28ರಂದು ತಾಪಂ ಸಭೆ (ಸುದ್ದಿ ಸಂಕ್ಷೇಪ)
ಹಾವೇರಿ: ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಫೆ. 28ರಂದು ಬೆಳಗ್ಗೆ 11ಗಂಟೆಗೆ ತಾಪಂ ಸಭಾಂಗಣದಲ್ಲಿ ಜರುಗಲಿದೆ. ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ಮೆಹರುನ್ನಿಸಾ ಜಿಗಳೂರ ವಹಿಸುವರು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣೆ: ಕಾರ್ಯಕ್ರಮ ರದ್ದು
ಹಾವೇರಿ: ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಅಂಗವಾಗಿ ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳ ಕೇಂದ್ರಗಳಲ್ಲಿ ಮಾ. 7ರಂದು ಮತದಾನ ನಡೆಯಲಿದೆ. ಮಾ. 11ರಂದು ಮತ ಎಣಿಕೆ ನಡೆಯಲಿದೆ. ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಮಾ. 7ರಂದು ಹಾವೇರಿ ಹಾಗೂ ಮಾ. 11ರಂದು ಹಿರೇಕೆರೂರು ಸಂತೆ ಮತ್ತು ಶಿಗ್ಗಾಂವಿ ಜಾತ್ರೆಯನ್ನು ಮುಂದೂಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಚ್.ಜಿ. ಶ್ರೀವರ ಆದೇಶ ಹೊರಡಿಸಿದ್ದಾರೆ.
ಶಿವಯೋಗಿ ಶ್ರೀ ಪುಟ್ಟಯ್ಯಜ್ಜ ಚಿತ್ರೀಕರಣ ಆರಂಭ
ಹೊಳೆಆಲೂರು: ಲಕ್ಷ್ಮೀ ಮುಕುಂದ ನವಲೆ, ಶೋಭಾ ಅಶೋಕ ಬೆಳಮಕರ ಅರ್ಪಿಸಿ, ಶ್ಯಾಮ ಮುಕುಂದ ನವಲೆ ನಿರ್ಮಾಣದ ತುಳಜಾಭವಾನಿ ಕಂಬೈನ್ಸ್ ಅವರ ಅಂಧರ ಬಾಳಿಗೆ ಬೆಳಕಾದ, ಕಲಾವಿದರಿಗೆ ದೇವರಾದ ಗದುಗಿನ ಲಿಂ. ಪಂ.ಪುಟ್ಟರಾಜ ಗವಾಯಿಗಳ ಕುರಿತಾದ 'ಶಿವಯೋಗಿ ಶ್ರೀ ಪುಟ್ಟಯ್ಯಜ್ಜ' ಭಕ್ತಿ ಪ್ರಧಾನ ಚಿತ್ರದ ಚಿತ್ರೀಕರಣ ಶನಿವಾರದಿಂದ ಹೊಳೆಆಲೂರನಲ್ಲಿ ಭರದಿಂದ ಸಾಗಿದೆ. ಫೆ. 17ರಂದು ಶಿವಯೋಗ ಮಂದಿರದಲ್ಲಿ ಪಂಚಶ್ರೀಗಳ ಸಮ್ಮುಖದಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು. ಕೋಟೆಕಲ್ಲ, ಕಮತಗಿ, ಮಹಾಕೂಟ, ನೆಲವಿಗಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಸದ್ಯ ಹೊಳೆಆಲೂರಿನ ಶಿವಪಾರ್ವತಿ ಮಾಂಗಲ್ಯಮಂದಿರ, ಮಲಪ್ರಭಾ ನದಿತೀರ, ಕಲ್ಮೇಶ್ವರ ಶಾಲೆಯ ವಸತಿ ನಿಲಯ, ಶಾಲಾ ಕೋಣೆ, ಯಚ್ಚರೇಶ್ವರ ಮಠ, ಯಚ್ಚರಸ್ವಾಮಿಗಳ ಮನೆಯಲ್ಲಿ ಹಲವು ದೃಶ್ಯಗಳ ಚಿತ್ರೀಕರಣ ಆಗಿದೆ. ಭಾನುವಾರ ಕೂಡ ಪುಟ್ಟಯ್ಯಜ್ಜನವರು ಭಕ್ತರನ್ನು ಭೇಟಿ ಮಾಡುವುದು, ಕೋಣೆಯಲ್ಲಿ ಕುಳಿತು ಶಿಷ್ಯರೊಂದಿಗೆ ಸಂಭಾಷಣೆ ನಡೆಸುವ ದೃಶ್ಯಗಳನ್ನು ಚಿತ್ರೀಕರಿಸಲಾಯಿತು. ನಿರ್ದೇಶಕಿ ಹಂಸವಿಜೇತ ಮಾತನಾಡಿ, ಒಟ್ಟು 7 ಹಾಡುಗಳು ಚಿತ್ರದಲ್ಲಿದ್ದು, ಒಂದನ್ನು ಮಹಾಕೂಟದ ಪರಿಸರದಲ್ಲಿ ಚಿತ್ರೀಕರಿಸಲಾಗಿದೆ. ಉಳಿದ ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ. ಖ್ಯಾತ ಕಲಾವಿದೆ ಶೃತಿ ಪುಟ್ಟಯ್ಯಜ್ಜನ ತಾಯಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಾಲಪುಟ್ಟಯ್ಯ ಪಾತ್ರದಲ್ಲಿ ಮಾ. ಶ್ರೀನಿವಾಸ, ಯುವ ಪುಟ್ಟಯ್ಯನ ಪಾತ್ರದಲ್ಲಿ ವಿಜಯ ರಾಘವೇಂದ್ರ, ಪುಟ್ಟರಾಜರ ಪಾತ್ರದಲ್ಲಿ ಲಡ್ಡು ಮುತ್ಯಾ ಖ್ಯಾತಿಯ ಉಮೇಶ ಪುರಾಣಿಕ, ಅಭಿಜಿತ್, ಶಂಕರಲಿಂಗ ಸುಗ್ನಳ್ಳಿ, ಕಲಾರಸಿಕ ಮಿತ್ರಮಂಡಳಿ ನಾಟಕ ಕಲಾವಿದರು, ಉ.ಕ. 120ಕ್ಕೂ ಮಿಕ್ಕಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಸತೀಶ್ ಛಾಯಾಗ್ರಹಣವಿದ್ದು, ಜೋನಿ ಹರ್ಷಾರ ಸಂಕಲನ, ಅಮರಪ್ರಿಯರ ಸಂಗೀತವಿದೆ ಎಂದರು.