ದೂರದೃಷ್ಟಿ ಕೊರತೆ: ಅಭಿವೃದ್ಧಿ ಕುಂಠಿತ
ಬಿ.ಕೆ. ಮಹೇಂದ್ರ
ಸವಣೂರು: ಪುರಪಿತೃಗಳು ಸ್ವಾರ್ಥ ಸಾಧನೆಯಲ್ಲಿ ತೊಡಗಿಸಿಕೊಂಡರೆ ಯಾವುದೇ ಪ್ರದೇಶ ಅಭಿವೃದ್ಧಿಯಾಗಲು ಸಾಧ್ಯವೇ ಇಲ್ಲ ಎಂಬುದಕ್ಕೆ ಸವಣೂರು ಪುರಸಭೆ ಅತ್ಯುತ್ತಮ ನಿದರ್ಶನ. ಈ ಕ್ಷೇತ್ರದ ಶಾಸಕರು ಹಾಗೂ ಸಚಿವರು ಪುರಸಭೆಯಲ್ಲಿ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಗಳಿಗಾಗಿ ಕೋಟ್ಯಂತರ ಅನುದಾನವನ್ನು ಸರ್ಕಾರದಿಂದ ಬಿಡುಗಡೆಗೊಳಿಸಿದ್ದರೂ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಪುರಪಿತೃಗಳಲ್ಲಿನ ದೂರದೃಷ್ಟಿತ್ವ ಕೊರತೆ ಎದ್ದು ಕಾಣುತ್ತದೆ.
ಕುಡಿಯುವ ನೀರು, ಒಳಚರಂಡಿ, ರಸ್ತೆ, ಇನ್ನಿತರ ವಿವಿಧ ಕಾಮಗಾರಿಗಳಿಗಾಗಿ ಸರ್ಕಾರ ಪುರಸಭೆಗೆ ಒಟ್ಟು ರು. 20 ಕೋಟಿ ಅನುದಾನ ಮಂಜೂರು ಮಾಡಿದೆ. ಈ ಪೈಕಿ ರು. 15 ಕೋಟಿಗಳಲ್ಲಿ ಪಕ್ಕಾ ಗಟಾರ, ಕಾಂಕ್ರಿಟ್ ರಸ್ತೆಗಳ ನಿರ್ಮಾಣ ಮಾಡಲಾಗಿದೆ. ಅತಿ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಮೋತಿ ತಲಾಬ್ ಕೆರೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೇ, ಕೆರೆಗೆ ನೀರು ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ. ಒಟ್ಟು 25,650 ಮತದಾರರನ್ನು ಹೊಂದಿರುವ ಪುರಸಭೆ 23 ವಾರ್ಡ್ಗಳನ್ನು ಹೊಂದಿದೆ.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಲಾಗಿರುವ ಚಾಲನೆ ಆಮೆಗತಿಯಲ್ಲಿ ಸಾಗಿದ್ದರಿಂದ ಜನಸಾಮಾನ್ಯರಿಗೆ ನಿರೀಕ್ಷಿತ ಸಮಯದಲ್ಲಿ ಅವುಗಳ ಪ್ರಯೋಜನ ದಕ್ಕದಂತಹ ಪರಿಸ್ಥಿತಿ ಇಲ್ಲಿ ಕಂಡು ಬರುತ್ತಿದೆ.
ಅಭಿವೃದ್ಧಿ-ಭ್ರಷ್ಟಾಚಾರ: ನಾಲ್ಕುವರೆ ವರ್ಷ ಅವಧಿಯಲ್ಲಿ ಪುರಸಭೆ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿ, ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆಗೊಳಿಸುವ ಮೂಲಕ ಹಾವೇರಿ ಜಿಲ್ಲೆಯಲ್ಲೇ ಸವಣೂರು ಪುರಸಭೆಯನ್ನು ಮಾದರಿಯನ್ನಾಗಿಸಿದೆ ಎಂದು ನಿರ್ಗಮಿತ ಬಿಜೆಪಿ ಸದಸ್ಯರು ಮತದಾರರ ಮನ ಮುಟ್ಟುವಂತೆ ತಿಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೇ, ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಹಾಗೂ ಹೊಸ ಆಕಾಂಕ್ಷಿಗಳು ಬಿಜೆಪಿ ಅವಧಿಯಲ್ಲಿ ನಡೆದಿದ್ದು ಬರೀ ಭ್ರಷ್ಟಾಚಾರ ಹಾಗೂ ದುರಾಡಳಿತ. ಇಂತಹ ಪಕ್ಷವನ್ನು ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ಮಟ್ಟದವರೆಗೂ ಕಿತ್ತು ಎಸೆಯಬೇಕು. ಅದಕ್ಕಾಗಿ ಈ ಬಾರಿ ಕಾಂಗ್ರೆಸ್ಗೆ ಮತ ನೀಡುವಂತೆ ವಿನಂತಿಸಿಕೊಳ್ಳುತ್ತಿದ್ದಾರೆ.
ಬದಲಾದ ರಾಜಕೀಯ ಸನ್ನಿವೇಶದಿಂದ ಬಿಜೆಪಿ ಮತ್ತಿತರ ಪಕ್ಷಗಳಿಂದ ಕೆಜೆಪಿಗೆ ಹಾರಿ ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧಿಸಿರುವ ಸ್ಪರ್ಧಾಳುಗಳು, ಬಿಎಸ್ವೈ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಹಾವೇರಿ ಜಿಲ್ಲೆಗೆ ವಿಶೇಷವಾಗಿ ಸವಣೂರು ಪುರಸಭೆಗೆ ವಿಶೇಷ ಅನುದಾನ ನೀಡಿದ್ದು, ಈ ಬಾರಿ ಚುನಾವಣೆಯಲ್ಲಿ ಬಿಎಸ್ವೈ ಬೆಂಬಲಿತ ಅಭ್ಯರ್ಥಿಗಳಿಗೆ ಮನ್ನಣೆ ನೀಡುವ ಮೂಲಕ ಪುರಸಭೆ ಅಭಿವೃದ್ಧಿಗೆ ಕೈಜೋಡಿಸುವಂತೆ ವಿನಂತಿಸಿದ್ದಾರೆ.