ಬಂಕಾಪುರದಲ್ಲಿ ಆಗಬೇಕಾದ ಕೆಲಸ ಬೆಟ್ಟದಷ್ಟಿವೆ
ಹಾವೇರಿ: ರಾಜ್ಯದಲ್ಲೇ ಮೊದಲ ಬಾರಿಗೆ ಮಲೇಶಿಯಾ ತಂತ್ರಜ್ಞಾನದಿಂದ 5 ದಿನಗಳಲ್ಲಿ ಬಡವರಿಗೆ ಮನೆ ನಿರ್ಮಿಸುವ ಯೋಜನೆಗೆ ಚಾಲನೆ ಸಿಕ್ಕ ಹೆಗ್ಗಳಿಕೆ ಈ ಬಂಕಾಪುರ ಪುರಸಭೆಗೆ ಸಲ್ಲುತ್ತದೆ. ಪುರಸಭೆ ವ್ಯಾಪ್ತಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆದರೂ ಆಗಬೇಕಾದ ಕೆಲಸಗಳು ಬೆಟ್ಟದ್ದಷ್ಟಿವೆ.
2010-11ನೇ ಸಾಲಿನಲ್ಲಿ ರು. 1 ಕೋಟಿ ಎಸ್‌ಎಫ್‌ಸಿ ಅನುದಾನದಲ್ಲಿ ಕಾಂಕ್ರಿಟ್ ರಸ್ತೆಗಳು, ರು. 20 ಕೋಟಿಯಲ್ಲಿ ಕೆಡ್ಲ್ಯೂಎಸ್ ನೀರಿವ ವ್ಯವಸ್ಥೆ ಸುಧಾರಣೆ ನಡೆದಿದೆ. ವಿವಿಧ ಕಾಮಗಾರಿಗಾಗಿ ರು. 14.68 ಕೋಟಿ ಮಂಜೂರಾಗಿದೆ. ಅದರಲ್ಲಿ ರು. 12.99 ಕೋಟಿ ಖರ್ಚಾಗಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ಬಿಡುಗಡೆಯಾಗಿರುವ ರು. 1.30 ಕೋಟಿಯನ್ನು ರಸ್ತೆಗಳ ಅಭಿವೃದ್ಧಿಗೆ ವ್ಯಯಿಸಿದ್ದು, ಪುರಸಭೆ ವ್ಯಾಪ್ತಿ ಅಚ್ಚುಕಟ್ಟಾದ ರಸ್ತೆಗಳು ನಿರ್ಮಾಣವಾಗಿವೆ.
13,300 ಮತದಾರರಿರುವ ಈ ಪುರಸಭೆ ಒಟ್ಟು 23 ವಾರ್ಡ್‌ಗಳನ್ನು ಹೊಂದಿದೆ. ಇದರ ವ್ಯಾಪ್ತಿಯಲ್ಲಿ ಒಟ್ಟು 16 ಕೊಳವೆ ಬಾವಿಗಳಿವೆ. ಪಕ್ಕಾ ಗಟಾರಗಳ ನಿರ್ಮಾಣ, ಒಳಚರಂಡಿ ಕಾಮಗಾರಿ ಮುಗಿದಿಲ್ಲ. ಪ್ರಸಕ್ತ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ತಮ್ಮ ಸಾಧನೆ ಮುಂದಿಟ್ಟು ಜನರ ಬಳಿಗೆ ತೆರಳಲು ಸಿದ್ಧರಾಗಿದ್ದಾರೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಕಾರ್ಯಗಳನ್ನು ಪ್ರಸ್ತಾಪಿಸಿ ಮತಯಾಚನೆ ತಯಾರಿಯಲ್ಲಿದ್ದಾರೆ ಕಾಂಗ್ರೆಸ್‌ನವರು. ಕೆಜೆಪಿ, ನಿರ್ಗಮಿತ ಬಿಜೆಪಿ ಸದಸ್ಯರನ್ನು ತನ್ನತ್ತ ಸೆಳೆಯುವ ಕಾಯಕದಲ್ಲಿ ತೊಡಗಿದ್ದು, ಶನಿವಾರ ನಾಮಪತ್ರ ಸಲ್ಲಿಕೆ ಮುಗಿದ ಬಳಿಕ ಯಾರಾರು ಎಲ್ಲೆಲ್ಲಿ ಇರುತ್ತಾರೆನ್ನುವುದು ಸ್ಪಷ್ಟವಾಗಲಿದೆ.