ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಿ ಫಾರಂ ಸಿಗದೆ ಪಕ್ಷೇತರರಾದರು

Mainashree
Updated On : 24 Feb 2013, 11:27 am

 ಕಿರಣ ಮಾಸಣಗಿ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ.23
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಅಂತಿಮ ಕ್ಷಣ ಸಮೀಪಿಸುತ್ತಿದೆ. ಇದು ಆಕಾಂಕ್ಷಿಗಳಲ್ಲಿ ಒಂದು ರೀತಿಯ ಆತಂಕ ಹುಟ್ಟು ಹಾಕಲು ಕಾರಣವಾಗಿದೆ. ಅದರಲ್ಲೂ ಹೊಸ ಮುಖಗಳಿಗೆ ನಾಮಪತ್ರ ಸಲ್ಲಿಕೆಯೇ ಒಂದು ಪರೀಕ್ಷೆ ಎದುರಿಸುವಂತಾಗಿದೆ.
ನಾಮಪತ್ರ ಸಲ್ಲಿಕೆ ಮುಗಿಯುತ್ತಿದ್ದಂತೆಯೇ ಪರಿಶೀಲನೆ ಆತಂಕ ಎದುರಿಸಲು ಮನಸ್ಸು ಗಟ್ಟಿಗೊಳಿಸಿಬೇಕಿದೆ. ಇಲ್ಲಿ ತಿರಸ್ಕೃತವಾದರೆ ಮತ್ತೆ 5 ವರ್ಷಗಳೇ ಬೇಕು. ಅಲ್ಲದೇ ಯಾವುದೇ ತಪ್ಪು-ತಡೆಗಳಿಲ್ಲದಂತೆ ನಾಮಪತ್ರ ಸಲ್ಲಿಸಬೇಕು. ಆದರೆ, ಸೂಕ್ತ ಮಾರ್ಗದರ್ಶಕರ ಅಲಭ್ಯತೆ ಅವರಲ್ಲಿನ ಆತಂಕ ಹೆಚ್ಚಿಸಿದೆ. ಇದರೊಂದಿಗೆ ಬಹುತೇಕರು ಪಕ್ಷಗಳಿಗೆ ಜೋತು ಬಿದ್ದಿರುವುದು ಪಕ್ಷಗಳ ಮುಖಂಡರಿಗೆ ತಲೆ ನೋವಾಗಿತ್ತು. ಆದರೆ, ಈಗಾಗಲೇ ಗೆಲ್ಲುವ ಕುದುರೆಗಳಿಗೆ ಕೆಲವು ಪಕ್ಷಗಳು ಮಣೆ ಹಾಕಿರುವುದು ಬಿ ಫಾರಂ ನೀಡಿರುವುದು ಕಾರ್ಯಕರ್ತರಲ್ಲಿ ಒಂದು ರೀತಿಯ ಮುನಿಸಿಗೆ ಕಾರಣವಾಗಿದೆ.
ಕಾರ್ಯಕರ್ತರಲ್ಲಿ ಗೊಂದಲ ಬಹುತೇಕ ರಾಜಕೀಯ ಪಕ್ಷಗಳು ಗೆಲ್ಲುವ ಕುದುರೆಗಳಿಗೆ ಟಿಕೆಟ್ ನೀಡಿರುವುದು ಚುನಾವಣೆಗೆ ಕೊಂಚ ಬಿರುಸು ಮೂಡಿಸಿದಂತಾಗಿದೆ. ಅಲ್ಲದೇ ಆಕಾಂಕ್ಷಿ ಕಾರ್ಯಕರ್ತರಿಗೆ ತಣ್ಣೀರೆರಚಿದಂತಾಗಿದೆ. ಈ ಸಂದಿಗ್ಧ ಸ್ಥಿತಿಯಲ್ಲಿ ನಂಬಿಗೆ ಕಾರ್ಯಕರ್ತರನ್ನು ಓಲೈಸುವ ಯತ್ನಕ್ಕೆ ಮುಂದಾಗಿರುವ ಮುಖಂಡರು ಪಕ್ಷದ ವೇದಿಕೆಯಲ್ಲೇ ಜವಾಬ್ದಾರಿ ನೀಡುವ, ಇಲ್ಲವೇ ನಾಮನಿದೇಶನ ನೀಡುವ ಮೂಲಕ ನಂಬಿಗಸ್ಥರನ್ನು ಕೊಂಚ ಸಮಾಧಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಡೆದ್ದವರು ಪಕ್ಷೇತರಾಗಿ ಸ್ಪರ್ಧೆ ತಮಗೆ ಬಿ ಫಾರಂ ಕೊಡಲೇಬೇಕೆಂದು ಹಠ ಹಿಡಿದವರನ್ನು ಸಮಾಧಾನಿಸುವುದು ಮುಖಂಡರ ಪಾಲಿಗೆ ದುಸ್ತರವಾಗಿದೆ. ಅಲ್ಲದೇ ಆಕಾಂಕ್ಷಿಗಳ ಸಂಖ್ಯೆ ಮಿತಿ ಮೀರಿದಾಗ ಅನಿವಾರ್ಯವಾಗಿ ಗಟ್ಟಿ ನಿರ್ಧಾರ ಕೈಗೊಂಡಲ್ಲಿ ಒಬ್ಬಿಬ್ಬರು ಪಟ್ಟು ಬಿಡದೇ ಬಂಡೇಳುವುದು ಪಕ್ಷೇತರರಾಗಿ ಸ್ಥರ್ಧಿಸುವ ಗಟ್ಟಿ ನಿರ್ಧಾರ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿದೆ. ಇದರಿಂದಾಗಿ ಬೆಂಬಲಿಗರಲ್ಲಿ, ಕಾರ್ಯಕರ್ತರಲ್ಲಿ ತಳಮಳದ ಸ್ಥಿತಿ ಮೂಡಿಸಿದೆ.
ಗೆಲ್ಲುವ ಕುದುರೆಗಳಿಗೆ ಟಿಕೆಟ್
ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿನ ಡೋಲಾಯಮಾನ ಸ್ಥಿತಿ ಎಲ್ಲ ಪಕ್ಷಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದರಿಂದಾಗಿ ಕಾಂಗ್ರೆಸ್, ಬಿಜೆಪಿ, ಕೆಜೆಪಿ, ನಗರ ಸುಧಾರಣಾ ಸಮಿತಿ, ಜೆಡಿಎಸ್ ಹೀಗೆ ಬರುತೇಕ ಎಲ್ಲ ಪಕ್ಷಗಳೂ ಗೆಲ್ಲುವ ಕುದುರೆಗಳಿಗೆ ಟಿಕೆಟ್ ನೀಡಿರುವುದು ಚುನಾವಣೆ ಎಂಬ ಅಗ್ನಿಗೆ ತುಪ್ಪ ಸುರಿದಂತಾಗಿದೆ. ಇದರಿಂದಾಗಿ ಪ್ರತಿ ಅಭ್ಯರ್ಥಿ ಶತಾಯ ಗತಾಯ ಜಯಿಸಲೇಬೇಕೆಂದು ಈಗಾಗಲೇ ತಾವು ಸ್ಫರ್ಧಿಸುವಲ್ಲಿ ಮನೆ ಮನೆಗೆ ಭೇಟಿ ಕಾರ್ಯಕ್ರಮಕ್ಕೆ ನಾಂದಿ ಹಾಡಿದ್ದರೂ ಅದು ಪರಿಶೀಲನೆ ನಂತರ ಅಧಿಕೃತಗೊಳ್ಳಲಿದೆ.
ಹೊಸ ಮುಖಗಳಿಗೆ ಆದ್ಯತೆ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬಹುತೇಕ ಹೊಸ ಮುಖಗಳಿಗೆ ವೇದಿಕೆ ಸೃಷ್ಟಿಸಿದೆ. ಹಿಂದೆ ಆಡಳಿತ ನಡೆಸಿದವರಲ್ಲಿ ಕೇವಲ ಶೇ. 30ರಷ್ಟು ಸದಸ್ಯರು ಮಾತ್ರ ಮತ್ತೆ ಸ್ಫರ್ಧಿಸಲು ಆಸಕ್ತಿ ತೋರಿದರೂ ಪಕ್ಷಗಳು ಅವರಿಗೆ ಸಂಘಟನೆ ಜವಾಬ್ದಾರಿ ನೀಡಿ ಹೊಸಬರಿಗೆ ಅವಕಾಶ ಕಲ್ಬಿಸಿವೆ. ಇದರಿಂದಾಗಿ ಈ ಚುನಾವಣೆ ಶೇ. 50ರಷ್ಟು ಹೊಸ ಮುಖಗಳಿಗೆ ವೇದಿಕೆ ಕಲ್ಪಿಸಿದರೂ ಆಶ್ಚರ್ಯ ಪಡುವಂತಿಲ್ಲ.
ಒಟ್ಟಿನಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪರಿಶೀಲನೆ ಭೂತದಿಂದ ಪಾರಾಗುವ ಚಿಂತನೆಯಲ್ಲಿದ್ದಾರೆ. ಇದು ಪೂರ್ಣಗೊಂಡಲ್ಲಿ ತಾವು ಗೆದ್ದಂತೆ ಎಂಬ ಆತ್ಮವಿಶ್ವಾಸ ಅಭ್ಯರ್ಥಿಗಳಲ್ಲಿ ಮನೆ ಮಾಡಿದೆ. ಒಟ್ಟಿನಲ್ಲಿ ಮತದಾರ ಪ್ರಭುವಿನ ಚಿತ್ತ ಯಾರತ್ತ ಎಂಬುದು ಮುಂದಿನ ದಿನಗಳಲ್ಲಿ ಅನಾವರಣಗೊಳ್ಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement