ನಾಳೆ ರಾಜ್ಯ ಸರ್ಕಾರ ಪತನ: ಸುರೇಶಗೌಡ
ಬ್ಯಾಡಗಿ: ಅಲ್ಪ ಮತಕ್ಕೆ ಕುಸಿದಿರುವ ಬಿಜೆಪಿ ನೇತೃತ್ವದ ಪ್ರಥಮ ಸರ್ಕಾರ ಫೆ. 25ರಂದು ವಿಸರ್ಜನೆಯಾಗಲಿದೆ ಎಂದು ಮಾಜಿ ಶಾಸಕ ಸುರೇಶಗೌಡ ಭವಿಷ್ಯ ನುಡಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲು ಸಾಲಾಗಿ ಶಾಸಕರು ರಾಜಿನಾಮೆ ನೀಡುವ ಮೂ ಲಕ ಬಿಜೆಪಿ ತೊರೆದು ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರೆ. ಬಿಜೆಪಿ ಮುನ್ನಡೆಸಲು ರಾಜ್ಯದಲ್ಲಿ ನಾಯಕರಿಲ್ಲ. ವಿಚಲಿತರಾದಂತೆ ಕಂಡು ಬಂದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಹತ್ವದ ಬೆಳವಣಿಗೆಯೊಂದರಲ್ಲಿ ಸರ್ಕಾರ ವಿಸರ್ಜಿಸಲು ಮುಂದಾಗಿದ್ದಾಗಿ ತಿಳಿಸಿದರು. ಬಿಎಸ್‌ವೈ ನಾಯಕತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಅಧಿಕಾರ ಬಿಜೆಪಿಗಿನ್ನು ಕೇವಲ ಕನಸು. ರಾಜ್ಯದಲ್ಲಿ ಹೊಸ ರಾಜಕೀಯ ಮನ್ವಂತರ ಆರಂಭವಾಗಿದ್ದು, ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್ ಸಂಸ್ಕೃತಿಯಿಂದ ಬೇಸತ್ತ ರಾಜ್ಯದ ಜನತೆ ರಾಜ್ಯದಲ್ಲಿ ಬಲಿಷ್ಠವಾದ ಪ್ರಾದೇಶಿಕ ಪಕ್ಷವೊಂದರ ಕಲ್ಪನೆಯಲ್ಲಿದ್ದಾರೆ. ಹೀಗಾಗಿ ಬರುವ ದಿನಗಳಲ್ಲಿ ಕೆಜೆಪಿ ಬೆಂಬಲಿಸಲಿದ್ದಾರೆ ಎಂದರು.