ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮೂರು ಪಕ್ಷಕ್ಕೆ ಪ್ರತಿಷ್ಠೆ ಕಣವಾದ ರಾಣಿಬೆನ್ನೂರು ನಗರಸಭೆ

Lingaraj Badiger
Updated On : 22 Feb 2013, 12:32 pm

ರಾಣಿಬೆನ್ನೂರು: ಜಿಲ್ಲೆಯ ಅತಿದೊಡ್ಡ ಪ್ರಗತಿಪರ ನಗರ, ಜಿಲ್ಲಾ ಕೇಂದ್ರಕ್ಕಿಂತಲೂ ದೊಡ್ಡ ನಗರಸಭೆ ಎಂಬ ಕೀರ್ತಿ ರಾಣಿಬೆನ್ನೂರಿನದ್ದು. ಇಲ್ಲಿ ಒಟ್ಟು 1,06,365 ಜನಸಂಖ್ಯೆ ಇದ್ದು, ಒಟ್ಟು ಮತದಾರರ ಸಂಖ್ಯೆ 65,738 ಅದರಲ್ಲಿ ಪುರುಷರು 33,893, ಮಹಿಳೆಯರ ಸಂಖ್ಯೆ 31,845 ಇದ್ದಾರೆ.
2007ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ರಾಣಿಬೆನ್ನೂರಿನ 31 ವಾರ್ಡುಗಳಿಗೆ ಚುನಾವಣೆ ಜರುಗಿ ಅದರಲ್ಲಿ 20 ಬಿಜೆಪಿ ಸದಸ್ಯರು, 10 ಕಾಂಗ್ರೆಸ್ ಹಾಗೂ ಓರ್ವ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಬಹುಮತ ಆಧಾರದ ಮೇಲೆ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯಿತು. ಆದರೆ, ವರ್ಷದ ಅವಧಿಯಲ್ಲೇ ಕಾಂಗ್ರೆಸ್‌ನ ನಗರಸಭಾ ಸದಸ್ಯನೋರ್ವ ಸಾವನ್ನಪ್ಪಿದ ಕಾರಣ ಮತ್ತೆ ಚುನಾವಣೆ ಜರುಗಿ ಬಿಜೆಪಿ ಜಯ ಗಳಿಸಿತು. ಇದರೊಂದಿಗೆ ಬಿಜೆಪಿ 21 ಹಾಗೂ ಕಾಂಗ್ರೆಸ್ 9 ಸದಸ್ಯ ಬಲ ಹೊಂದಿದವು. ನಂತರ ಮತ್ತೆ ಇದ್ದೋರ್ವ ಜೆಡಿಎಸ್ ಸದಸ್ಯನು ಅಕಾಲ ಮರಣಕ್ಕೆ ತುತ್ತಾಗಿದ್ದರಿಂದ ಮತ್ತೆ ಚುನಾವಣೆ ಜರುಗಿ ಅದರಲ್ಲಿ ಕಾಂಗ್ರೆಸ್ ಸದಸ್ಯ ಆಯ್ಕೆಗೊಳ್ಳುವ ಮೂಲಕ ಆಡಳಿತ ಪಕ್ಷ ಬಿಜೆಪಿ 21 ಹಾಗೂ ವಿರೋಧಪಕ್ಷ ಕಾಂಗ್ರೆಸ್ 10 ಸದಸ್ಯ ಬಲ ಹೊಂದಿದವು. ಕಳೆದ ಫೆ. 11ರಂದು ನಗರಸಭೆ ಅಧಿಕಾರಾವಧಿ ಮುಗಿದು ಈದೀಗ ಮತ್ತೆ ಚುನಾವಣೆ ಎದುರಾಗಿದೆ.
ಪ್ರಸಕ್ತ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂಬುದನ್ನರಿತ ಎಲ್ಲ ಪಕ್ಷಗಳು ರಾಜಕೀಯ ಸರ್ಕಸ್ ಆರಂಭಿಸಿದ್ದು, ತಮ್ಮ ಕಾರ್ಯಕರ್ತರನ್ನು ಕಾಯ್ದುಕೊಂಡು ಇತರ ಪಕ್ಷಗಳಲ್ಲಿನ ಐಕಾನ್‌ಗಳಿಗೆ ಬಲೆ ಬೀಸಿ ಶತಾಯಗತಾಯ ಆಡಳಿತ ಚುಕ್ಕಾಣಿ ಹಿಡಿಯಲೇಬೇಕೆಂಬ ನಿರ್ಧಾರದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿರುವುದು ಪ್ರಸ್ತುತ ರಾಣಿಬೆನ್ನೂರಿನಲ್ಲಿದೆ.
ಕಳೆದೆರಡು ಅವಧಿಯಲ್ಲೂ ಬಿಜೆಪಿಯಿಂದಲೇ ಶಾಸಕರಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸಿದ್ದ ಶಾಸಕ ಶಿವಣ್ಣ ತಿಳವಳ್ಳಿ ಪ್ರಸಕ್ತ ಕೆಜೆಪಿಗೆ ಹಾರಿ ಆ ಮೂಲಕ ಶಾಸಕರಾಗುವ ಕಾತರದಲ್ಲಿದ್ದಾರೆ. ಹಿಂದಿನ ಅವಧಿಯಲ್ಲಿ ಶಾಸಕ, ಸಚಿವರಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಸಚಿವ ಕೆ.ಬಿ. ಕೋಳಿವಾಡರಿಗೂ ಪ್ರಸಕ್ತ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರತಿಷ್ಠೆಯ ಪ್ರಶ್ನೆ. ಜೆಡಿಎಸ್ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಕೂಡ ವಿಶಿಷ್ಟ ಆಯ್ಕೆ ಮೂಲಕ ಮತದಾರಪ್ರಭು ಒಲೈಸುವ ಸರ್ಕಸ್ ಆರಂಭಿಸಿವೆ. ಈ ಮಧ್ಯೆ ವಿಧಾನಸಭಾ ಕ್ಷೇತ್ರ ಆಕಾಂಕ್ಷಿಯಾಗಿ ಕಳೆದೆರಡು ವರ್ಷದಿಂದ ರಾಣಿಬೆನ್ನೂರಿನಲ್ಲಿ ವಾಸವಾಗಿರುವ ಬಿಬಿಎಂಪಿ ಮಾಜಿ ಉಪಮೇಯರ್ ಆರ್. ಶಂಕರ ಅವರನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ದೂರವಿಟ್ಟರೂ ಜನತೆ ಅವರ ಮೂಲಕವೇ ಪಕ್ಷೇತರರಾಗಿ ಧುಮುಕಲು ಸಿದ್ದಗೊಳ್ಳುತ್ತಿದ್ದಾರೆ. ಇದು ನೇರ ಕಾಂಗ್ರೆಸ್‌ಗೆ ಕೊಡಲಿಯೇಟು ನೀಡುವುದರಲ್ಲಿ ಸಂದೇಹವಿಲ್ಲ.
ಪಕ್ಷಾಂತರಿಗಳಿಗೆ ಸುಗ್ಗಿ ಕಾಲ: ಸ್ಥಳೀಯ ಚುನಾವಣೆ ಎದುರಾದದ್ದೇ ಮುಖಂಡರಿಗೆ ಸಂದಿಗ್ಧ ಸ್ಥಿತಿ ತಂದಿರಿಸಿದೆ. ಎಲ್ಲ ಕಾರ್ಯಕರ್ತರನ್ನೂ ಸಮಾಧಾನಿಸಿ ಅವರ ಬೇಡಿಕೆ ಈಡೆರಿಕೆ ಹಾಗೂ ಆದ್ಯತೆಗೆ ಬೆಲೆ ನೀಡಬೇಕಲ್ಲದೇ ಗೆಲ್ಲುವ ಕುದುರೆಯನ್ನೇ ಆಯ್ಕೆ ಮಾಡುವುದೊಂದು ಸವಾಲಿನ ಕೆಲಸವಾಗಿದೆ. ಇದರೊಂದಿಗೆ ಗೆಲ್ಲುವ ಕುದುರೆಗಳೆನಿಸಿಕೊಂಡ ಹೊಸ ಮುಖಗಳಿಗೆ ಆದ್ಯತೆ ನೀಡುವುದೇ ಇಲ್ಲವೇ ಅಹರ್ನಿಶಿ ದುಡಿದ ಕಾರ್ಯಕರ್ತರಿಗೇ ನೀಡುವುದೊ ಎಂಬ ಗೊಂದಲದಲ್ಲಿದ್ದಾರೆ. ಇದರಿಂದ ರಂಗೇರಿದ ಚಟುವಟಿಕೆಗಳ ಮಧ್ಯೆ ಕೊಂಚ ಉಳ್ಳವರೂ ಪಕ್ಷದಿಂದ ಪಕ್ಷಕ್ಕೆ ಹಾರುವ ಮೂಲಕ ಶಾಕ್ ನೀಡಿದರೆ, ಮತ್ತೆ ಕೆಲವರು ಅಸಮಾಧಾನಕ್ಕೂ ಕಾರಣರಾಗಿದ್ದಾರೆ. ಇದು ಕೊಂಚ ಬಹಿರಂಗ ಸಭೆಗೆ ನಾಂದಿ ಹಾಡಿದರೇ ಮತ್ತೆ ಬಹುತೇಕ ಗೌಪ್ಯ ಸಭೆಗಳು ಅಲ್ಲಲ್ಲಿ ನಡೆಯುವ ಮೂಲಕ ಅಸಮಾಧಾನವನ್ನು ದೂರವಿಡುವ ಕುರಿತಂತೆ ಚಿಂತನೆ ನಡೆದಿದೆ.
ಗೊಂದಲದಲ್ಲಿ ಮತದಾರ: ಬದಲಾದ ರಾಜ್ಯ ರಾಜಕೀಯ ಮೇಲಾಟಗಳಿಂದಾಗಿ ಹಾಗೂ ದಿನಕ್ಕೊಂದು ಹೊಸ ಪಕ್ಷ ಇದರೊಂದಿಗೆ ಹೆಚ್ಚಿದ ಭ್ರಷ್ಟತೆಯಿಂದ ಮತದಾರ ಸಂಪೂರ್ಣ ಗೊಂದಲಮಯ ಸ್ಥಿತಿ ಎದುರಿಸುತ್ತಿದ್ದಾನೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್‌ನ ದಿನಕ್ಕೊಂದು ಹಗರಣ ಬಯಲಾಗುತ್ತಿದ್ದರೆ, ಮತ್ತೊಂದೆಡೆ ಹೋಳಾದ ಬಿಜೆಪಿ ಕುರಿತಂತೆ ಮತದಾರ ಅನುಕಂಪ ಅಲ್ಲಗಳೆಯುವಂತಿಲ್ಲ. 60 ವರ್ಷ ಆಡಳಿತಕ್ಕೂ ಹಾಗೂ 5 ವರ್ಷ ಆಡಳಿತದಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸುತ್ತಿರುವ ಮತದಾರ ಪ್ರಾದೇಶಿಕ ಪಕ್ಷಕ್ಕೆ ಮಣೆ ಹಾಕಿದರೂ ಆಶ್ಚರ್ಯ ಪಡುವಂತಿಲ್ಲ.
ಒಟ್ಟಿನಲ್ಲಿ ರಾಣಿಬೆನ್ನೂರು ನಗರಸಭೆ ಕಳೆದ ಸಾಲಿನಲ್ಲಿ ಸಾಧಿಸಿದ ಅಭಿವೃದ್ಧಿಯಷ್ಟೇ ಗುರುತರ ಆಪಾದನೆಗಳನ್ನೂ ಹೊತ್ತಿದೆ. ಅವೈಜ್ಞಾನಿಕ ಠರಾವು, ಪಾರ್ಕಿಂಗ್ ಫೀ, ಜನರಿಗೆ ನಿಲುಕದಷ್ಟು ವಿವಿಧ ಶುಲ್ಕಗಳನ್ನು ವಿಧಿಸುವ ಮೂಲಕ ಜನಸಾಮಾನ್ಯನಿಗೆ ಹೊರೆಯನ್ನೂ ಮಾಡಿದೆ. ಆದರೆ, ಇದೆಲ್ಲಕ್ಕೂ ಮತದಾರ ಕೆಲವೇ ದಿನಗಲಲ್ಲಿ ಉತ್ತರಿಸಲಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement