ಬಿಜೆಪಿ ಸಾಧನೆ ಪರಿಗಣಿಸಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ ಫೆ. 21
ಹಣದ ಆಮಿಷ ನೀಡಿ ಚುನಾವಣೆಯಲ್ಲಿ ಗೆಲ್ಲುವ ದಿನಗಳು ದೂರಾಗಿವೆ. ಪ್ರಭುದ್ಧ ಮತದಾರರು ಬಿಜೆಪಿ ಸರ್ಕಾರದ ಸಾಧನೆ ಪರಿಗಣಿಸಿ ಮತ ಚಲಾಯಿಸಲಿದ್ದಾರೆ ಎಂದು ಎಪಿಎಂಸಿ ಸದಸ್ಯ ಶಂಕರಗೌಡ ಪಾಟೀಲ ಹೇಳಿದರು. ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಪ್ರೇಮ ಸಂಕಣ್ಣನವರ ನಾಮಪತ್ರ ಸಲ್ಲಿಸಿ ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದರು. ಹಣದ ಆಮಿಷ ನೀಡುವ ಮೂಲಕ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗುತ್ತಿದ್ದ ಕಾಂಗ್ರೆಸ್ಗೆ, ಅಭಿವೃದ್ಧಿ ಎಂಬುದೇ ಗೊತ್ತಿಲ್ಲ. ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳು ಇಡೀ ಯೋಜನೆಗಳನ್ನು ನುಂಗಿ ಹಾಕುವ ಮೂಲಕ ಕಳೆದ 60 ವರ್ಷಗಳಿಂದ ದೇಶವನ್ನು ಬಡತನ ಬೇಗೆಯಲ್ಲಿರುವಂತೆ ಮಾಡಿದ್ದಾರೆ ಎಂದರು. ತಾಲೂಕು ಘಟಕದ ಅಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ ಮಾತನಾಡಿದರು. ನಾಮಪತ್ರ ಸಲ್ಲಿಸಿದ ಪ್ರೇಮಾ ಸಂಕಣ್ಣನವರ ಮಾತನಾಡಿ, ಈ ಬಾರಿ ಬಿಜೆಪಿಯಿಂದ 7ನೇ ವಾರ್ಡ್ಗೆ ಸ್ಪರ್ಧಿಸುತ್ತಿದ್ದೇನೆ. ಒಂದು ಬಾರಿ ಸದಸ್ಯೆಯಾಗಿ ಅನುಭವವಿರುವ ನನಗೆ ವಾರ್ಡ್ನಲ್ಲಿರುವ ಎಲ್ಲ ನಾಗರಿಕರ ಹತ್ತಿರದ ಪರಿಚಯವಿದ್ದು, ಪಟ್ಟಣದ ಅಭಿವೃದ್ಧಿಗೆ ಸದಾ ಸಿದ್ಧವಿರುವುದಾಗಿ ತಿಳಿಸಿದರು. ಈ ಸಂದರ್ಭ ಬಿಜೆಪಿ ಮುಖಂಡರಾದ ರಾಮಣ್ಣ ಉಕ್ಕುಂದ, ವೀರೇಂದ್ರ ಶೆಟ್ಟರ, ಇನ್ನಿತರರು ಹಾಜರಿದ್ದರು.