ಬಂದ್‌ಗೆ ನೀರಸ ಪ್ರತಿಕ್ರಿಯೆ
ಕೊಪ್ಪಳ: ಉದ್ಯೋಗದ ಅಭದ್ರತೆ, ಆಹಾರ ಧಾನ್ಯಗಳ ಬೆಲೆ ಏರಿಕೆ, ಡೀಸೆಲ್, ಪೆಟ್ರೋಲ್ ದರ ಏರಿಕೆ ತಡೆಯುವಂತೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಹಾಗೂ ಎಡಪಂಥೀಯ ಪಕ್ಷಗಳು ದೇಶಾದ್ಯಂತ ಕರೆ ನೀಡಿದ್ದ ಎರಡು ದಿನಗಳ ಸಾರ್ವತ್ರಿಕ ಮುಷ್ಕರಕ್ಕೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ಎರಡನೇ ದಿನ ನೀರಸವಾಗಿತ್ತು. ಜನ ಜೀವನ ಎಂದಿನಂತಿದ್ದರೆ, ವ್ಯಾಪಾರ ವಹಿವಾಟು ಸುಗಮವಾಗಿ ನಡೆಯಿತು.
ಬೆಳಗ್ಗೆ ಸುಮಾರು 10 ಗಂಟೆಯವರೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿದಿರಲಿಲ್ಲ. ಬಳಿಕ ಪರಿಸ್ಥಿತಿ ಅವಲೋಕಿಸಿ 11 ಗಂಟೆಗೆ ಸಂಚಾರ ಆರಂಭವಾಯಿತು. ಗುರುವಾರವೂ ಬಂದ್ ಜೋರಾಗಬಹುದೆಂದು ಬೆಳಗಿನ ಜಾವ ಮಾಲೀಕರು ಅಂಗಡಿ ಮುಂಗಟ್ಟು ತೆರೆದಿರಲಿಲ್ಲ. ಬಳಿಕ ನಗರದಲ್ಲಿನ ಒಂದೊಂದೇ ಅಂಗಡಿಗಳು ಪ್ರಾರಂಭವಾಗಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು.
ಬ್ಯಾಂಕ್ ಬಂದ್: ನಗರದ ಎಲ್ಲ ಸರ್ಕಾರಿ ಬ್ಯಾಂಕ್‌ಗಳು ಬಂದ್ ಆಗಿದ್ದವು. ಅಲ್ಲದೇ, ಎಟಿಎಂನಲ್ಲಿ ಹಣ ಇಲ್ಲದ್ದರಿಂದ ಜನ ಪರದಾಡುವಂತಾಯಿತು. ಅಲ್ಲದೆ, ಬ್ಯಾಂಕ್‌ಗಳು ಬಂದ್ ಆಗಿದ್ದರಿಂದ ಜನರು ತೊಂದರೆ ಅನುಭವಿಸಿದರು.
ಎಂದಿನಂತೆ ಶಾಲೆ: ಇನ್ನು ಬುಧವಾರ ಬಂದ್ ಆಗಿದ್ದ ಶಾಲೆ-ಕಾಲೇಜುಗಳು ಗುರುವಾರ ಎಂದಿನಂತೆ ಕಾರ್ಯನಿರ್ವಹಿಸಿದವು. ಪ್ರತಿಭಟನಾಕಾರರೂ ಬಂದ್‌ಗೆ ಅಡ್ಡಿಪಡಿಸಲಿಲ್ಲ.
ಪ್ರತಿಭಟನೆ: ನಗರದ ಸಂಘಟನೆಗಳು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು. ಪ್ರತಿಭಟನಾ ಮೆರವಣಿಯು ಇಲ್ಲಿಯ ಅಶೋಕ ವೃತ್ತ, ಭೀಮರಾಯ ವೃತ್ತದ ಮೂಲಕ ನೇರ ಬಸವೇಶ್ವರ ವೃತ್ತ ತಲುಪಿ ಅಲ್ಲಿ ಪ್ರತಿಭಟನೆ ಅಂತ್ಯವಾಯಿತು. ಪೊಲೀಸ್ ಪೇದೇಗಳು ಸಂಚಾರ ಸುಗಮಗೊಳಿಸಲು ಪ್ರಯಾಸ ಪಟ್ಟರು.
ಅಖಿಲ ಭಾರತ ಅಂಚೆ ನೌಕರರ ಸಂಘ, ರಾಜ್ಯ ಗ್ರಾಪಂ ನೌಕರರ ಸಂಘ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಟಿಯುಸಿಐ, ಯುನೈಟೆಡ್ ಫೋರಂ ಆಫ್ ಬಿಎಸ್‌ಎನ್‌ಎಲ್ ಯುನಿಯನ್ಸ್ ಮತ್ತು ಮೊದಲಾದ ಸಂಘಟನೆಗಳು ಭಾರತ ಬಂದ್ ಬೆಂಬಲಿಸಿದ್ದವು.