ಪ್ರತಿಭೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ಯಶಸ್ಸು
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಫೆ.21
ಪ್ರತಿಭೆ ಪ್ರತಿ ವಿದ್ಯಾರ್ಥಿಗಳಲ್ಲಿ ಅಡಗಿದ್ದು, ಅದನ್ನು ಪ್ರಸ್ತುತಪಡಿಸಲು ಒದಗಿರುವ ಅವಕಾಶ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು. ಅದರಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಾಧ್ಯವಿದೆ ಎಂದು ಪುರಸಭೆ ಸದಸ್ಯ ಮಲ್ಲೇಶಪ್ಪ ಬಡ್ಡಿ ತಿಳಿಸಿದರು.
ತಾಲೂಕಿನ ಬಂಕಾಪುರ ಪಟ್ಟಣದ ಕರ್ನಾಟಕ ಕೀರ್ತಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಗೌರವದಿಂದ ಕಾಣಿ: ಪುರಸಭೆ ಸದಸ್ಯ ಸೋಮಶೇಖರಯ್ಯ ಗೌರಿಮಠ ಮಾತನಾಡಿ, ಶಿಕ್ಷಣದ ಜೊತೆಗೆ ತಂದೆ-ತಾಯಿಯರನ್ನು ಗೌರವಿಸುವ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಅದರಿಂದ ಭವಿಷ್ಯ ಉಜ್ವಲವಾಗಲು ಸಾಧ್ಯವಿದೆ ಎಂದರು.
ಸರ್ಕಾರಿ ಸಾರ್ವಜನಿಕ ಗ್ರಂಥಾಲಯದ ಪಾಲಕ ಬಿ.ಕೆ. ಮಹಾರಾಜ ಮಾತನಾಡಿ, ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅಂತಹ ವಾತಾವರಣ ಪಾಲಕರು ಮೂಡಿಸಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ಬಹುತೇಕ ಜನರಲ್ಲಿ ಓದುವ ಹವ್ಯಾಸ ಕ್ಷೀಣಿಸುತ್ತಿರುವುದು ಆತಂಕಕಾರಿ. ಯಾವುದೇ ವಿಷಯದ ಬಗ್ಗೆ ಗಾಢ ಅಧ್ಯಯನ ವ್ಯಕ್ತಿಯಲ್ಲಿರಬೇಕು ಎಂದು ಸಲಹೆ ಮಾಡಿದರು.
ಪ್ರಾಚಾರ್ಯ ಎಂ.ಎನ್. ಮಲ್ಲಾಡದ ಅಧ್ಯಕ್ಷತೆ ವಹಿಸಿದ್ದರು. ನಾಡ ಶಿಕ್ಷಣ ಸಮಿತಿ ಸದಸ್ಯ ನೀಲಪ್ಪ ಸಣ್ಣಕ್ಕಿ, ಕೀರ್ತಿ ಪ್ರೌಢಶಾಲೆ ಮುಖ್ಯೋಪಾದ್ಯಾಯ ಎಂ.ಬಿ. ಉಂಕಿ, ಉಪನ್ಯಾಸಕ ಎಸ್.ಬಿ. ಕುರಬರ, ಎಸ್.ಸಿ. ಕುರಂದವಾಡ ಮಾತನಾಡಿದರು.
ಕೀರ್ತಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಬಿ.ಎಸ್. ದುಂಡಪ್ಪನವರ, ಎಸ್.ಆರ್. ಕಾರಗಿ, ಎಂ.ಎಸ್. ಕನಕನವರ, ಜಗದೀಶ ಪುರದ, ಎಂ.ಆರ್. ಅಶೋಕ, ಎಸ್.ಆರ್. ಕೋರಿಶೆಟ್ರ, ಗಿರೀಶ ಕುರಂದವಾಡ, ಎಂ.ವಿ. ಗಾಡದ, ಎಸ್.ಬಿ. ಗೌಡರ, ವೈ.ಪಿ. ಹುಲ್ಲತ್ತಿ, ಇತರರಿದ್ದರು. ಇದೇ ಸಂದರ್ಭ ವಿವಿಧ ಸ್ಫರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಬಸಮ್ಮಾ ಗುಡಮಿ ಪ್ರಾರ್ಥಿಸಿದರು. ಪಿ.ವೈ. ಕಾಳಣ್ಣವರ ಸ್ವಾಗತಿಸಿದರು. ಎಲ್.ಆರ್. ಹಾವಣಗಿ, ಎಸ್.ಆರ್. ದಿಡಗೂರ ನಿರ್ವಹಿಸಿದರು. ಎಲ್.ಎಸ್. ಜಾಡಗೊಪ್ಪದ ವಂದಿಸಿದರು.