ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅರ್ಧಕ್ಕೆ ನಿಂತ ಒಳಚರಂಡಿ ಕಾಮಗಾರಿ

Mainashree
Updated On : 23 Feb 2013, 11:15 am

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಫೆ.22
ಏಳು ಕೊಳಚೆ ಪ್ರದೇಶಗಳನ್ನು ಒಳಗೊಂಡಿರುವ ಹಾನಗಲ್ ಪುರಸಭೆಯಲ್ಲಿ ಒಟ್ಟು 23 ವಾರ್ಡ್‌ಗಳಿವೆ. ಈ ಪುರಸಭೆಯ ಒಟ್ಟು ಜನಸಂಖ್ಯೆ 28,804. ಕಳೆದ ಬಾರಿ ಪುರಸಭೆ ಚುಕ್ಕಾಣಿಯನ್ನು ಆಡಳಿತಾರೂಢ ಬಿಜೆಪಿಯೇ ಹಿಡಿದಿತ್ತು. ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವ ಕೆಜೆಪಿ ಮುಖಂಡ ಸಿ.ಎಂ. ಉದಾಸಿ ಹಾನಗಲ್‌ನ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ವಿವಿಧ ಯೋಜನೆ ಅಡಿಯಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಜನಸಾಮಾನ್ಯರ ಅಚ್ಚುಮೆಚ್ಚಿನ ನಾಯಕರಾಗಿ ಬೆಳೆದಿದ್ದಾರೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಹಾನಗಲ್ ಪುರಸಭೆ ಒಟ್ಟು ರು. 10 ಕೋಟಿ ಮಂಜೂರಾಗಿದ್ದು, ಈ ಪೈಕಿ ರು. 8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಪುರಸಭೆ ವ್ಯಾಪ್ತಿಯ 4 ಉದ್ಯಾನವನಗಳ ಪೈಕಿ 3ನ್ನು ಅಭಿವೃದ್ಧಿಪಡಿಸಲಾಗಿದೆ. 23 ಸುಸಜ್ಜಿತ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 18 ಕೇಂದ್ರಗಳು ಸರ್ಕಾರದ ಆಸ್ತಿಯಾಗಿವೆ. ಶೇ. 80ರಷ್ಟು ಪಕ್ಕಾ ಗಟಾರ್ ಕಾಮಗಾರಿ ಪೂರ್ಣಗೊಂಡಿದೆ. ಕಾಂಕ್ರಿಟ್ ರಸ್ತೆ ಶೇ. 70ರಷ್ಟು ನಿರ್ಮಿಸಲಾಗಿದೆ. ರು. 25 ಲಕ್ಷ ವೆಚ್ಚದಲ್ಲಿ ಹೈಟೆಕ್ ಪುರಸಭೆ ಸಭಾಭವನ ನಿರ್ಮಿಸಲಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ಅತಿ ಹಳೆಯದಾದ ಕುರುಬಾವಿಯನ್ನು ರು. 13 ಲಕ್ಷ ಖರ್ಚು ಮಾಡಿ ಅಭಿವೃದ್ಧಿ ಮಾಡಲಾಗಿದ್ದು, ಈ ಬಾವಿಯಿಂದಲೇ ಪಟ್ಟಣದ ಬಹುತೇಕ ಭಾಗಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇದರಿಂದಾಗಿ ಕುಡಿಯುವ ನೀರಿನ ಹಾಹಾಕಾರ ಸ್ವಲ್ಪ ಮಟ್ಟಿಗೆ ತಪ್ಪಿದೆ. ಒಳಚರಂಡಿ ಕಾಮಗಾರಿಗಳು ಬಹುತೇಕ ಕಡೆಗಳಲ್ಲಿ ನಡೆದಿವೆಯಾದರೂ ಇನ್ನೂ ಕೆಲವಡೆ ಅರ್ಧಕ್ಕೆ ಮೊಟಕುಗೊಂಡಿವೆ.
ಕದನ ಕುತೂಹಲ: ಅಧಿಕಾರಾವಧಿಯನ್ನು ಸಮರ್ಪಕ ರೀತಿಯಲ್ಲಿ ನಿಭಾಯಿಸುವ ಮೂಲಕ ಜನಸಾಮಾನ್ಯರಿಗೆ ಮೂಲ ಸೌಕರ್ಯ ಒದಗಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ ಎಂಬ ಘೋಷವಾಕ್ಯದೊಂದಿಗೆ ಬಿಜೆಪಿ ಈ ಬಾರಿ ಚುನಾವಣಾ ಕಣಕ್ಕೆ ಧುಮಕಿದೆ. ಬಿಜೆಪಿಯಿಂದ ಕೆಜೆಪಿಗೆ ಹಾರಿರುವ ಕೆಲ ಸದಸ್ಯರು ಹೇಗಾದರೂ ಸರಿ, ಈ ಬಾರಿ ಪುರಸಭೆಯಲ್ಲಿ ಕೆಜೆಪಿ ಬಾವುಟ ಹಾರಿಸುವ ಮೂಲಕ ಬಿಎಸ್‌ವೈ ಕೈ ಬಲಪಡಿಸಬೇಕೆಂಬ ತವಕದಲ್ಲಿದ್ದಾರೆ.
ಬಿಜೆಪಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ. ಜನಸಾಮಾನ್ಯರ ಹಿತಕ್ಕಿಂತಲೂ ಕುರ್ಚಿಗಾಗಿ ಕಿತ್ತಾಡಿದ್ದೇ ಹೆಚ್ಚು ಎಂಬುದನ್ನು ಮತದಾರನಿಗೆ ಮನವರಿಕೆ ಮಾಡಿಕೊಡುವ ಮೂಲಕ ಜನರ ಮನಸ್ಸು ಪರಿರ್ವತಿಸಲು ಕಾಂಗ್ರೆಸ್, ಜೆಡಿಎಸ್ ಮುಂದಾಗಿದ್ದು, ಪುರಸಭೆ ಈ ಚುನಾವಣೆ ಕದನ ಕುತೂಹಲ ಸೃಷ್ಟಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement