್ಲ. ಇದರಿಂದಾಗಿ ಅಭಿವೃದ್ಧಿ ಕನಸು ಕನ್ನಡಿಗಂಟು. ವಾರ್ಡ್ ವ್ಯಾಪ್ತಿಗೆ ತಳವಾರ ಓಣಿ, ದರಗಾ ಗಲ್ಲಿ, ಕಲ್ಲುಮಂಟಪ ರಸ್ತೆಯ ಒಂದು ಭಾಗ, ಬಸದಿ ಓಣಿಯ ಕೆಲ ಭಾಗಗಳು ಸೇರಿದಂತೆ ಸುತ್ತಲಿನ ಕೆಲ ಪ್ರದೇಶಗಳು ಬರುತ್ತವೆ. ಇಲ್ಲಿ ಒಟ್ಟು 1,300 ಮತದಾರರಿದ್ದು, ಲಿಂಗಾಯತ, ಮುಸ್ಲಿಂ, ಹಿಂದುಳಿದ ವರ್ಗಗಳ ಜನತೆ, ಎಲ್ಲರೂ ಸಮಾನ ಪ್ರಾತಿನಿಧ್ಯ ಹೊಂದಿದ್ದಾರೆ. ಕಳೆದ ಬಾರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾದ ಗೌರಮ್ಮ ಬಾರ್ಕಿ ಅವರ ವಿರುದ್ಧ ಕಾಂಗ್ರೆಸ್‌ನಿಂದ ಮಾಣಿಕನವರ ಹಾಗೂ ಜೆಡಿಎಸ್‌ನಿಂದ ಏಕಬೋಟೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.


ಸಮರ್ಥವಾಗಿ ಹಣ ಬಳಸಿದ ಲಲಿತಾ
ನಗರಸಭೆ 2ನೇ ಅವಧಿಯಲ್ಲಿ ಉಪಾಧ್ಯಕ್ಷೆಯಾಗಿದ್ದರೂ ಅನುದಾನ ಪಡೆಯಲು, ನ್ಯಾಯೋಚಿತವಾಗಿ ಕಾರ್ಯ ನಿರ್ವಹಿಸಲು ಮುಜುಗರ ಅನುಭವಿಸುವ ಸ್ಥಿತಿ ಇತ್ತೆಂದು  ಆರೋಪಿಸಿದವರು ವಾರ್ಡ್. 30ರ ಬಿಜೆಪಿ ಸದಸ್ಯೆ, ನಿರ್ಗಮಿತ ನಗರಸಭೆ ಉಪಾಧ್ಯಕ್ಷೆ ಲಲಿತಾ ಗುಂಡೇನಹಳ್ಳಿ. ಬಂದ ರು. 60 ಲಕ್ಷದಲ್ಲಿ ಗಾಂಧಿ ವರ್ತುಲ, ಮೈಲಾರ ಮಹಾದೇವಪ್ಪ ವರ್ತುಲ, ಜಯಪ್ರಕಾಶ ನಾರಾಯಣ ವರ್ತುಲಗಳಿಗೆ ಹೈಮಾಸ್ಟ್ ಅಳವಡಿಸುವ ಮೂಲಕ ಕತ್ತಲ ಕೂಪವಾಗಿದ್ದ ನಗರದ ಮಧ್ಯವರ್ತಿ ಸ್ಥಳಕ್ಕೆ ಬೆಳಕಿನ ವ್ಯವಸ್ಥೆ ಕಲ್ಪಿಸಿದ್ದಾರೆ. ರು. 2 ಲಕ್ಷದಲ್ಲಿ ಅಂಗನವಾಡಿ ಕೇಂದ್ರ, ಪಕ್ಕಾ ಗಟಾರ, ಕಾಂಕ್ರಿಟ್ ರಸ್ತೆ ಕಾರ್ಯ ಪ್ರಗತಿಯಲ್ಲಿವೆ. 8 ಸಿಡಿ, ಒಳಚರಂಡಿ ಕಾರ್ಯ  ಅಂತಿಮ ಹಂತದಲ್ಲಿದೆ. ಮಣೇಗಾರ ಓಣಿಯಲ್ಲಿ ರು. 6.5 ಲಕ್ಷದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ವಾರ್ಡ್‌ಲ್ಲಿ 1,086 ಮತದಾರರಿದ್ದಾರೆ. ಲಿಂಗಾಯತ, ಮಣೇಗಾರ, ಮುಸ್ಲಿಂ, ಮರಾಠಾ, ಜೈನ, ಹಿಂದುಳಿದ ವರ್ಗಗಳ ಜನತೆ ಇಲ್ಲಿದ್ದು, ಎಲ್ಲರೂ ಸಮಾನ ಪ್ರಾತಿನಿಧ್ಯ ಕಾಯ್ದುಕೊಂಡಿದ್ದಾರೆ. ಮಣೇಗಾರ ಓಣಿ, ಗೂಗಿಕಟ್ಟಿ, ಸ್ವಾತಿ ಹೊಟೇಲ್ ಸುತ್ತಲಿನ ಕೆಲ ಭಾಗಗಳು ಹಾಗೂ ನಗರದ ಮೂರು ಪ್ರಮುಖ ವರ್ತುಲ ರಸ್ತೆಗಳು ವಾರ್ಡ್ ವ್ಯಾಪ್ತಿಗೆ ಬರುತ್ತವೆ. ಕಳೆದ ಬಾರಿ ನಗರಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಲಲಿತಾ ಗುಂಡೇನಹಳ್ಳಿ ವಿರುದ್ಧ ಕಾಂಗ್ರೆಸ್‌ನಿಂದ ವಿಜಯಲಕ್ಷ್ಮೀ ಚರಂತಿಮಠ ಹಾಗೂ ಪಕ್ಷೇತರರಾಗಿ ಶೇಖಮ್ಮ ಸುಣಗಾರ ಸ್ಪರ್ಧಿಸಿ ಸೋಲುಂಡಿದ್ದರು. ಪ್ರಸಕ್ತ ಸಾಲಿನಲ್ಲಿ ಗುಂಡೇನಹಳ್ಳಿ ಮತ್ತೆ ಬಿಜೆಪಿಯಿಂದ ಸ್ಫರ್ಧಿಸುವ ಸಿದ್ಧತೆಯಲ್ಲಿದ್ದಾರೆ.

ರಾಜಕಾರಣದಿಂದ ದೂರವೇ ರಾಜ?
ಸಮರ್ಪಕ ಆಡಳಿತ ನೀಡಬೇಕಾದವರೇ ಜವಾಬ್ದಾರಿ ಮರೆತು ಶೇ. 36 ಲಾಭಾಂಶ ಬಯಸಿದರೆ ಯಾವ ಗುತ್ತಿಗೆದಾರ ಕಾಮಗಾರಿ ನಿರ್ವಹಿಸಿಯಾನು? ಯಾವ ನಗರ ತಾನೆ ಅಭಿವೃದ್ಧಿಯಾದೀತೆಂದು ಪ್ರಶ್ನಿಸುತ್ತಾರೆ ವಾರ್ಡ್ 31ರ ಹಾಲಿ ಸದಸ್ಯ ಬಿಜೆಪಿಯ ರಾಜಶೇಖರ ಕಲ್ಲಮ್ಮನವರ ವೃತ್ತಿಯಿಂದ ಸಿವಿಲ್ ಎಂಜಿನೀಯರ್ ಆಗಿದ್ದರು. ಈಗ ರಾಜಕಾರಣದಿಂದ ದೂರಾಗುತ್ತಾರಂತೆ. ಬಂದ ರು. 1 ಕೋಟಿಯಲ್ಲಿ 14 ಸಿಡಿ, ಉದ್ಯಾನ, ಅಪೂರ್ಣ ಒಳಚರಂಡಿ ಕಾಮಗಾರಿ, ರಸ್ತೆಗಾಗಿ ಕಲ್ಲು ಸುರಿದು ಮೆಟ್ಲಿಂಗ್ ಮಾಡದೆ ಬಿಡುವ ಮೂಲಕ ಆಡಳಿತ ವರ್ಗ ಬಂಡೆದ್ದ ಸದಸ್ಯರನ್ನು ಹಣಿಯಲು ಕಂಡುಕೊಂಡ ಪರಿ ಇಲ್ಲಿದೆ. ಬಹುತೇಕ ವಾರ್ಡುಗಳಲ್ಲಿ ವಿವಿಧ ಕಾಮಗಾರಿಗಳು ಮಾಜಿ ಶಾಸಕ ನೆಹರು ಓಲೇಕಾರ ಪುತ್ರ, ಗುತ್ತಿಗೆದಾರ ಮಂಜುನಾಥ ಓಲೇಕಾರ ಪಾಲಾಗಿವೆ. ಅಭಿವೃದ್ಧಿ ಕಾಮಗಾರಿಗಳು ಶೂನ್ಯ. ಈ ವಾರ್ಡ್ ವ್ಯಾಪ್ತಿಗೆ ಅಶ್ವಿನಿ ನಗರದ 1 ಮತ್ತು 2ನೇ ಕ್ರಾಸ್, ವೈಭವಲಕ್ಷ್ಮೀ ಪಾರ್ಕ್, ವಿಶ್ವೇಶ್ವರತೀರ್ಥ ನಗರ, ದಾನೇಶ್ವರಿ ನಗರ, ಭಾರತಿನಗರ, ತಾಜ್ ನಗರ, ಆನಿಹೊಂಡ, ಮೆಹಬೂಬ ನಗರ ಬರುತ್ತಿವೆ. ನೀರಿಗೆ ಹಾಹಾಕಾರ. 1,600 ಮತದಾರರಿದ್ದು, ಲಿಂಗಾಯತ, ಮುಸ್ಲಿಂ, ಕುರುಬ, ಹಿಂದುಳಿದ ವರ್ಗಗಳ ಜನತೆ ವಾಸವಾಗಿದ್ದಾರೆ. ಆದರೆ, ಇಲ್ಲಿಯೂ ಲಿಂಗಾಯತ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ. ಕಳೆದ ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಸ್ಪರ್ಧಿಸಿದ್ದ ರಾಜಶೇಖರ ಕಲ್ಲಮ್ಮನವರ ವಿರುದ್ಧ ಸಚಿನ ಡಂಬಳ ಕಾಂಗ್ರೆಸ್‌ನಿಂದ ಹಾಗೂ ಜೆಡಿಎಸ್‌ನಿಂದ ಸುರೇಶ ಹೊಸಮನಿ ಸೋಲನುಭವಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement